ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಪ್ರಕರಣ; 8 ಜನರ ವಿರುದ್ಧ ಎಫ್‌ಐ‌ಆರ್

| Updated By: Rakesh Nayak Manchi

Updated on: Jul 23, 2022 | 3:01 PM

ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿ ಪ್ರಕರಣ ಸಂಬಂಧ ಎರಡು ಪಕ್ಷಗಳ ಒಟ್ಟು 8 ಮಂದಿ ವಿರುದ್ಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಭೂಮಿ ಪೂಜೆ ವೇಳೆ ಶಾಸಕ ಶಿವಲಿಂಗೇಗೌಡ ಅವರ ಎದುರೇ ಕಿತ್ತಾಟ ನಡೆದಿತ್ತು.

ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಪ್ರಕರಣ; 8 ಜನರ ವಿರುದ್ಧ ಎಫ್‌ಐ‌ಆರ್
ಸಾಂಕೇತಿಕ ಚಿತ್ರ
Follow us on

ಹಾಸನ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿ ಪ್ರಕರಣ ಸಂಬಂಧ ಎರಡು ಪಕ್ಷಗಳ ಒಟ್ಟು 8 ಮಂದಿ ವಿರುದ್ಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಭೂಮಿ ಪೂಜೆ ವೇಳೆ ಶಾಸಕರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕರ ಎದುರೇ ಜೆಡಿಎಸ್ ಮತ್ತು ಬಿಜೆಪಿ (JDS And BJP) ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಜೆಡಿಎಸ್ ಪಕ್ಷದ ಸುರೇಶ್​, ಪ್ರಜ್ವಲ್, ರಾಮು, ಶಂಕರಪ್ಪ ಹಾಗೂ ಬಿಜೆಪಿಯ ಸುರೇಶ್, ಶೇಖರಪ್ಪ, ದೇವೇಗೌಡ, ಸಿದ್ದು ವಿರುದ್ಧ ಎಫ್​ಐಆರ್ (FIR) ದಾಖಲಾಗಿದೆ.

ಅರಸೀಕೆರೆ ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ನಿರ್ಮಾಣ ಮಾಡಲು ಇಚ್ಛಿಸಿರುವ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಆಗಮಿಸಿದ್ದರು. ಈ ವೇಳೆ ಶಾಸಕರು ಶಿಷ್ಟಾಚಾರ ಉಲ್ಲಂಘನೆ ಮಾಡಿದ ಆರೋಪ ಕೇಳಿಬಂದಿದ್ದು, ಬಿಜೆಪಿ ಪ್ರಶ್ನಿಸಿದೆ. ಪರಿಣಾಮವಾಗಿ ಜೆಡಿಎಸ್ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಗೋಡುಂಬಿ ಗೋದಾಮಿನಲ್ಲಿ ಅಕ್ರಮ ಪಡಿತರ ಅಕ್ಕಿ ಪತ್ತೆ

ಕಾರವಾರ: ಪಾಳು ಬಿದ್ದ ಗೋಡಂಬಿ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮಪಂಚಾಯಿತಿಯ ವ್ಯಾಪ್ತಿಗೆ ಬರುವ ಕಡಲ ಗದ್ದೆಯಲ್ಲಿ ಇರುವ ಪಾಳು ಬಿದ್ದ ಗೋಡಂಬಿ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಭಟ್ಕಳ ತಹಶೀಲ್ದಾರ್ ಡಾ.ಸುಮಂತ ಹಾಗೂ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮಹಾಬಲೇಶ್ವರ ನಾಯ್ಕ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ 900 ಸಿಮೆಂಟ್ ಚೀಲದಲ್ಲಿ ಪಡಿತರ ಅಕ್ಕಿ ಪತ್ತೆಯಾಗಿದ್ದು, ಇವುಗಳ ಸಹಿತ ಹೊಲಿಗೆ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.

ಹಿಟ್ ಅಂಡ್ ರನ್ ವೇಳೆ ಅಪಘಾತ

ಬೆಂಗಳೂರು: ವಿಲ್ಸನ್ ಗಾರ್ಡನ್ ಸಂಚಾರಿ ಠಾಣಾ ವ್ಯಾಪ್ತಿಯ ಮರಿಗೌಡ ರಸ್ತೆಯಲ್ಲಿ ನಡೆದಿದ್ದ ಅಪಘಾತ ಪ್ರಕರಣವನ್ನು ವಿಲ್ಸನ್ ಗಾರ್ಡನ್ ಸಂಚಾರಿ ಠಾಣಾ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಟಿಪ್ಪರ್ ಚಾಲಕ ರಾಮಸ್ವಾಮಿಯನ್ನು ಬಂಧಿಸಿದ್ದಾರೆ. ಜುಲೈ 16ರ ಮಧ್ಯರಾತ್ರಿ 12 .30ಕ್ಕೆ ಟಿಪ್ಪರ್ ಲಾರಿ ಅಪರಿಚಿತನ ಮೇಲೆ ಹರಿದು ಹೋಗಿತ್ತು. ಘಟನೆಯಲ್ಲಿ ಅಪರಿಚಿತ ವ್ಯಕ್ತಿಯ ಮುಖ ಸಂಪೂರ್ಣ ಚಚ್ಚಿ ಹೋಗಿ ಗುರುತು ಪತ್ತೆಹಚ್ಚುವುದೇ ದೊಡ್ಡ ಸವಾಲಾಗಿತ್ತು. ಅದಾಗ್ಯೂ ಅಪಘಾತದಲ್ಲಿ ಮೃತಪಟ್ಟ ಅಪರಿಚತನ ಮುಖದ ಭಾಗಗಳನ್ನು ಜೋಡಿಸಿ ಫೋಟೋ ತೆಗೆದು ಗುರುತು ಪತ್ತೆಗಾಗಿ ಗಲ್ಲಿಗಲ್ಲಿಯಲ್ಲಿ ಪೊಲೀಸರು ಸುತ್ತಿದ್ದಾರೆ.

ಪೊಲೀಸರು ನಿರಂತರ ತನಿಖೆಯಿಂದಾಗಿ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದ್ದು, ಮೃತ ವ್ಯಕ್ತಿ ಮರಗೆಲಸ ಮಾಡಿಕೊಂಡಿದ್ದ ಕುಮಾರ್ ಎಂದು ತಿಳಿದುಬಂದಿದೆ. ಅದರಂತೆ ಮೃತನ ಕುಟುಂಬಸ್ಥರನ್ನು ಪೊಲೀಸರು ಪತ್ತೆಹಚ್ಚಿ ಮೃತದೇಹವನ್ನು ಹಸ್ತಾಂತರಿಸಿದರು. ಈ ನಡುವೆ ಪೊಲೀಸರು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಹಾಗೂ ಲಾರಿ ಟಯರ್ ಗುರುತಿನ ಮೇರೆಗೆ ಲಾರಿಯನ್ನು ಪತ್ತೆ ಹಚ್ಚಿ ಚಾಲಕ ರಾಮಸ್ವಾಮಿ ಎಂಬವನ್ನು ಬಂಧಿಸಿದ್ದಾರೆ.