ದೆಹಲಿ ಫೆಬ್ರುವರಿ 08: ದೆಹಲಿಯ(Delhi) ನಜಾಫ್‌ಗಢದಲ್ಲಿ (najafgarh) ಸಲೂನ್‌ನಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ(Firing) ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಗುಂಡು ತಗುಲಿ ಗಾಯಗೊಂಡಿದ್ದ ಇಬ್ಬರು ಯುವಕರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಕೂಡ ಹೊರಬಿದ್ದಿದೆ. ಇದರಲ್ಲಿ ಆರೋಪಿ ಯುವಕನ ಮೇಲೆ ಗುಂಡು ಹಾರಿಸುತ್ತಿರುವುದು ಕಂಡು ಬಂದಿದೆ.
ಪೊಲೀಸರ ಪ್ರಕಾರ, ನಜಾಫ್‌ಗಢ್ ಪೊಲೀಸ್ ಠಾಣೆಯಲ್ಲಿ ಪಿಸಿಆರ್ ಕರೆ ಬಂದಿದ್ದು, ಪಿಲ್ಲರ್ ನಂಬರ್ 80 ರ ಇಂದ್ರ ಪಾರ್ಕ್‌ನಲ್ಲಿರುವ ಸಲೂನ್‌ನಲ್ಲಿ ಹುಡುಗನಿಗೆ ಗುಂಡು ಹಾರಿಸಲಾಗಿದೆ ಎಂದು ಕರೆ ಮಾಡಿದವರು ತಿಳಿಸಿದ್ದಾರೆ. ಇದಲ್ಲದೇ ಗುಂಡು ತಗುಲಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೋಹನ್ ಗಾರ್ಡನ್ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿದಾಗ ಸೋನು ಮತ್ತು ಆಶಿಶ್ ಎಂಬ ಇಬ್ಬರು ಯುವಕರಿಗೆ ಗುಂಡು ತಗುಲಿದ್ದು, ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಎಫ್‌ಎಸ್‌ಎಲ್ ತಂಡಗಳನ್ನು ನಿಯೋಜಿಸಲಾಗಿದೆ.
ಇದಕ್ಕೂ ಮುನ್ನ ಅಕ್ಟೋಬರ್ 24 ರಂದು ದೆಹಲಿಯ ಜೈತ್‌ಪುರ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು 24 ವರ್ಷದ ಮಹಿಳೆಯನ್ನು ಆಕೆಯ ಮನೆಯಲ್ಲೇ ಗುಂಡಿಕ್ಕಿ ಕೊಂದ ಘಟನೆ ನಡೆದಿತ್ತು. ಇಬ್ಬರು ಮುಸುಕುಧಾರಿಗಳು ಮಹಿಳೆಯ ಮನೆಗೆ ನುಗ್ಗಿ ಆಕೆಯನ್ನು ಕೊಂದಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಇದನ್ನೂ ಓದಿ: ದೆಹಲಿ: ಗೋಕುಲಪುರಿ ಮೆಟ್ರೋ ನಿಲ್ದಾಣದ ಒಂದು ಭಾಗ ಕುಸಿತ, 4 ಮಂದಿಗೆ ಗಂಭೀರ ಗಾಯ
ಮೇ 9, 2023 ರಂದು ನಡೆದ ಮತ್ತೊಂದು ಘಟನೆಯಲ್ಲಿ, ದೆಹಲಿಯ ಗೋವಿಂದಪುರಿ ಪ್ರದೇಶದ ಹುಕ್ಕಾ ಬಾರ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಪ್ರಾಪ್ತ ಬಾಲಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದೇ ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿಗೆ ಗಾಯಗಳಾಗಿವೆ. ಘಟನೆ ನಡೆದಾಗ ಏಳರಿಂದ ಎಂಟು ಹುಡುಗರು ಕೊಲೆಯಾದ ಸ್ಥಳದಲ್ಲಿ ಹಾಜರಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆದರೆ, ಕೊಲೆಗೆ ನಿಖರ ಕಾರಣ ಪತ್ತೆಯಾಗಿಲ್ಲ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:09 pm, Fri, 9 February 24