ನವದೆಹಲಿ: ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿಯನ್ನು ಕೊಂದು (Murder), ಅವರ ಮನೆಯ ಫ್ರಿಡ್ಜ್‌ನಲ್ಲಿ ಶವವನ್ನು ಇಡಲಾಗಿತ್ತು. ಮೃತಪಟ್ಟ ವ್ಯಕ್ತಿಯನ್ನು ದೆಹಲಿಯ ಗೌತಮಪುರಿಯಲ್ಲಿ ವಾಸವಾಗಿದ್ದ ಜಾಕಿರ್ (50) ಎಂದು ಗುರುತಿಸಲಾಗಿದೆ. ಹಲವು ದಿನಗಳಿಂದ ಜಾಕಿರ್ಗೆ ಅವರ ಸಂಬಂಧಿಕರು ಫೋನ್ ಮಾಡಿದರೂ ಅವರು ಕರೆಯನ್ನು ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಅವರು ಜಾಕಿರ್ ಅವರ ಮನೆಗೆ ಹೋಗಿ ನೋಡಿದ್ದರು. ಇಡೀ ಮನೆ ಹುಡುಕಾಡಿದರೂ ಅವರಿಗೆ ಯಾರೂ ಕಂಡಿರಲಿಲ್ಲ. ಬಳಿಕ ರೂಮಿನ ಕಪಾಟು, ಬಾತ್ರೂಂ ಎಲ್ಲ ಹುಡುಕಾಡಿ ಅಡುಗೆಮನೆಯ ಫ್ರಿಡ್ಜ್ ಓಪನ್ ಮಾಡಿದಾಗ ಅದರೊಳಗೆ ಜಾಕಿರ್ ಶವವನ್ನು ಇಡಲಾಗಿತ್ತು.
ಫ್ರಿಡ್ಜ್‌ನಲ್ಲಿ ಶವ ನೋಡಿ ಗಾಬರಿಯಾದ ಸಂಬಂಧಿಕರು ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಶವವನ್ನು ರೆಫ್ರಿಜರೇಟರ್‌ನಲ್ಲಿ ತುಂಬಿಟ್ಟಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಪರಾಧ ತನಿಖೆ ಮತ್ತು ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ತಂಡಗಳನ್ನು ಅಪರಾಧದ ಸ್ಥಳದ ಪರಿಶೀಲನೆಗೆ ಕರೆಯಲಾಯಿತು.
ಇದನ್ನೂ ಓದಿ: Shocking News: ಮಕ್ಕಳ ಮುಂದೆಯೇ ಪತ್ನಿಯನ್ನು ಕಡಾಯಿಯಲ್ಲಿ ಹಾಕಿ ಬೇಯಿಸಿ ಕೊಂದ ಕ್ರೂರ ಪತಿ
ಜಾಕಿರ್ ಮನೆಯಲ್ಲಿ ಒಬ್ಬರೇ ವಾಸವಿದ್ದು, ಅವರ ಪತ್ನಿ ಮತ್ತು ಮಕ್ಕಳು ಬೇರೆ ಕಡೆ ವಾಸಿಸುತ್ತಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಕೊಲೆ ಆರೋಪಿಯ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಜಾಕಿರ್ ಅವರನ್ನು ಆಸ್ತಿ ಸಂಬಂಧಿತ ವಿವಾದದಿಂದ ಅವರ ಸಂಬಂಧಿಕರೊಬ್ಬರು ಥಳಿಸಿದ್ದಾರೆ. ಆಗ ಜಾಕಿರ್ ಅವರ ತಲೆಗೆ ಪೆಟ್ಟು ಬಿದ್ದು, ಸಾವನ್ನಪ್ಪಿದ್ದಾರೆ. ನಂತರ ಅವರು ಆ ಶವವನ್ನು ಫ್ರಿಡ್ಜ್‌ನಲ್ಲಿ ಅಡಗಿಸಿಟ್ಟು, ಪರಾರಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.