ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಿದ ಆರೋಪದಲ್ಲಿ ನಾಲ್ವರು ರಾಷ್ಟ್ರೀಯ ಮಟ್ಟದ ಈಜುಗಾರರನ್ನು (National Level Swimmers) ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಜಯನಗರ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ವೃತ್ತಿಪರ ಈಜುಗಾರರನ್ನು ಮಂಗಳವಾರ ಬಂಧಿಸಿದ್ದಾರೆ.
ಮಾರ್ಚ್ 24ರಂದು ಈ ಘಟನೆ ನಡೆದಿದೆ. ನರ್ಸ್ ಆಗಿ ಕೆಲಸ ಮಾಡುತ್ತಿರುವ 22 ವರ್ಷದ ಮಹಿಳೆ ಆರೋಪಿಗಳಲ್ಲಿ ಒಬ್ಬನಾದ ರಜತ್ ಎಂಬಾತನೊಂದಿಗೆ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಸ್ನೇಹ ಬೆಳೆಸಿದ್ದಳು. ಬಳಿಕ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ರಾತ್ರಿ ಊಟಕ್ಕೆ ಆತನನ್ನು ಭೇಟಿಯಾಗಿದ್ದಳು. ನಂತರ, ರಜತ್ ಅವಳನ್ನು ತನ್ನ ಕೋಣೆಗೆ ಆಹ್ವಾನಿಸಿದ್ದ. ಅಲ್ಲಿ ಆತ ಮಾತ್ರ ಅಲ್ಲದೆ ಆತನ ಮೂವರು ಗೆಳೆಯರು ಕೂಡ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ಆ ನರ್ಸ್ ನೀಡಿದ ದೂರಿನ ಪ್ರಕಾರ, ಅವಳು ರಜತ್ನ ಕೋಣೆಗೆ ಹೋದ ನಂತರ, ರಾಷ್ಟ್ರೀಯ ಮಟ್ಟದ ಈಜುಗಾರರಾಗಿದ್ದ ನಾಲ್ವರು ಯುವಕರು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಎಲ್ಲಾ ನಾಲ್ವರು ಆರೋಪಿಗಳು 20 ವರ್ಷದ ಆಸುಪಾಸಿನವರಾಗಿದ್ದು, ಆರೋಪಿಗಳನ್ನು ದೆಹಲಿ ಮೂಲದ ರಜತ್, ಶಿವ ರಾಣಾ, ದೇವ್ ಸರೋಹ ಮತ್ತು ಯೋಗೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನಲ್ಲಿ ಸ್ವಿಮ್ಮಿಂಗ್ ತರಬೇತಿ ಪಡೆಯುತ್ತಿದ್ದರು.
ಆ ನಾಲ್ವರು ಆರೋಪಿಗಳನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಜತ್ ಮತ್ತು ಶಿವ ರಾಣಾ ಕಳೆದ ಮೂರು ತಿಂಗಳಿನಿಂದ ಬೆಂಗಳೂರಿನಲ್ಲಿದ್ದು, ಅಪರಾಧ ನಡೆದ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ಅವರ ಸ್ನೇಹಿತರಾದ ದೇವ್ ಸರೋಹ ಮತ್ತು ಯೋಗೇಶ್ ಕುಮಾರ್ ಅವರು ಒಂದು ವಾರದ ಹಿಂದೆ ನಗರದಲ್ಲಿ ಈಜು ತರಬೇತಿಗೆ ಸೇರಿಕೊಂಡಿದ್ದರು.
ಪೊಲೀಸರಿಗೆ ದೂರು ನೀಡಿದ ವಿಷಯ ತಿಳಿದ ಆರೋಪಿಗಳು ಪರಾರಿಯಾಗಿದ್ದರು ಎನ್ನಲಾಗಿದೆ. ಆದರೂ ನಾಲ್ವರನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಯಿತು. ಕೊನೆಗೆ ಅವರನ್ನು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಬಂಧಿಸಲಾಯಿತು.
ರಜತ್ ಬೆಂಗಳೂರಿನಿಂದ ಪರಾರಿಯಾಗಲು ಯತ್ನಿಸಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಯನ್ನು ಬಸವನಗುಡಿ ಬಳಿ ಬಂಧಿಸಲಾಗಿದ್ದು, ಇನ್ನಿಬ್ಬರನ್ನು ಚಿಕ್ಕಪೇಟೆ ಬಳಿ ಬಂಧಿಸಲಾಗಿದೆ.
ಇದನ್ನೂ ಓದಿ: Rape: ಗಂಡನನ್ನು ಮರಕ್ಕೆ ಕಟ್ಟಿಹಾಕಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಅಪ್ರಾಪ್ತರು ಸೇರಿ 10 ಮಂದಿ ಬಂಧನ