ನಾಪತ್ತೆಯಾಗಿದ್ದ ಗ್ವಾಟೆಮಾಲಾದ ಹಿಪ್ ಹಾಪ್ ಗಾಯಕಿ ನೆಸ್ಲೀ ಶವವಾಗಿ ಪತ್ತೆ, ದೇಶದಲ್ಲಿ ಕೊಲೆಗಳ ಸಂಖ್ಯೆ ಹೆಚ್ಚುತ್ತಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 09, 2022 | 7:54 AM

ಗ್ವಾಟೆಮಾಲಾದ ರಾಜಧಾನಿಯಲ್ಲಿರುವ ನೆಸ್ಲೀಯ ಕಚೇರಿಯಲ್ಲಿ ಕೊನೆಬಾರಿ ಅವಳನ್ನು ನೋಡಲಾಗಿತ್ತು. ಅನುಮಾನಾಸ್ಪದವಾಗಿ ನಿಂತಿದ್ದ ವಾಹನದ ಬಗ್ಗೆ ಕುತೂಹಲ ತಳೆದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ನ್ಯಾಶನಲ್ ಸಿವಿಲ್ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ನೆಸ್ಲೀಯ ಶವ ಪತ್ತೆಯಾಗಿದೆ.

ನಾಪತ್ತೆಯಾಗಿದ್ದ ಗ್ವಾಟೆಮಾಲಾದ ಹಿಪ್ ಹಾಪ್ ಗಾಯಕಿ ನೆಸ್ಲೀ ಶವವಾಗಿ ಪತ್ತೆ, ದೇಶದಲ್ಲಿ ಕೊಲೆಗಳ ಸಂಖ್ಯೆ ಹೆಚ್ಚುತ್ತಿದೆ
ನೆಸ್ಲೀ ಲಿಜೆಟ್ ಕನ್ಸ್ಯೂಗ್ರಾ ಮಾಂಟೆರೆಸ್ಸೊ
Follow us on

ಕಾಣೆಯಾಗಿದ್ದ ಗ್ವಾಟೆಮಾಲಾದ ಖ್ಯಾತ ಹಿಪ್ ಹಾಪ್ ಗಾಯಕಿ ನೆಸ್ಲೀ ಲಿಜೆಟ್ ಕನ್ಸ್ಯೂಗ್ರಾ ಮಾಂಟೆರೆಸ್ಸೊಳ (Nesly Lizet Consuegra Monterroso) ಮೃತದೇಹ ಕಾರಿನ ಬೂಟ್ ನಲ್ಲಿದ್ದ ಬ್ಯಾರೆಲ್ ನಲ್ಲಿ ಪತ್ತೆಯಾಗಿದೆ. 27-ವರ್ಷ-ವಯಸ್ಸಿನ ರ್ಯಾಪರ್ ಕೆಲ ದಿನಗಳ ಹಿಂದೆ ಕಣ್ಮರೆಯಾಗಿದ್ದಳು. ನೆಸ್ಲೀ ಮಾಂಟೆರೆಸ್ಸೊ ಎಂದು ಹೆಸರುವಾಸಿಯಾಗಿದ್ದ ಗಾಯಕಿಯ ದೇಹ ಸೋಮವಾರ ಬೆಳಗ್ಗೆ ಪತ್ತೆಯಾದ ಬಳಿಕ ಪೊಲೀಸರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಗ್ವಾಟೆಮಾಲಾದ ಗ್ವಾಟೆಮಾಲಾ ಸಿಟಿಯಲ್ಲಿ (Guatemala City) ನೆಸ್ಲೀಯ ದೇಹ ಅನಾಥವಾಗಿ ನಿಂತಿದ್ದ ಮತ್ತು ನೋಂದಣಿ ಸಂಖ್ಯೆಯಿಲ್ಲದ (ಲೈಸೆನ್ಸ್ ಪ್ಲೇಟ್) ವಾಹನದ ಬೂಟ್ನಲ್ಲಿದ್ದ ಬ್ಯಾರೆಲ್ ನಲ್ಲಿ ಪತ್ತೆಯಾಗಿದೆ.

