ಮುಂಬೈ: ಅತ್ತೆ ಸೊಸೆಯರ ಜಗಳ ಬಹುತೇಕರ ಮನೆಯಲ್ಲೂ ಇದ್ದದ್ದೆ. ಆದ್ರೆ ಮುಂಬೈನಲ್ಲಿ ಮಾತ್ರ ಇದು ವಿಕೋಪಕ್ಕೆ ತಿರುಗಿದೆ. ಪರಿಣಾಮ ಸಿಟ್ಟಿನ ಕೈಗೆ ಬುದ್ದಿ ಕೊಟ್ಟ ಸೊಸೆ, ಅತ್ತೆಯನ್ನ ಕುತ್ತಿಗೆ ಹಿಚುಕಿ ಕೊಲೆ ಮಾಡಿ ಕಂಬಿ ಹಿಂದೆ ಹೋಗಿದ್ದಾಳೆ.
ಹೌದು ಮುಂಬೈ ಮಹಾನಗರದಲ್ಲಿ ಕ್ರೈಮ್‌ಗಳಿಗೇನೂ ಬರವಿಲ್ಲ. ಆದ್ರೆ ಈ ಕೊಲೆ ಮಾತ್ರ ಕೊಂಚ ಭಿನ್ನವಾಗಿದೆ. ಮುಂಬೈನ ಚೆಂಬೂರ್ ಸಮೀಪದ ಪೆಸ್ತುಮ್ ಸಾಗರ್ ಕಾಲೋನಿಯ ನಿವಾಸಿ 70 ವರ್ಷದ ಸಂಜನಾ ಪಾಟೀಲ್ ಎಂಬ ವೃದ್ಧೆ ಕೊಲೆಗೀಡಾದ ದುರ್ದೈವಿ. ಈಕೆಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಗಂಡನ ಸಹೋದರನ ಮಗನನ್ನು ದತ್ತು ಪಡೆದಿದ್ದಳು. ಆತನಿಗೆ ಮದುವೆಯನ್ನೂ ಮಾಡಿ ಮನೆಯಲ್ಲಿಯೇ ಇಟ್ಟುಕೊಂಡಿದ್ದಳು.
ನಾಲ್ಕು ಫ್ಲಾಟ್‌ಗಳಿದ್ದರೂ ಭಿಕ್ಷೆ ಬೇಡುತ್ತಿದ್ದ ಅತ್ತೆ
ಈ ಸಂಜನಾ ಪಾಟೀಲ್‌ಗೆ ಮುಂಬೈನ ಚೆಂಬೂರ್‌ನಲ್ಲಿ ಎರಡು ಮತ್ತು ವೊರ್ಲಿಯಲ್ಲಿ ಎರಡು ಫ್ಲಾಟ್‌ಗಳಿವೆ. ಇವುಗಳಲ್ಲಿ ಮೂರು ಫ್ಲಾಟ್‌ಗಳನ್ನು ಬಾಡಿಗೆಗೆ ನೀಡಿ ಒಂದರಲ್ಲಿ ತಾನು ಮತ್ತು ದತ್ತುಮಗನ ಸಂಸಾರದೊಂದಿಗೆ ವಾಸವಾಗಿದ್ದಳು. ಆದ್ರೂ ಈ ವೃದ್ಧೆ ಸಮೀಪದ ಜೈನ್ ದೇವಸ್ಥಾನದ ಹತ್ತಿರ ಭಿಕ್ಷೆ ಬೇಡುತ್ತಿದ್ದಳು ಎನ್ನಲಾಗಿದೆ. ಹೀಗೆ ಬಾಡಿಗೆಯಿಂದ ಬಂದ ಹಣ ಮತ್ತು ಭಿಕ್ಷೆಯಿಂದ ಬಂದ ಹಣವನ್ನು ಯಾರಿಗೂ ಕೊಡದೇ ಮನೆಯಲ್ಲಿ ಬಚ್ಚಿಡುತ್ತಿದ್ದಳು ಎಂದು ತಿಳಿದು ಬಂದಿದೆ.
