ಗದಗ: ಕ್ಷುಲ್ಲಕ ಕಾರಣಕ್ಕೆ ಮಗ ತಂದೆಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. ಡಿಸೆಂಬರ್ ತಿಂಗಳಲ್ಲಿ ಇದೇ ಗ್ರಾಮದಲ್ಲಿ ಶಿಕ್ಷಕನೊಬ್ಬ ಓರ್ವ ಶಿಕ್ಷಕಿ ಹಾಗೂ ಮಗುವನ್ನು ಭೀಕರವಾಗಿ ಕೊಂದು ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ಅದೇ ಗ್ರಾಮದಲ್ಲಿ ಈಗ ಮತ್ತೊಂದು ಭೀಕರ ಕೊಲೆಯಾಗಿದೆ. ಹೌದು ತಂದೆ ಮಲಕಸಾಬ್ನನ್ನು ಪಾಪಿ ಪುತ್ರ ಮೌಲಾಸಾಬ್ ಕೊಡಲಿಯಿಂದ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಗ್ರಾಮದ ನಡುರಸ್ತೆಯಲ್ಲೇ ತಂದೆಯನ್ನು ಕೊಂದು ಹಾಕಿದ್ದಾನೆ.
ನಿನ್ನೆ(ಫೆ.17) ಜಮೀನಿಗೆ ಹೋಗಬೇಡ ಅಂತ ಮಲಕಸಾಬ್ ಪತ್ನಿಗೆ ಹೇಳಿದ್ದನಂತೆ. ಅದ್ರೆ ಬಡತನ ದುಡಿಯದಿದ್ರೆ ಊಟಕ್ಕೂ ಕಷ್ಟ. ಹೀಗಾಗಿ ಪತ್ನಿ ಮಾಬುಬೀ ಕೆಲಸಕ್ಕೆ ಹೋಗಿದ್ದಾರೆ. ಪತ್ನಿ ಸಂಜೆ ಮನೆಗೆ ಬರುತ್ತಿದ್ದಂತೆ ಪತಿ ಮಲಕಸಾಬ್ ಜಗಳವಾಡಿದ್ದಾನೆ. ರಸ್ತೆಯಲ್ಲಿ ನಿಂತು ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಇದು ಪುತ್ರನಿಗೆ ಸಹಿಸಿಕೊಳ್ಳಲಾಗಿಲ್ಲ. ಆಗ ಪುತ್ರ ಮೌಲಾಸಾಬ್ ನಡುರಸ್ತೆಯಲ್ಲಿ ಜಗಳ ಬೇಡ ಮರ್ಯಾದೆ ಪ್ರಶ್ನೆ ಎಂದು ತಂದೆಗೆ ಹೇಳಿದ್ದಾನೆ. ಆಗ ಇದ್ಯಾವದಕ್ಕೂ ಕಿವಿಗೊಡದ ತಂದೆ ಜಗಳ ಮಾಡಿದ್ದಾನೆ. ಸಿಟ್ಟಿಗೆದ್ದ ಪುತ್ರ ಮನೆಯಲ್ಲಿದ್ದ ಕೊಡಲಿಯಿಂದ ತಂದೆ ತಲೆಗೆ ಬಲವಾಗಿ ಹೊಡೆದು ಕೊಂದು ಹಾಕಿದ್ದಾನೆ.
