ಕೊಪ್ಪಳ: ಪಾದಯಾತ್ರೆ ಹೋಗುತ್ತಿದ್ದವರ ಮೇಲೆ ಹರಿದ ಖಾಸಗಿ ಸ್ಲೀಪರ್ ಬಸ್, ಮೂವರು ಸಾವು
ಹುಲಿಗೆಮ್ಮ ದೇವಾಲಯಕ್ಕೆ ಪಾದಯಾತ್ರೆ ಹೋಗುತ್ತಿದ್ದ ಭಕ್ತರಿಗೆ ಮಂಗಳವಾರ ಬೆಳ್ಳಂಬೆಳಗ್ಗೆಯೇ ಸ್ಲೀಪರ್ ಬಸ್ಸೊಂದು ಯಮರೂಪಿಯಾಗಿ ಪರಿಣಮಿಸಿದೆ. ಪಾದಯಾತ್ರೆ ತೆರಳುತ್ತಿದ್ದವರ ಮೇಲೆ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದಲ್ಲಿ ಬಸ್ ಹರಿದು ಮೂವರು ಮೃತಪಟ್ಟಿದ್ದಾರೆ. ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಮೃತರೆಲ್ಲ ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರಾಗಿದ್ದಾರೆ.

ಕೊಪ್ಪಳ, ಅಕ್ಟೋಬರ್ 7: ಕೊಪ್ಪಳ (Koppal) ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದು (Bus Accident) ಮೂವರು ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ. ಭೀಕರ ಅಪಘಾತದಲ್ಲಿ ಅನ್ನಪೂರ್ಣ (40), ಪ್ರಕಾಶ್ (25), ಶರಣಪ್ಪ (19) ಎಂಬ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರಾಗಿದ್ದು, ಹುಲಿಗೆಮ್ಮ ದೇವಾಲಯದ ಪಾದಯಾತ್ರೆಗೆ ತೆರಳುತ್ತಿದ್ದರು. ಘಟನೆಯಲ್ಲಿ ನಾಲ್ವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಂದಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ನಿಯಂತ್ರಣ ತಪ್ಪಿ ಭಕ್ತರ ಮೇಲೆ ಹರಿದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದ ವೇಳೆ ಭಕ್ತರು ದೇವಾಲಯದಿಂದ ಕೇವಲ ಮೂರು ಗಂಟೆಗಳ ನಡಿಗೆಯ ದೂರದಲ್ಲಿದ್ದರು.
ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಬೈಕ್ ಡಿಕ್ಕಿ ಹೊಡೆದು ಹುಲಿಗೆಮ್ಮ ದೇವಿ ಭಕ್ತ ದುರ್ಮರಣ
ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ಬಳಿ ಬೈಕ್ ಡಿಕ್ಕಿ ಹೊಡೆದು ಹುಲಿಗೆಮ್ಮ ದೇವಿ ಭಕ್ತ ದುರ್ಮರಣ ಹೊಂದಿದ್ದಾರೆ. ಬೈಕ್ ಡಿಕ್ಕಿ ಹೊಡೆದು ವೀರೇಶ್ ಹಳ್ಳಿಕೇರಿ (28) ಮೃತಪಟ್ಟಿದ್ದಾರೆ. ಇವರು ಕೂಡ ಹುಲಿಗೆಮ್ಮ ದೇಗುಲಕ್ಕೆ ಪಾದಯಾತ್ರೆ ಮಾಡುತ್ತಿದ್ದರು.
ಇದನ್ನೂ ಓದಿ: ಸೆಂಟ್ ಸ್ಪ್ರೇ ಮಾಡಿ ಹಸುವಿಗೆ ಬೆಂಕಿ ಹಚ್ಚಿದ ಆರೋಪ: ಅಪ್ರಾಪ್ತನ ಮೇಲೆ ಹಲ್ಲೆ?
ಒಟ್ಟು 9 ಮಂದಿ ಭಕ್ತರು ಪಾದಯಾತ್ರೆ ಮಾಡುತ್ತಿದ್ದರು. ಭಾನಾಪುರ ಬಳಿ ಬಂದಾಗ ಪಾದಯಾತ್ರಿಗಳಿಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ವೀರೇಶ್ ಹಳ್ಳಿಕೇರಿ ಮೃತಪಟ್ಟು, ಇನ್ನೊಬ್ಬ ಭಕ್ತ ರಮೇಶ್ಗೆ ಗಾಯಗಳಾಗಿವೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:41 am, Tue, 7 October 25



