ಪತ್ನಿಯಿಂದ ಕಿರುಕುಳ ಆರೋಪ: ಫೇಸ್​ಬುಕ್​ ಲೈವ್​ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪತಿ

ಹಣಕ್ಕಾಗಿ ಪತ್ನಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಫೇಸ್​ಬುಕ್ ಲೈವ್​ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡನ ಆರೋಪಗಳಿಗೆ ಕೌಂಟರ್​ ಕೊಟ್ಟಿರೋ ಪತ್ನಿ, ಆತನದ್ದು ಎಲ್ಲ ನಾಟಕ. ಈ ಹಿಂದೆ ಸೋಪಿನ ನೀರು ಕುಡಿದು ಅವರು​ ಡ್ರಾಮಾ ಮಾಡಿದ್ದರು ಎಂದು ಮರು ಆರೋಪ ಮಾಡಿದ್ದಾರೆ.

ಪತ್ನಿಯಿಂದ ಕಿರುಕುಳ ಆರೋಪ: ಫೇಸ್​ಬುಕ್​ ಲೈವ್​ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪತಿ
ಪತ್ನಿಯಿಂದ ಕಿರುಕುಳ ಆರೋಪ
Updated By: ಪ್ರಸನ್ನ ಹೆಗಡೆ

Updated on: Oct 07, 2025 | 11:50 AM

ತುಮಕೂರು, ಅಕ್ಟೋಬರ್​ 07: ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನ ಟೆಕ್ಕಿ ಅತುಲ್​ ಸುಭಾಷ್​ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ, ಪತ್ನಿ ಪೀಡಿಸುತ್ತಿದ್ದಾಳೆ ಎಂದು ವ್ಯಕ್ತಿಯೋರ್ವ ಫೇಸ್​ಬುಕ್ (Facebook) ಲೈವ್​ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಲ್ಮಾನ್ ಪಾಷಾ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಆತನಿಗೆ ಚಿಕಿತ್ಸೆ ನೀಡಲಾಗ್ತಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಸೈಯದ್ ನಿಕತ್ ಫರ್ದೋಸ್ ಎಂಬಾಕೆ ಜೊತೆ ಸಲ್ಮಾನ್ ಪಾಷಾ ವಿವಾಹ ನಡೆದಿತ್ತು. ಮದುವೆ ನಂತರ ಎರಡು ವರ್ಷ ಸುಖ ಸಂಸಾರವನ್ನೂ ನಡೆಸಿದ್ದರು. ಪತ್ನಿ ಎರಡನೇ ಮಗುವಿನ ಗರ್ಭಿಣಿಯಾದಾಗ ಸಲ್ಮಾನ್​ ಗೆ ಕುವೈತ್​ ನಲ್ಲಿ ಹೈಡ್ರಾಲಿಕ್ ಮೆಕಾನಿಕ್ ಆಗಿ ಕೆಲಸ ಸಿಕ್ಕಿದೆ. ಹೀಗಾಗಿ ಆತ ವಿದೇಶಕ್ಕೆ ತೆರಳಿದ ಬಳಿಕ ಸೈಯದ್ ನಿಕತ್ ಫರ್ದೋಸ್ ತಾಯಿ ಮನೆಗೆ ತೆರಳಿದ್ದಾರೆ. ಆ ಬಳಿಕ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. AIMIM ಪಕ್ಷದ ತುಮಕೂರು ಜಿಲ್ಲಾಧ್ಯಕ್ಷನಾಗಿರುವ ಸೈಯದ್ ಬುರ್ಹಾನ್ ಉದ್ದೀನ್ ಜೊತೆ ಸೇರಿ ಪತ್ನಿ ಹೆಚ್ಚಿನ ಹಣಕ್ಕಾಗಿ ತನ್ನ ಪೀಡಿಸುತ್ತಿದ್ದಾಳೆ. ಜೊತೆಗೆ ಆಕೆಗೆ ಬುರ್ಹಾನ್ ಜೊತೆ ಅಕ್ರಮ ಸಂಬಂಧ ಇದ್ದು, ವಿದೇಶಿ ಕೆಲಸ ಬಿಟ್ಟು ತುಮಕೂರಿಗೆ ಬಂದರೂ ಇಬ್ಬರು ಮಕ್ಕಳನ್ನ ತೋರಿಸುತ್ತಿಲ್ಲ. ಹಣ ಕೊಡದಿದ್ದರೆ ವಿಚ್ಛೇದನ ನೀಡು ಎಂದು ಪತ್ನಿ ಹೇಳುತ್ತಿದ್ದು, ತುಮಕೂರು ಮಹಿಳಾ ಠಾಣೆ ಪೊಲೀಸರು ಸಹ ಹೆಂಡತಿ ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದಾರೆ ಎನ್ನುವುದು ಸಲ್ಮಾನ್ ಪಾಷಾ ಆರೋಪ.

ಇದನ್ನೂ ಓದಿ: ಪಾದಯಾತ್ರೆ ಹೋಗುತ್ತಿದ್ದವರ ಮೇಲೆ ಹರಿದ ಖಾಸಗಿ ಸ್ಲೀಪರ್ ಬಸ್, ಮೂವರು ಸಾವು

ಪತಿ ಆರೋಪಕ್ಕೆ ಪತ್ನಿಯ ಕೌಂಟರ್​

ಇನ್ನು ಗಂಡನ ಆರೋಪಗಳಿಗೆ ಪತ್ನಿ ಸೈಯದ್ ನಿಕತ್ ಫರ್ದೋಸ್ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಸೋಪಿನ ನೀರು ಕುಡಿದು ಸಲ್ಮಾನ್​ ಡ್ರಾಮಾ ಮಾಡಿದ್ದ. ನಾನು ಕೆಲಸ ಮಾಡುವ ಜಾಗಕ್ಕೆ ಬಂದು ಆ್ಯಸಿಡ್ ಹಾಕುತ್ತೇನೆಂದು ಬೆದರಿಕೆ ಹಾಕಿದ್ದ. ಈ ಬಗ್ಗೆ ನಾನು ದೂರು ಸಹ ಕೊಟ್ಟಿದ್ದೆ ಎಂದು ಮರು ಆರೋಪ ಮಾಡಿದ್ದಾರೆ. ನಾನು ಗರ್ಭಿಣಿಯಾಗಿದ್ದಾಗ ತನ್ನ ಅತ್ತೆಯೇ ಮನೆಯಿಂದ ಹೊರ ಹಾಕಿದರು. AIMIM ಜಿಲ್ಲಾಧ್ಯಕ್ಷ ಬುರ್ಹಾನ್ ನನ್ನ ಮಾವನಾಗಿದ್ದು, ಕಷ್ಟಗಳಿಗೆ ನೆರವಾಗಿದ್ದಾರೆ. ಮಾವ ಎಂದರೇ ತಂದೆ ಸಮಾನ. ಆದರೆ ಸಲ್ಮಾನ್​ ಅವರ ಜೊತೆಗೇ ಅಕ್ರಮ ಸಂಬಂಧದ ಆರೋಪ ಹೊರಿಸುತ್ತಿದ್ದಾರೆ. ಮಕ್ಕಳನ್ನು ನೋಡಲು ಬಾರದ ಪತಿ, ಈಗ ನಾಟಕ ಮಾಡುತ್ತಿದ್ದಾರೆ ಎಂದು ಸೈಯದ್ ನಿಕತ್ ಫರ್ದೋಸ್ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.