ಇದನ್ನೂ ಓದಿ:ದೊಡ್ಡಬಳ್ಳಾಪುರ: ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್
ಮಲಕಸಾಬ್ಗೆ ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿಕೊಟ್ಟಿದ್ದಾನೆ. ಮೂವರು ಗಂಡು ಮಕ್ಕಳಲ್ಲಿ ಮೌಲಾಸಾಬ್ ಎರಡನೇ ಪುತ್ರ. ಇಂದು(ಫೆ.18)ಮಧ್ಯಾಹ್ನ ಆರೋಪಿ ಮೌಲಾಸಾಬ್ನ್ನು ಪೊಲೀಸರು ಹದ್ಲಿ ಗ್ರಾಮಕ್ಕೆ ಸ್ಥಳ ಮಹಜರಿಗೆ ಕರೆತಂದಿದ್ರು. ಆಗ ಪುತ್ರನ ನೋಡಿ ತಾಯಿಗೆ ಆಕ್ರಂದನ ಮುಗಿಲುಮುಟ್ಟಿತ್ತು. ಸಹೋದರಿಯನ್ನು ತಬ್ಬಿಕೊಂಡು ಆರೋಪಿ ಮೌಲಾಸಾಬ್ ಕಣ್ಣೀರು ಹಾಕಿದ್ದ. ತಂದೆಯನ್ನು ಕೊಂದ ಪಾಪಪ್ರಜ್ನೆ ಕಾಡಿತ್ತೋ ಗೊತ್ತಿಲ್ಲ. ಸಹೋದರಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದ.
ಇದೇ ವೇಳೆ ತಾಯಿ, ಸಹೋದರಿಯರು ಪುತ್ರನಿಗೆ ಧೈರ್ಯ ತುಂಬಿದ ಘಟನೆಯೂ ನಡೆಯಿತು. ನೀನು ಉದ್ದೇಶಪೂರ್ವಕವಾಗಿ ಕೊಂದಿಲ್ಲ. ಹೆದರಬೇಡ ಅಂತ ಸಹೋದರನಿಗೆ ಧೈರ್ಯ ಹೇಳಿದ ಪ್ರಸಂಗವೂ ನಡೆಯಿತು. ತಂದೆ ನಿತ್ಯ ಕುಡಿದು ಬಂದು ನೀಡುತ್ತಿದ್ದ ಕಿರುಕುಳ ಕುಟುಂಬಸ್ಥರಿಗೆ ಸಾಕಾಗಿ ಹೋಗಿತ್ತು. ಆದ್ರೆ ಈ ಕೊಲೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ತಿಂಗಳ ಹಿಂದೆಯೇ ಶಾಲೆಯಲ್ಲಿ ಶಿಕ್ಷಕಿ ಹಾಗೂ ಮಗುವನ್ನ ಕೊಂದ ಸುದ್ದಿ ಗ್ರಾಮಸ್ಥರ ಮನಸ್ಸಿಲ್ಲಿದೆ. ಈ ನಡುವೆ ನಡುರಸ್ತೆಯಲ್ಲಿ ತಂದೆಯ ಭೀಕರ ಕೊಲೆ ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಮೈಸೂರು: ಬುದ್ದಿವಾದ ಹೇಳಿದಕ್ಕೆ ಕಬಾಬ್ ಅಂಗಡಿ ಮಾಲೀಕನನ್ನೇ ಕೊಲೆ ಮಾಡಿದ ಧುರಳರು
ಗಂಡ ಹೆಂಡತಿ ಹಾಗೂ ಮಕ್ಕಳ ಜಗಳ ತಂದೆಯ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಅಮಲಿನಲ್ಲಿ ತಂದೆ ಜಗಳ ಮಾಡಿದ್ದಾನೆ. ಆದ್ರೆ ಒಳ್ಳೆಯ ಮನುಷ್ಯ. ಹೆತ್ತ ತಂದೆಯನ್ನೇ ನಡುರಸ್ತೆಯಲ್ಲೀ ಈ ರೀತಿ ಹತ್ಯೆ ಮಾಡಿದ್ದು ಸರಿಯಲ್ಲ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ. ಅದೇನೆ ಇರಲಿ ಕ್ಷಣ ಮಾತ್ರದ ಸಿಟ್ಟು ತಂದೆಯನ್ನೇ ಕೊಲೆ ಮಾಡುವಂತೆ ಮಾಡಿದ್ದು ಮಾತ್ರ ವಿಪರ್ಯಾಸ. ತಂದೆ ಕೊಂದ ಮಗನಿಗೆ ತಕ್ಕ ಶಿಕ್ಷೆ ಆಗಬೇಕು ಅನ್ನೋದು ಗ್ರಾಮಸ್ಥರ ಮಾತು.
ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