ಸಾಯೋವರೆಗೂ ಬ್ಯಾಟ್‌ನಿಂದ ಹೊಡೆತ
ಇಷ್ಟೆಲ್ಲಾ ಇದ್ರೂ ಈ ಮುದುಕಿ, ಸೊಸೆಯ ಹತ್ತಿರ ಹಣ ಕೇಳುತ್ತಿದ್ದಳು ಎನ್ನಲಾಗಿದೆ. ಆದರೆ ಸೋಮವಾರ ಮೂರು ಗಂಟೆಯ ಸುಮಾರಿಗೆ ಹಣದ ವಿಷಯಕ್ಕೆ ಸಂಬಂಧಿಸಿದಂತೆ ಅತ್ತೆ ಸಂಜನಾ ಮತ್ತು ಸೊಸೆ ಅಂಜನಾ ನಡುವೆ ಜಗಳ ಶುರುವಾಗಿದೆ. ನಂತರ ವಿಕೋಪಕ್ಕೆ ತಿರುಗಿ, ಸೊಸೆ ಬ್ಯಾಟ್‌ನಿಂದ ಅತ್ತೆಯನ್ನ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ನಂತರ ಮೊಬೈಲ್ ಚಾರ್ಜಿಂಗ್ ವೈರ್‌ನಿಂದ ಅತ್ತೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.
ಗಾಯ ನೋಡಿ ದಂಗಾದ ವೈದ್ಯರು
ಕೊಲೆ ಮಾಡಿದ ನಂತರ ಮೃತ ದೇಹವನ್ನ ಸಮೀಪದ ರಾಜವಾಡಿ ಆಸ್ಪತ್ರೆಗೆ ಸಾಗಿಸಿದ ಸೊಸೆ, ಅತ್ತೆ ಬಾತ್ ರೂಮ್‌ನಲ್ಲಿ ಬಿದ್ದು ಗಾಯಗೊಂಡಿದ್ದಾಳೆ ಎಂದು ಹೇಳಿದ್ದಾಳೆ. ಆದ್ರೆ ದೇಹದ ಮೇಲಿನ ಗಾಯದ ಕಲೆ ಮತ್ತು ಕುತ್ತಿಗೆ ಸುತ್ತ ಆದ ಗಾಯ ನೋಡಿದ ವೈದ್ಯರು, ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ವಿಚಾರಣೆ ಆರಂಭಿಸಿದ ಪೊಲೀಸರಿಗೆ ತನಿಖೆ ವೇಳೆ ಸೊಸೆ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಆಕೆಯ ಚಿಕ್ಕ ಮಗಳನ್ನ ಪೊಲೀಸರು ವಿಚಾರಿಸಿದಾಗ ಅತ್ತೆ-ಸೊಸೆಯ ಜಗಳದ ಬಗ್ಗೆ ಗೊತ್ತಾಗಿದೆ.
ದುರಾಸೆಗೆ ಬಿದ್ದು ಜೈಲು ಪಾಲಾದ ಸೊಸೆ
ಅಷ್ಟೆ, ಪೊಲೀಸರು ಸೊಸೆಯನ್ನ ಕಂಬಿ ಹಿಂದೆ ಹಾಕಿ ಇಂಟರಾಗೇಶನ್ ಮಾಡಿದ್ದಾರೆ. ಯಾವಾಗ ಲಾಕಪ್ ಹಿಂದೆ ಹೋದಳೋ ಸೊಸೆ ನಡೆದ ಘಟನೆಯನ್ನಲ್ಲಾ ಬಾಯಿ ಬಿಟ್ಟಿದ್ದಾಳೆ. ನಾಲ್ಕು ಫ್ಲಾಟ್‌ಗಳನ್ನು ತನ್ನ ಹೆಸರಿಗೆ ಮಾಡು ಅಂತಾ ಅತ್ತೆಗೆ ಏಷ್ಟು ಕೇಳಿಕೊಂಡರೂ ತನ್ನ ಹೆಸರಿಗೆ ಮಾಡಲಿಲ್ಲ. ಜೊತೆಗೆ ಹಣಕ್ಕಾಗಿ ಆಗಾಗ ಜಗಳವಾಗತ್ತಿತ್ತು ಎಂದು ಬಾಯಿ ಬಿಟ್ಟಿದ್ದಾಳೆ. ಆದರೆ ಏನು ಬಂತು ದುರಾಸೆಗೆ ಬಿದ್ದು ಅತ್ತೆಯ ಕೊಲೆ ಮಾಡಿದ್ದಕ್ಕೆ ಈಗ ಕಂಬಿ ಹಿಂದೆ ಹೋಗಿದ್ದಾಳೆ. ಮನೆಯಲ್ಲಿ ಗಂಡ ಮತ್ತು ಮಕ್ಕಳು ಅನಾಥರಾಗಿದ್ದಾರೆ.
Published On - 6:01 pm, Fri, 17 July 20