ಬಿಗ್ ಬಿಲಿಯನ್ ಡೇ ಸೇಲ್ ದೋಖಾ: ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್‌, ಬಂದಿದ್ದು ಡಿಟರ್ಜೆಂಟ್‌ ಸೋಪ್..!

| Updated By: ರಮೇಶ್ ಬಿ. ಜವಳಗೇರಾ

Updated on: Sep 28, 2022 | 12:48 PM

ಆಫರ್​ ಆಸೆಗೆ ಹೋದ ಐಐಎಂ ಅಹಮದಾಬಾದ್‌ ಪದವೀಧರರೊಬ್ಬನಿಗೆ ಬಿಗ್​ ಬಿಲಿಯನ್ ಸೇಲ್​ನಲ್ಲಿ ಬಿಗ್ ದೋಖಾ ಆಗಿದೆ.

ಬಿಗ್ ಬಿಲಿಯನ್ ಡೇ ಸೇಲ್ ದೋಖಾ: ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್‌, ಬಂದಿದ್ದು ಡಿಟರ್ಜೆಂಟ್‌ ಸೋಪ್..!
Flipkart customer orders laptop But receives Ghadi detergent soap
Follow us on

ನವದೆಹಲಿ: ಈ ಹಬ್ಬದ ಸೀಸನ್ ನಲ್ಲಿ ಈ ಕಾಮರ್ಸ್ ಕಂಪನಿಗಳು ಹೆಚ್ಚಿನ ಆಫರ್ ಗಳನ್ನು  ನೀಡುತ್ತವೆ,  ಅದರಂತೆ ಈಗ ದಸರಾ ಹಬ್ಬದ ಪ್ರಯುಕ್ತ ಫ್ಲಿಪ್‌ಕಾರ್ಟ್​ನಿಂದ ಬಿಗ್​ ಬಿಲಿಯನ್ ಸೇಲ್ (Flipkart Big Billion Day)  ಆರಂಭಿಸಿದ್ದು, ಉತ್ತಮ ಆಫರ್​ಗಳೊಂದಿಗೆ ಗ್ರಾಹಕ ಕೈಗೆಟುಕುವ ದರಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಇದರ ಆಸೆಗೆ ಹೋದ ಐಐಎಂ ಅಹಮದಾಬಾದ್‌ ಪದವೀಧರರೊಬ್ಬನಿಗೆ ಬಿಗ್​ ಬಿಲಿಯನ್ ಸೇಲ್​ನಲ್ಲಿ ಬಿಗ್ ದೋಖಾ ಆಗಿದೆ.

ಹೌದು…. ಐಐಎಂ ಪದವೀಧರ ಯಶಸ್ವಿ ಶರ್ಮಾ ಎನ್ನುವರು ಬಿಗ್​ ಬಿಲಿಯನ್ ಸೇಲ್​ನಲ್ಲಿ ತನ್ನ ತಂದೆಗೆ ಲ್ಯಾಪ್‌ಟಾಪ್​ ಆರ್ಡರ್ ಮಾಡಿದ್ದ. ಆದ್ರೆ, ಫ್ಲಿಪ್‌ಕಾರ್ಟ್‌, ಲ್ಯಾಪ್​ಟಾಪ್ ಬದಲು ಡಿಟರ್ಜೆಂಟ್‌ ಸೋಪ್‌ (Ghadi Detergent Soap) ಪ್ಯಾಕೆಟ್‌ಗಳನ್ನು ಡೆಲಿವರಿ ಮಾಡಿದೆ.