ಗ್ವಾಟೆಮಾಲಾದ ರಾಜಧಾನಿಯಲ್ಲಿರುವ ನೆಸ್ಲೀಯ ಕಚೇರಿಯಲ್ಲಿ ಕೊನೆಬಾರಿ ಅವಳನ್ನು ನೋಡಲಾಗಿತ್ತು. ಅನುಮಾನಾಸ್ಪದವಾಗಿ ನಿಂತಿದ್ದ ವಾಹನದ ಬಗ್ಗೆ ಕುತೂಹಲ ತಳೆದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ನ್ಯಾಶನಲ್ ಸಿವಿಲ್ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ನೆಸ್ಲೀಯ ಶವ ಪತ್ತೆಯಾಗಿದೆ.

ಬ್ಯಾರೆಲ್  ಹಗ್ಗದ ಮೂಲಕ ಹೊರಗೆಳೆಯಲಾಯಿತು

ಅವಳ ಸಾವನ್ನು ಪಬ್ಲಿಕ್ ಪ್ರಾಸಿಕ್ಯೂಟರ್ಸ್ ಆಫೀಸ್ ಫಾರ್ ಕ್ರೈಮ್ಸ್ ಅಗೇನ್ಸ್ಟ್ ಲೈಫ್ ಅಂಡ್ ಇಂಟಿಗ್ರಿಟಿ ಅಫ್ ಪರ್ಸನ್ಸ್ ಖಚಿತಪಡಿಸಿದ್ದು ಬ್ಯಾರೆಲ್ ಅನ್ನು ಹಗ್ಗದ ಮೂಲಕ ಹೊರಗೆಳೆಯಲಾಯಿತು ಅಂತ ಹೇಳಿದೆ.
ಫೋರೆನ್ಸಿಕ್ ಸೈನ್ಸಸ್ ನ ರಾಷ್ಟ್ರೀಯ ಸಂಸ್ಥೆಯು ನೆಸ್ಲೀಯ ಸಾವು ತಲೆಗೆ ಬಲವಾದ ಪೆಟ್ಟಿನಿಂದ ಸಂಭವಿಸಿದೆ ಎಂದು ಹೇಳಿದೆ. ಪೊಲೀಸರ ಹೇಳಿಕೆಯ ಪ್ರಕಾರ ನೆಸ್ಲೀ ಕೊಲೆ ಹಿಂದಿನ ಉದ್ದೇಶ ಏನಾಗಿತ್ತು ಎಂಬ ಅಂಶ ಇನ್ನೂ ಬೆಳಕಿಗೆ ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನೆಸ್ಲೀ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿಗಳು ತೀವ್ರಸ್ವರೂಪದ ಹಿಂಸೆಯ ಕುರುಹುಗಳು ಆಕೆಯ ದೇಹದ ಮೇಲೆ ಕಾಣಿಸಿದವು ಎಂದು ಹೇಳಿದ್ದಾರೆ.

ಬ್ಯಾರೆಲ್ ನಲ್ಲಿ ಒಂದು ಬಗೆಯ ದ್ರವ ಪದಾರ್ಥ ಇತ್ತೆಂದು ನಿವಾಸಿಗಳು ಹೇಳಿದ್ದಾರೆ. ಆದರೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಈ ಸಂಗತಿಗಳನ್ನು ಖಚಿತಪಡಿಸಿಲ್ಲ. ನೆಸ್ಲೀಯ ಅಭಿಮಾನಿಗಳು ಸೋಶಿಯಲ್ ಮೀಡಿಯ ಮೂಲಕ ವಿಷಾದ ವ್ಯಕ್ತಪಡಿಸುತ್ತಾ ಸಂತಾಪ ಸೂಚಿಸುತ್ತಿದ್ದಾರೆ.

