ತಮಿಳುನಾಡಿನ ದಿಂಡಿಗಲ್ ಪೊಲೀಸರು (Tamil Nadu Police)ಮಾರ್ಚ್ 16ರಂದು ನಿರವಿ ಮುರುಗನ್ ಎಂಬ ರೌಡಿಯನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ನಿರವಿ ಮುರುಗನ್ ಸುಮಾರು 60 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಈತ ಸುಮಾರು ಹೇಯ ಕೃತ್ಯಗಳನ್ನೂ ಮಾಡಿದವನು. ತಿರುನಲ್ವೇಲಿ, ಟುಟಿಕೋರಿನ್ ಮತ್ತು ಕನ್ಯಾಕುಮಾರಿ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಮುರುಗನ್ ವಿರುದ್ಧ ಹಲವು ಅಪಹರಣ ಮತ್ತು ಕೊಲೆ ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗೆ ದಿಂಡಿಗಲ್ ಒಡ್ಡಾಣಛತ್ರಂ ಎಂಬಲ್ಲಿದ್ದ ವೈದ್ಯರ ಮನೆಯಲ್ಲಿ ದರೋಡೆಯಾಗಿತ್ತು. ಈ ದರೋಡೆಯಲ್ಲೂ ಮುರಗುನ್ ಭಾಗಿಯಾಗಿದ್ದ. ಅದರಲ್ಲೂ ಈತನ ವಿರುದ್ಧದ ಪ್ರಮುಖ ಕೇಸ್ ಎಂದರೆ 2004ರಲ್ಲಿ ನಡೆದಿದ್ದ ತಮಿಳುನಾಡಿನ ಮಾಜಿ ಕಾನೂನು ಸಚಿವ ಅಲಾದಿ ಅರುಣಾರ ಹತ್ಯೆ. ಮುರುಗನ್ ಬರೀ ತಮಿಳುನಾಡಿನಷ್ಟೇ ಅಲ್ಲದೆ, ಕರ್ನಾಟಕ ಸೇರಿ ಇನ್ನೂ ಹಲವು ರಾಜ್ಯಗಳಲ್ಲಿ ಕ್ರೈಂಗಳಲ್ಲಿ ಪಾಲ್ಗೊಂಡಿದ್ದಾನೆ. ಈತ ಕಲಕ್ಕಡ್ ಬಳಿ ಅಡಗಿದ್ದಾನೆ ಎಂಬ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ಪೊಲೀಸರು ಹೋದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಪೊಲೀಸರು ಗುಂಡು ಹಾರಿಸಿ ಕೊಂಡಿದ್ದಾರೆ.
ಎನ್ಕೌಂಟರ್ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತಿರುನಲ್ವೇಲಿ ಪೊಲೀಸ್ ವರಿಷ್ಠಾಧಿಕಾರಿ ಪಿ ಸರವಣನ್, ಮುರುಗನ್ ಬಂಧನಕ್ಕಾಗಿ ಸಬ್ ಇನ್ಸ್ಪೆಕ್ಟರ್ ಎಸಕ್ಕಿರಾಜಾ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಕಲಕ್ಕಾಡ್ ಬಳಿ ನಮ್ಮ ಪೊಲೀಸರ ತಂಡ ಹೋಗುತ್ತಿದ್ದಂತೆ ಮುರುಗನ್ ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಪೊಲೀಸರು ಅದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆತ ಕುಡುಗೋಲಿನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ. ಆಗ ಎಸ್ಐ ಗುಂಡು ಹಾರಿಸಿದರು ಎಂದು ತಿಳಿಸಿದ್ದಾರೆ. ಅಂದಹಾಗೇ, ಮುರುಗನ್ ಹಲ್ಲೆಗೆ ಎಸಕ್ಕಿರಾಜ ಸೇರಿ ಒಟ್ಟು ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಎನ್ಕೌಂಟರ್ ಪ್ರಕರಣದ ನ್ಯಾಯಾಂಗ ತನಿಖೆಯನ್ನು ನುಂಗುನೇರಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಾರಂಭ ಮಾಡಿಕೊಂಡಿದೆ.
ನಿನ್ನೆ ಅಸ್ಸಾಂನಲ್ಲಿ ಇಬ್ಬರು ರೇಪಿಸ್ಟ್ಗಳನ್ನು ಅಲ್ಲಿನ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದರು. 24 ಗಂಟೆಯೊಳಗೆ, ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳ ಆರೋಪಿಗಳನ್ನು ಅಸ್ಸಾಂ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಅದರಲ್ಲಿ ಒಬ್ಬಾತ 7 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಂದಿದ್ದವನಾಗಿದ್ದಾರೆ, ಇನ್ನೊಬ್ಬಾತ 16ವರ್ಷದ ಹುಡುಗಿಯ ಸಾಮೂಹಿಕ ಅತ್ಯಾಚಾರದಲ್ಲಿ ಪಾಲ್ಗೊಂಡವನಾಗಿದ್ದ. ಇವರಿಬ್ಬರೂ ಕೂಡ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಗುಂಡೇಟಿಗೆ ಬಲಿಯಾಗಿದ್ದರು.
ಇದನ್ನೂ ಓದಿ: ಅತ್ಯಾಚಾರ ಆರೋಪಿಗಳ ಎನ್ಕೌಂಟರ್: ಅಸ್ಸಾಂನಲ್ಲಿ 24 ಗಂಟೆಯಲ್ಲಿ ಇಬ್ಬರು ರೇಪಿಸ್ಟ್ಗಳಿಗೆ ಗುಂಡಿಕ್ಕಿ ಕೊಂದ ಪೊಲೀಸರು
Published On - 9:55 am, Thu, 17 March 22