ಆತ್ಮಹತ್ಯೆಗೆ ಪ್ರಯತ್ನಿಸಿದ ಎಂಬಿಎ ವಿದ್ಯಾರ್ಥಿ; ನಗ್ನ ವಿಡಿಯೋ ಹುಟ್ಟಿಸಿದ ಭಯವೇ ಕಾರಣ !

ಎಂಬಿಎ ವಿದ್ಯಾರ್ಥಿ ಸ್ಥಳೀಯ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಲು ಹೋದರೆ, ಅಲ್ಲಿನ ಕಾನ್​ಸ್ಟೆಬಲ್​ವೊಬ್ಬರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ.  ದೂರು ಪಡೆಯುವುದನ್ನು ಬಿಟ್ಟು, ವಿದ್ಯಾರ್ಥಿಯನ್ನೇ ನಿಂದಿಸಿದ್ದಾರೆ.

ಆತ್ಮಹತ್ಯೆಗೆ ಪ್ರಯತ್ನಿಸಿದ ಎಂಬಿಎ ವಿದ್ಯಾರ್ಥಿ; ನಗ್ನ ವಿಡಿಯೋ ಹುಟ್ಟಿಸಿದ ಭಯವೇ ಕಾರಣ !
ಪ್ರಾತಿನಿಧಿಕ ಚಿತ್ರ
Edited By:

Updated on: Feb 08, 2022 | 6:10 PM

ದೆಹಲಿಯಲ್ಲಿ ನಿನ್ನೆ ಎಂಬಿಎ ವಿದ್ಯಾರ್ಥಿಯೊಬ್ಬ ಪಿನಾಯ್ಲ್​ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ. ಅಸ್ವಸ್ಥನಾಗಿ ಬಿದ್ದಿದ್ದ ಅವನನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಈ ಎಂಬಿಎ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸುವುದರ ಹಿಂದೆ ಇದ್ದ ಕಾರಣ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಕೆಲ ದಿನಗಳ ಹಿಂದೆ ಈತನನ್ನು ವ್ಯಕ್ತಿಯೊಬ್ಬ ಅಪಹರಣ ಮಾಡಿದ್ದ. ಅಷ್ಟೇ ಅಲ್ಲ, ಈತನಿಗೆ ಗನ್​ ತೋರಿಸಿ ಹೆದರಿಸಿ ನಗ್ನ ವಿಡಿಯೋ ಚಿತ್ರೀಕರಿಸಿದ್ದ. ಆ ವಿಡಿಯೋವನ್ನಿಟ್ಟುಕೊಂಡು ಸದಾ ಈ ವಿದ್ಯಾರ್ಥಿಯನ್ನು ಬೆದರಿಸುತ್ತಿದ್ದ.  ಅವಮಾನಿಸುತ್ತಿದ್ದ ಮತ್ತು ವಿಡಿಯೋವನ್ನು ವೈರಲ್​ ಮಾಡುವುದಾಗಿ ಹೇಳುತ್ತಿದ್ದ. ಇದೇ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಪ್ರಕರಣದ ಸಂಬಂಧಪಟ್ಟು ಪೊಲೀಸರು ಒಬ್ಬಾತನನ್ನು ಬಂಧಿಸಿದ್ದು, ಇನ್ನಿಬ್ಬರ ಕೈವಾಡ ಇರುವುದು ಗೊತ್ತಾಗಿದೆ. 

ಒಟ್ಟು ಮೂವರು ಸೇರಿ ಯೋಜನೆ ರೂಪಿಸಿದ್ದರು. ಅದಂತೆ ಇದೀಗ ಬಂಧಿತನಾಗಿರುವ ವ್ಯಕ್ತಿ ಎಂಬಿಎ ವಿದ್ಯಾರ್ಥಿಯೊಂದಿಗೆ ಸ್ನೇಹ ಬೆಳೆಸಿದ್ದ. ಆತನೊಂದಿಗೆ ಚೆನ್ನಾಗಿಯೇ ಇದ್ದುಕೊಂಡು 2020ರ ಅಕ್ಟೋಬರ್ 23ರಂದು ಕಿಡ್ನ್ಯಾಪ್​ ಮಾಡಿದ್ದ. ನಂತರ ವಿದ್ಯಾರ್ಥಿಯನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಆತನ ಬಟ್ಟೆಗಳನ್ನೆಲ್ಲ ಬಿಚ್ಚಿ, ನಗ್ನವಾಗಿಸಿದ್ದ. ನಂತರ ಪಿಸ್ತೋಲ್​ ತೋರಿಸಿ, ಬೆತ್ತಲೆ ದೇಹವನ್ನು ಚಿತ್ರೀಕರಿಸಿದ್ದ. ಅಷ್ಟೇ ಅಲ್ಲ, ಆತ ಗಾಂಜಾ, ಚರಸ್​ಗಳನ್ನು ಕೈಯಲ್ಲಿ ಹಿಡಿಯುವಂತೆ ಮಾಡಿ ಅದನ್ನೂ ಚಿತ್ರೀಕರಿಸಿದ್ದರು. ಬಳಿಕ ಆ ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿ ವಿದ್ಯಾರ್ಥಿಯಿಂದ 20 ಲಕ್ಷ ರೂಪಾಯಿ ಪಡೆದಿದ್ದರು. ಅಲ್ಲಿಂದ ಇಲ್ಲಿಯವರೆಗೂ ವಿದ್ಯಾರ್ಥಿಯನ್ನು ಬ್ಯ್ಲಾಕ್​ ಮೇಲ್​ ಮಾಡುತ್ತಲೇ ಇದ್ದರು.

ಇತ್ತೀಚೆಗೆ ಮತ್ತೆ ಅಂದರೆ ಫೆ.1ರಂದು ಮತ್ತೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಹಣವನ್ನು ಕೊಡದೆ ಇದ್ದರೆ, ವಿದ್ಯಾರ್ಥಿಯನ್ನು ಕೊಲ್ಲುವುದಾಗಿಯೂ ಹೇಳಿದ್ದಾರೆ. ಆಗ ಎಂಬಿಎ ವಿದ್ಯಾರ್ಥಿ ಸ್ಥಳೀಯ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಲು ಹೋದರೆ, ಅಲ್ಲಿನ ಕಾನ್​ಸ್ಟೆಬಲ್​ವೊಬ್ಬರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ.  ದೂರು ಪಡೆಯುವುದನ್ನು ಬಿಟ್ಟು, ವಿದ್ಯಾರ್ಥಿಯನ್ನೇ ನಿಂದಿಸಿದ್ದಾರೆ. ಇದರಿಂದ ಬೇಸತ್ತ ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಕುಟುಂಬದವರೇ ಹಿರಿಯ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: ಗಡಿ ಗ್ರಾಮಗಳಲ್ಲಿ ವ್ಯವಸ್ಥೆ ಹೆಚ್ಚಿಸುತ್ತಿರುವ ಚೀನಾ ಪೀಪಲ್ಸ್​ ಲಿಬರೇಶನ್​ ಆರ್ಮಿ; ಅಡುಗೆಯವರು, ವೈದ್ಯರ ನೇಮಕ !