ಡಿಜೆಯ ಕೊಲೆ

ಇದಕ್ಕೂ ಮುನ್ನ ಗ್ವಾಟೆಮಾಲಾ ಹಳ್ಳಿಯೊಂದರಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಕಂಠಮಟ್ಟ ಕುಡಿದಿದ್ದ ವ್ಯಕ್ತಿಯೊಬ್ಬ ತಾನು ಹೇಳಿದ ಹಾಡು ಪ್ಲೇ ಮಾಡಲಿಲ್ಲ ಅಂತ ಡಿಜೆಯನ್ನು ಗುಂಡಿಟ್ಟು ಕೊಂದಿದ್ದ. ಮೇ ನಲ್ಲಿ ನಡೆದ ಭಯಾನಕ ಘಟನೆಯಲ್ಲಿ ಕುಡುಕ ಬಂದೂಕುಧಾರಿಯು ಶಿಕ್ಷಕನೂ ಆಗಿದ್ದ 35-ವರ್ಷ-ವಯಸ್ಸಿನ ಡಿಜೆ ಎಡ್ವಿನ್ ವಿಲ್ಲಾಫುರ್ಟೆ ಮೇಲೆ ಗುಂಡು ಹಾರಿಸಿದ್ದು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿತ್ತು.

ಗ್ವಾಟೆಮಾಲಾದಲ್ಲಿ ಡಿಜೆ ಪೊಲ್ಲಿಟೊ ಎಂದು ಖ್ಯಾತನಾಗಿ ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದ ಎಡ್ವಿನ್ ಅನ್ನು, ಸ್ವಾನ್ ಇಸಿಡ್ರೋ ದಿ ಲೇಬರರ್ ಗೌರವಾರ್ಥ ಮೇ 16 ರಂದು ಸ್ಯಾನ್ ಇಸಿಡ್ರೋ ಎಂಬ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗ್ವಾಟೆಮಾಲಾ ಸಾಂಸ್ಕೃತಿಕ ಉತ್ಸವದಲ್ಲಿ ಗುಂಡು ಹಾರಿಸಿ ಕೊಲ್ಲಲಾಗಿತ್ತು.

ಗುಂಡಿನ ಸುರಿಮಳೆ!

ಸ್ಥಳೀಯ ಮಾಧ್ಯಮವೊಂದರ ಪ್ರಕಾರ ಹಂತಕನು ಡಿಜೆ ಬಳಿ ಹೋಗಿ ತನ್ನಿಷ್ಟದ ಹಾಡೊಂದಕ್ಕಾಗಿ ಮನವಿ ಮಾಡಿದಾಗ ಅವನು ಆಚರಣೆ ಮುಕ್ತಾಯಗೊಂಡಿದೆ ಅಂತ ಹೇಳಿದ್ದಾನೆ. ತನ್ನೆಲ್ಲ ಸಾಮಾನು ಸರಂಜಾಮುಗಳನ್ನು ಪ್ಯಾಕ್ ಮಾಡಿಕೊಳ್ಳಲು ಸಮಯ ಹಿಡಿಯುತ್ತದೆ ಅಂತ ಎಡ್ವಿನ್ ಹೇಳಿದಾಗ, ಕುಡುಕ ಅಲ್ಲಿಂದ ಹೊರಟು ಹೋಗಿದ್ದಾನೆ.

ಆದರೆ ಸ್ವಲ್ಪ ಹೊತ್ತಿನ ನಂತರ ವಾಪಸ್ಸಾಸ ವ್ಯಕ್ತಿಯು, ಎಡ್ವಿನ್ ತನ್ನ ಉಪಕರಣಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ದ ರೂಮಿನ ಹೊರಗಡೆ ಅವನಿಗಾಗಿ ಕಾಯುತ್ತಾ ನಿಂತಿದ್ದಾನೆ. ಅವನ ಇಷ್ಟದ ಹಾಡನ್ನು ಪ್ಲೇ ಮಾಡದ ಕಾರಣ ಕೋಪದಿಂದ ಭುಸುಗುಡುತ್ತಾ ನಿಂತಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಎಡ್ವಿನ್ ಹೊರಗೆ ಬಂದ ಕೂಡಲೇ ಅವನು ಯಾವುದೇ ಮಾತಾಡದೆ ಗುಂಡಿನ ಸುರಿಮಳೆಗೈದಿದ್ದಾನೆ.
ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎಡ್ವಿನ್ ಜನಾನುರಾಗಿಯಾಗಿದ್ದ ಎಂದು ಅವನನ್ನು ಬಲ್ಲ ಜನ ಹೇಳಿದ್ದಾರೆ.

