ದೆಹಲಿ ಸೆಪ್ಟೆಂಬರ್ 07: ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ 45 ವರ್ಷದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಕಾರು ಅವರನ್ನು 10 ಮೀಟರ್ ವರೆಗೆ ಎಳೆದೊಯ್ದ ಘಟನೆ ಸೆಪ್ಟೆಂಬರ್ 4 ರಂದು ನಡೆದಿದೆ. ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯ ನಂತರ ಕಾರಿನ ಚಾಲಕ ಶಿವಂ ದುಬೆ ಸ್ಥಳದಿಂದ ಪರಾರಿಯಾಗಿದ್ದ. ಮರುದಿನ ಆತನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಪೊಲೀಸರ ಪ್ರಕಾರ, ಮಧ್ಯಪ್ರದೇಶ ಮೂಲದ ದುಬೆ, ದಕ್ಷಿಣ ದೆಹಲಿಯ ಮಹಿಪಾಲ್‌ಪುರದಲ್ಲಿರುವ ಸ್ನೇಹಿತರೊಬ್ಬರಿಂದ ಕಾನ್ನಾಟ್ ಪ್ಲೇಸ್‌ನಲ್ಲಿರುವವರನ್ನು ಭೇಟಿಯಾಗಲು ಕಾರನ್ನು ಎರವಲು ಪಡೆದಿದ್ದರು.
ಬುಧವಾರ ಮಧ್ಯಾಹ್ನ 3.25ರ ಸುಮಾರಿಗೆ ದುಬೆ ಹಿಂತಿರುಗುತ್ತಿದ್ದಾಗ ಕನ್ನಾಟ್ ಪ್ಲೇಸ್‌ನ ಹೊರ ವೃತ್ತದ ಬಾರಾಖಂಬಾ ರೇಡಿಯಲ್ ರಸ್ತೆಯ ಬಳಿ ರಸ್ತೆ ದಾಟುತ್ತಿದ್ದ ನಿರ್ಗತಿಕನಾದ ಲೇಖ್‌ರಾಜ್ ಎಂಬಾತನಿಗೆ ಡಿಕ್ಕಿ ಹೊಡೆದಿದ್ದಾನೆ. ಲೇಖ್‌ರಾಜ್ ಕಾರಿನ ಚಕ್ರಗಳ ಅಡಿಯಲ್ಲಿ ಸಿಲುಕಿಕೊಂಡರೂ ದುಬೆ ವಾಹನವನ್ನು ಚಾಲನೆ ಮಾಡುತ್ತಲೇ ಇದ್ದ ಎಂದು ಆರೋಪಿಸಲಾಗಿದೆ.
ಸುಮಾರು 10 ಮೀಟರ್ ಎಳೆದ ನಂತರ, ದುಬೆ ಸ್ಥಳದಿಂದ ಪರಾರಿಯಾಗಿದ್ದಾನೆ. 45 ವರ್ಷದ ವ್ಯಕ್ತಿ ರಸ್ತೆಯಲ್ಲೇ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಘಟನೆಯ ನಂತರ ದುಬೆ ಕಾರನ್ನು ಮತ್ತೆ ತನ್ನ ಸ್ನೇಹಿತರಿಗೆ ವಾಪಸ್ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಕಾರು ಮತ್ತು ಅದರ ಮಾಲೀಕರನ್ನು ಪತ್ತೆಹಚ್ಚಿದರು. ತರುವಾಯ, ದುಬೆ ಅವರನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಪಘಾತ ಮಾಡಿದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವ್ಯಾಪಾರಿಯ ಸ್ಕೂಟರ್‌ಗೆ ಡಿಕ್ಕಿ ಹೊಡೆದು 8.5 ಲಕ್ಷ ರೂ. ದೋಚಿ ಪರಾರಿಯಾದ ಖದೀಮರು; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ
ಈ ವರ್ಷದ ಮೇ 15 ರ ಹೊತ್ತಿಗೆ, ರಾಷ್ಟ್ರ ರಾಜಧಾನಿಯಲ್ಲಿ 511 ಮಾರಣಾಂತಿಕ ಅಪಘಾತಗಳಲ್ಲಿ 518 ಜನರು ಸಾವಿಗೀಡಾಗಿದ್ದಾರೆ ಎಂದು ದೆಹಲಿ ಪೊಲೀಸರು ಹಂಚಿಕೊಂಡಿದ್ದಾರೆ. ಆದಾಗ್ಯೂ, ಈ ಅಂಕಿ ಅಂಶವು ಕಳೆದ ವರ್ಷ ಇದೇ ಅವಧಿಯಲ್ಲಿ 544 ಅಪಘಾತಗಳಿಂದ 552 ಸಾವುಗಳಿಂದ ಕಡಿಮೆಯಾಗಿದೆ. ರಿಂಗ್ ರೋಡ್, ಔಟರ್ ರಿಂಗ್ ರೋಡ್ ಮತ್ತು ಜಿಟಿ ಕರ್ನಾಲ್ ರಸ್ತೆಗಳಲ್ಲಿ ಹೆಚ್ಚಿನ ಮಾರಣಾಂತಿಕ ಅಪಘಾತಗಳು ಸಂಭವಿಸಿವೆ ಎಂದು ಪೊಲೀಸ್ ಅಂಕಿಅಂಶಗಳು ತಿಳಿಸಿವೆ.
ವಿಶೇಷವಾಗಿ ರಾತ್ರಿಯಲ್ಲಿ ಹೆಚ್ಚಿನ ಅಪಘಾತಗಳು ಮದ್ಯಪಾನ ಮತ್ತು ಅತಿವೇಗದ ಕಾರಣದಿಂದ ಸಂಭವಿಸುತ್ತವೆ ಎಂದು ಹೆಸರು ಹೇಳಲು ಬಯಸದ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Sat, 7 September 24