ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ವಿರೇನ್ ಖನ್ನಾ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸತೊಡಗಿದೆ. ವಿದೇಶಗಳಲ್ಲಿ ವ್ಯವಹಾರ ಹೊಂದಿದ್ದ ವಿರೇನ್ ಖನ್ನಾನ ವಹಿವಾಟು ಮತ್ತು ಹಣದ ವ್ಯವಹಾರ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಯಲಿದೆ.
ವರ್ಷಕ್ಕೆ ಸರಿಸುಮಾರು 2.5 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸುತ್ತಿದ್ದ ಖನ್ನಾ ತನ್ನದೇ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹೊಂದಿದ್ದ. ದೆಹಲಿ, ಬೆಂಗಳೂರು, ಮುಂಬೈ ಹೀಗೆ ಅನೇಕ ನಗರಗಳಲ್ಲಿ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದ್ದ ಎಂದು ತಿಳಿದುಬಂದಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಇವೆಂಟ್ ಆಯೋಜನೆ ಮಾಡುತ್ತಿದ್ದನಂತೆ.
ಹಾಗಾಗಿ, ವಿರೇನ್ ಖನ್ನಾಗೆ ವಿದೇಶಿ ಹಣ ವಿನಿಮಯ ಹೇಗೆ ನಡೆಯುತ್ತಿತ್ತು? ವಿರೇನ್ ಖನ್ನಾ ಒಟ್ಟು ಆಸ್ತಿ ಮೌಲ್ಯವೆಷ್ಟು? ಆದಾಯವೆಷ್ಟು? ಹೀಗೆ ಆತನ ಆದಾಯದ ಮೂಲಗಳ ಮಾಹಿತಿಯನ್ನ ED ಅಧಿಕಾರಿಗಳು ಈಗ ಕಲೆ ಹಾಕುತ್ತಿದ್ದಾರೆ.
ವಿರೇನ್ ಬ್ಯಾಂಕ್ ಖಾತೆ ಪ್ಯಾನ್ ಕಾರ್ಡ್ ಸೇರಿದಂತೆ ಪ್ರತಿಯೊಂದರ ಬಗ್ಗೆ ಸಹ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯದಲ್ಲೇ, ಜಾರಿ ನಿರ್ದೇಶನಾಲಯವು ECIR (ಆರ್ಥಿಕ ಅಪರಾಧಗಳ FIR) ದಾಖಲಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
Published On - 5:02 pm, Thu, 10 September 20