ಸಹೋದರಿಯ ಹೃದಯಸ್ಪರ್ಶಿ ನೋಟ್ 

ಅವನ ಸಹೋದರಿ ಸೋಶಿಯಲ್ ಮಿಡಿಯಾದಲ್ಲಿ ಹೀಗೆ ಬರೆದಿದ್ದಾಳೆ: ‘ ನನ್ನ ಪ್ರಾಣವಾಗಿದ್ದ ನೀನೀಗ ಒಂದು ಉತ್ತಮ ಸ್ಥಳದಲ್ಲಿರುವೆ ಅಂತ ಗೊತ್ತಿದೆ. ಡಯಾಸಿಟೋ ತನ್ನೊಂದಿಗೆ ನಿನ್ನನ್ನು ಕರೆದೊಯ್ಯಬೇಕೆಂದಿದ್ದ, ಆದರೆ ನಾವೆಲ್ಲ ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ.’

‘ಇದು ಗುಡ್ ಬೈ ಸಂದೇಶ ಅಲ್ಲ. ಯಾಕೆಂದರೆ ನನ್ನ ಹೃದಯದ ಅಣ್ಣನಾಗಿರುವ ನಿನ್ನನ್ನು ಆದಷ್ಟು ಬೇಗ ನೋಡುತ್ತೇನೆ ಎಂಬ ಭಾವನೆ ಉತ್ಕಟವಾಗಿದೆ. ತುಂಬಾ ಎತ್ತರಕ್ಕೆ ಹಾರಿರುವ ಚಾಂಪಿಯನ್ ನೀನು. ಯಾವತ್ತಿಗೂ ನೀನು ನಾನು ಅತಿಯಾಗಿ ಅಭಿಮಾನ ಮತ್ತು ಹೆಮ್ಮಪಟ್ಟುಕೊಳ್ಳುವ ಅಣ್ಣ,’ ಎಂದು ಆಕೆ ಬರೆದಿದ್ದಾಳೆ.

ಕೊಲೆಗಳ ದೇಶ! 

ಸ್ಯಾನ್ ಇಸಿಡ್ರೋ ನಲ್ಲಿ ಪ್ರತಿವರ್ಷ ನಡೆಯುವ ಉತ್ಸವ ಯಾವಾಗಲೂ ಕೊಲೆಗಳೊಂದಿಗೆ ಕೊನೆಗೊಳ್ಳುತ್ತದೆ. ಉತ್ಸವ ನಡೆಯುವ ಸ್ಥಳದಲ್ಲಿ ಸಾಕಷ್ಟು ಭದ್ರತೆ ಇಲ್ಲದಿರುವುದರ ಜೊತೆಗೆ ವಾಪಕ ಮದ್ಯ ಮಾರಾಟ ಕೊಲೆಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಉತ್ತರ ಅಮೆರಿಕ ಖಂಡದ ರಾಷ್ಟ್ರವಾಗಿರುವ ಗ್ವಾಟೆಮಾಲಾದಲ್ಲಿ ಕೊಲೆಗಳ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. 2009 ರಲ್ಲಿ ಪ್ರತಿ 10,000 ಜನರಲ್ಲಿ 45 ಜನರ ಕೊಲೆಯಾಗಿತ್ತು. ಅಮೆರಿಕದಲ್ಲಿ ಈ ಪ್ರಮಾಣ 7.8 ರಷ್ಟಿದೆ.

ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