ಓಪನ್ ಬಾಕ್ಸ್ ಎಂದರೆ ಲ್ಯಾಪ್‌ಟಾಪ್  (Laptop )ಪರಿಶೀಲಿಸಿದ ನಂತರವೇ ಡೆಲಿವರಿ ಬಾಯ್‌ಗೆ ಒಟಿಪಿ ನೀಡಬೇಕಿತ್ತು. ಆದ್ರೆ ಪ್ರಿಪೇಯ್ಡ್ ಡೆಲಿವರಿಗಳಿಗೆ ಆರ್ಡರ್ ಸ್ವೀಕರಿಸಿದ ಬಳಿಕ OTP ಹೇಳಿದ್ದಾರೆ. ನಂತರ ಅದನ್ನು ಅನ್‌ಬಾಕ್ಸ್‌ ಮಾಡಿದ ಯಶಸ್ವಿಗೆ ಆಘಾತ ಕಾದಿತ್ತು. ಡಬ್ಬದಲ್ಲಿ ಲ್ಯಾಪ್ಟಾಪ್‌ ಬದಲು ಘಡಿ ಡಿಟರ್ಜೆಂಟ್‌ ಸೋಪ್‌ ಇಟ್ಟು ಕೊಡಲಾಗಿದೆ. ಈ ಬಗ್ಗೆ ಫ್ಲಿಪ್‌ಕಾರ್ಟ್‌ಗೆ ಯಶಸ್ವಿ ದೂರು ಕೊಟ್ಟಿದ್ದಾರೆ. ಆದ್ರೆ ಬಾಕ್ಸ್‌ ಓಪನ್‌ ಮಾಡದೇ ಓಟಿಪಿ ನೀಡಿದ್ದು ನಿಮ್ಮದೇ ತಪ್ಪು, ಹಾಗಾಗಿ ಅದಕ್ಕೇನೂ ಪರಿಹಾರವಿಲ್ಲ ಎಂದು ಫ್ಲಿಪ್‌ಕಾರ್ಟ್‌ ಕಸ್ಟಮರ್‌ ಕೇರ್‌ ಸಿಬ್ಬಂದಿ ಹೇಳಿದ್ದಾರಂತೆ. ಸಾವಿರಾರು ರೂಪಾಯಿ ಕೊಟ್ಟು ಲ್ಯಾಪ್​ಟಾಪ್ ಆರ್ಡರ್‌ ಮಾಡಿದ್ದ ಯಶಸ್ವಿ ಈಗ ಕಂಗಾಲಾಗಿದ್ದಾರೆ. ತಮಗಾದ ಮೋಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಬರೆದುಕೊಂಡಿದ್ದಾರೆ.


ಯಶಸ್ವಿ ಶರ್ಮಾ ಅವರು ಟ್ವಿಟ್ಟರ್‌ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದು, ಬಿಗ್‌ ಬಿಲಿಯನ್ ಡೇಸ್‌ (Big Billion Days) ಸೇಲ್‌ ಸಮಯದಲ್ಲಿ ಇದನ್ನು ಖರೀದಿ ಮಾಡಲಾಗಿದೆ. ಅಲ್ಲದೆ ಫ್ಲಿಪ್‌ಕಾರ್ಟ್‌ ತನ್ನ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.

ಲ್ಯಾಪ್‌ಟಾಪ್ ಬದಲಿಗೆ ಘಡಿ ಡಿಟರ್ಜೆಂಟ್ ಸ್ಯಾಚೆಟ್‌ಗಳನ್ನು ಕಳುಹಿಸಿದ್ದರೂ ಸಹ ಫ್ಲಿಪ್‌ಕಾರ್ಟ್‌ನ ಕಸ್ಟೋಮರ್‌ ಕೇರ್‌ ತನ್ನನ್ನೇ ದೂಷಿಸುತ್ತಿದೆ ಎಂದಿದ್ದಾರೆ. ತನ್ನ ಬಳಿ ಸಿಸಿಟಿವಿ ದೃಶ್ಯಗಳಿದ್ದರೂ, ಅದು ವ್ಯರ್ಥವಾಯಿತು. ಇನ್ನು, ಪ್ಯಾಕೇಜ್ ಅನ್ನು ಸ್ವೀಕರಿಸುವಲ್ಲಿ ತನ್ನ ತಂದೆಯ ಒಂದು “ತಪ್ಪು” ಇದಕ್ಕೆ ಕಾರಣವಾಗಿದೆ. ತನ್ನ ತಂದೆಗೆ “ಓಪನ್-ಬಾಕ್ಸ್” ಡೆಲಿವರಿಯ ಬಗ್ಗೆ ತಿಳಿದಿರಲಿಲ್ಲ. ಈ ಹಿನ್ನೆಲೆ ಅವರು ಚೆಕ್‌ ಮಾಡದೆ ಡೆಲಿವರಿ ಪಡೆದುಕೊಂಡಿದ್ದಾರೆ ಎಂದೂ ತಮಗಾದ ನೋವನ್ನು ಹೊರಹಾಕಿದ್ದಾರೆ.

 

ಸ್ಪಷ್ಟನೆ ಕೊಟ್ಟ ಫ್ಲಿಪ್ ಕಾರ್ಟ್
ಗ್ರಾಹಕನ ಆದ ತೊಂದರೆಗೆ ಕೂಡಲೇ ಫ್ಲಿಪ್ ಕಾರ್ಟ್ ಸ್ಪಂದಿಸಿದ್ದು, ಈ ಬಗ್ಗೆ ಸ್ಪಷ್ಟನೆ ಸಹ ಕೊಟ್ಟಿದೆ. ಅದು ಈ ಕೆಳಗಿನಂತಿದೆ.

