ಚೆನ್ನೈ: ಕುಡಿದ ಅಮಲಿನಲ್ಲಿ ಗೆಳೆಯರು ಜಗಳವಾಡುವಾಗ 25 ವರ್ಷದ ಯುವಕನ ತಲೆ ಕತ್ತರಿಸಲಾಗಿದೆ. ಆ ಯುವಕನನ್ನು ಹತ್ಯೆ (Murder) ಮಾಡಿ, ಆತನ ಸ್ನೇಹಿತನಿಗೆ ಥಳಿಸಿದ ಆರೋಪದ ಮೇಲೆ 7 ಜನರನ್ನು ಬಂಧಿಸಿರುವ ಘಟನೆ ತಮಿಳುನಾಡಿನ ತಿರುಪ್ಪೂರ್ ಬಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಮೈಲಾಡುತುರೈ ನಿವಾಸಿ ಎಂ. ಸತೀಶ್ ಎಂದು ಗುರುತಿಸಲಾಗಿದ್ದು, ಆತ ಸೆರಂಗಡು ಬಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪೊಲೀಸರ ಪ್ರಕಾರ, ಭಾನುವಾರ ಕಚೇರಿಗೆ ರಜೆ ಇದ್ದುದರಿಂದ ಆತ ತನ್ನ ಸ್ನೇಹಿತ ರಂಜಿತ್ (20) ಜೊತೆ ಏಕಾಂತ ಪ್ರದೇಶದಲ್ಲಿ ಮದ್ಯ ಸೇವಿಸುತ್ತಿದ್ದ.
ಆ ವೇಳೆ ಕ್ಷುಲ್ಲಕ ವಿಷಯಕ್ಕೆ ಅವರಿಬ್ಬರು ಮತ್ತು ಏಳು ಜನರ ಗ್ಯಾಂಗ್ ನಡುವೆ ವಾಗ್ವಾದ ನಡೆಯಿತು. ಅಲ್ಲಿದ್ದ ಏಳೂ ಮಂದಿ ಮದ್ಯದ ಅಮಲಿನಲ್ಲಿದ್ದು, ಸತೀಶ್ ಮತ್ತು ರಂಜಿತ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಸತೀಶನ ತಲೆ ಕತ್ತರಿಸಲಾಗಿದ್ದು, ರಂಜಿತ್ ಗಂಭೀರವಾಗಿ ಗಾಯಗೊಂಡು ಆ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಅದೇ ಸ್ಥಿತಿಯಲ್ಲಿ ಆತ ಓಡಿಹೋಗಿ ನಲ್ಲೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ವರದಿಗಳ ಪ್ರಕಾರ, ಮೊದಲು ಸತೀಶ್ಗೂ ಗಾಯಗಳಾಗಿತ್ತು. ಆಗ ರಂಜಿತ್ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ದರಿಂದ ಆ 7 ಜನರ ಗ್ಯಾಂಗ್ ಸತೀಶನ ಮೊಬೈಲ್‌ನಿಂದ ರಂಜಿತ್‌ಗೆ ಕರೆ ಮಾಡಿ ಆ ಸ್ಥಳಕ್ಕೆ ಬರುವಂತೆ ಹೇಳಿದ್ದರು. ಒಂದುವೇಳೆ ಆತ ವಾಪಾಸ್ ಬರದಿದ್ದರೆ ಸತೀಶ್‌ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಪ್ರಾಣಭಯದಿಂದ ರಂಜಿತ್ ಅಲ್ಲಿಗೆ ವಾಪಾಸ್ ಹೋಗದೆ ಪೊಲೀಸ್ ಠಾಣೆಗೆ ಹೋಗಿದ್ದ. ಇದರಿಂದ ಕೋಪಗೊಂಡ ಆ ಯುವಕರ ಗುಂಪು ಸತೀಶನ ಶಿರಚ್ಛೇದ ಮಾಡಿದೆ.
ರಂಜಿತ್ ನೀಡಿದ ಮಾಹಿತಿಯ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಲ್ಲಿ ಸತೀಶನ ತಲೆಯಿಲ್ಲದ ಶವ ಬಿದ್ದಿರುವುದನ್ನು ನೋಡಿದ್ದಾರೆ. ಆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪ್ಪೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಗಾಯಗೊಂಡಿದ್ದ ರಂಜಿತ್ ಕೂಡ ಅದೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಸ್ಪಿ ಎ ಜಿ ಬಾಬು ಅವರ ನಿರ್ದೇಶನದ ಮೇರೆಗೆ ಆರೋಪಿಗಳ ಬಂಧನಕ್ಕೆ 4 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ವರದಿಗಳ ಪ್ರಕಾರ, ಪೊಲೀಸರು ಇಂದು ಎಂಎಸ್ ನಗರದ ಬಳಿ ಕಸದ ರಾಶಿಯಲ್ಲಿ ಸತೀಶನ ತಲೆಯನ್ನು ಪತ್ತೆಹಚ್ಚಿದ್ದಾರೆ. ಹಾಗೇ, 7 ಮಂದಿ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.
ಇದನ್ನೂ ಓದಿ: Murder: ಮಗನ ಜೊತೆ ಸೇರಿ ಗಂಡನನ್ನೇ ಕೊಂದು 7ನೇ ಮಹಡಿಯಿಂದ ಎಸೆದ ಮಹಿಳೆ!
Murder: ಗೆಳೆಯನನ್ನು ಕೊಂದು, ರೈಲಿನ ಕೆಳಗೆ ಹಾಕಿ ಅಪಘಾತವೆಂದು ಕತೆ ಕಟ್ಟಿದ ಯುವಕ!