ಫ್ಲಿಪ್ ಕಾರ್ಟ್ ಒಂದು ಗ್ರಾಹಕ ಕೇಂದ್ರಿತ ಸಂಸ್ಥೆಯಾಗಿದ್ದು, ಗ್ರಾಹಕರ ನಂಬಿಕೆ ಮೇಲೆ ಪರಿಣಾಮ ಬೀರುವಂತಹ ಎಲ್ಲಾ ಪ್ರಕರಣಗಳ ಮೇಲೆ ಶೂನ್ಯ –ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ. ಸಾಧ್ಯವಾದಷ್ಟೂ ನಮ್ಮ ಗ್ರಾಹಕರಿಗೆ ಉತ್ತಮವಾದ ಆನ್ ಲೈನ್ ಶಾಪಿಂಗ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಇದು ನಮಗೆ ಅತ್ಯಂತ ಮಹತ್ವಪೂರ್ಣವಾಗಿದೆ. ಓಪನ್ ಬಾಕ್ಸ್ ಡೆಲಿವರಿ ಆಯ್ಕೆಯನ್ನು ನೀಡುವ ಈ ನಿರ್ದಿಷ್ಟ ಸಂದರ್ಭದಲ್ಲಿ ಗ್ರಾಹಕರು ಪ್ಯಾಕೇಜನ್ನು ತೆರೆಯದೇ ಡೆಲಿವರಿ ಪ್ರತಿನಿಧಿಯೊಂದಿಗೆ ಒಟಿಪಿಯನ್ನು ಹಂಚಿಕೊಂಡಿದ್ದಾರೆ. ಈ ಘಟನೆಯ ವಿವರಗಳನ್ನು ಪರಿಶೀಲಿಸಿದ ನಂತರ ನಮ್ಮ ಗ್ರಾಹಕ ಸೇವಾ ತಂಡವು ಗ್ರಾಹಕರಿಗೆ ಮರುಪಾವತಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ ಮತ್ತು 3-4 ಕರ್ತವ್ಯದ ದಿನಗಳಲ್ಲಿ ಹಣ ಅವರ ಖಾತೆಗೆ ಜಮಾ ಆಗಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ.

ಫ್ಲಿಪ್ ಕಾರ್ಟ್ ನ ಓಪನ್ ಬಾಕ್ಸ್ ಡೆಲಿವರಿಯು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಒಂದು ಪ್ರತ್ಯೇಕವಾದ ಉತ್ತಮ ಉಪಕ್ರಮವಾಗಿದೆ. ಈ ಓಪನ್ ಬಾಕ್ಸ್ ಡೆಲಿವರಿ ಪ್ರಕ್ರಿಯೆಯ ಭಾಗವಾಗಿ ಫ್ಲಿಪ್ ಕಾರ್ಟ್ ವಿಶ್ ಮಾಸ್ಟರ್ಸ್ (ಡೆಲಿವರಿ ಪಾಲುದಾರು) ಉತ್ಪನ್ನವನ್ನು ಡೆಲಿವರಿ ಮಾಡುವ ಸಂದರ್ಭದಲ್ಲಿ ಗ್ರಾಹಕರ ಮುಂದೆ ಪ್ಯಾಕೇಜ್ ಅನ್ನು ಓಪನ್ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಆರ್ಡರ್ ಗಳು ಸರಿಯಾದ ಸ್ಥಿತಿಯಲ್ಲಿದ್ದರೆ ಮಾತ್ರ ಅದನ್ನು ಸ್ವೀಕರಿಸಬೇಕು ಮತ್ತು ನಂತರವಷ್ಟೇ ಒಟಿಪಿಯನ್ನು ಹಂಚಿಕೊಳ್ಳಬೇಕು. ಇದು ಗ್ರಾಹಕರ ಕಡೆಯಿಂದ ಯಾವುದೇ ಹಣಕಾಸಿನ ಹೊರೆ ಅಥವಾ ನಷ್ಟವನ್ನು ತಡೆಯುತ್ತದೆ. ಒಟ್ಟಾರೆ ಗ್ರಾಹಕರ ಅನುಭವವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಮತ್ತು ಉತ್ತಮ ಪೂರೈಕೆ ಜಾಲವನ್ನು ನಿರ್ಮಾಣ ಮಾಡುವ ದಿಸೆಯಲ್ಲಿ ಫ್ಲಿಪ್ ಕಾರ್ಟ್ ಹಲವು ವರ್ಷಗಳಿಂದ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು, ವಿವಿಧ ಉಪಕ್ರಮಗಳನ್ನು ವಿಸ್ತರಣೆ ಮಾಡುತ್ತಾ ಬಂದಿದೆ ಎಂದು ಸ್ಪಷ್ಟಪಡಿಸಿದೆ.

Published On - 7:24 pm, Tue, 27 September 22