ಅತ್ಯಾಚಾರ ಆರೋಪಿಗಳ ಎನ್ಕೌಂಟರ್: ಅಸ್ಸಾಂನಲ್ಲಿ 24 ಗಂಟೆಯಲ್ಲಿ ಇಬ್ಬರು ರೇಪಿಸ್ಟ್ಗಳಿಗೆ ಗುಂಡಿಕ್ಕಿ ಕೊಂದ ಪೊಲೀಸರು
ಕಳೆದ ವರ್ಷ ಆಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮತ್ತೆ ಆಡಳಿತ ಹಿಡಿದಿದ್ದು, ಹಿಮಂತ ಬಿಸ್ವಾ ಶರ್ಮಾ ಮುಖ್ಯಮಂತ್ರಿಯಾಗಿದ್ದಾರೆ. ಗೃಹ ಇಲಾಖೆಯೂ ಕೂಡ ಅವರ ಕೈಯ್ಯಲ್ಲೇ ಇದೆ. ಅಪರಾಧಗಳನ್ನು ಮಾಡುವವರ ವಿರುದ್ಧ, ಅದರಲ್ಲೂ ಅತ್ಯಾಚಾರಿಗಳ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿಬಿಟ್ಟಾರೆ.
ಅತ್ಯಾಚಾರ ಆರೋಪಿಯನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ ಘಟನೆ ಅಸ್ಸಾಂನ (Assam) ಅಡಾಲ್ಗುರಿ ಜಿಲ್ಲೆಯಲ್ಲಿ ನಡೆದಿದೆ. ಕಳೆದ 24ಗಂಟೆಯಲ್ಲಿ ಪೊಲೀಸರಿಂದ ಕೊಲ್ಲಲ್ಪಟ್ಟ ಎರಡನೇ ರೇಪಿಸ್ಟ್ ಈತ. ಬುಧವಾರ ಮುಂಜಾನೆ ಪೊಲೀಸರು ರಾಜೇಶ್ ಮುಂಡಾ (38) ಎಂಬಾತನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಈ ವ್ಯಕ್ತಿ ಏಳುವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಕೊಂದ ಆರೋಪದಡಿ ಪೊಲೀಸ್ ಕಸ್ಟಡಿಯಲ್ಲಿ ಇದ್ದ. ಆದರೆ ಬುಧವಾರ ಮುಂಜಾನೆ ಹೊತ್ತಲ್ಲಿ ಮಜ್ಬಾತ್ ಎಂಬಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಶೂಟ್ ಮಾಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಈತನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಸತ್ತುಹೋಗಿದ್ದ ಎಂದು ವರದಿಯಾಗಿದೆ.
ಅದಕ್ಕೂ ಮೊದಲು ನಿನ್ನೆ ಅಂದರೆ ಮಂಗಳವಾರ ರಾತ್ರಿ ಬಿಕಿ ಅಲಿ ಎಂಬುವನನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು. ಈ ವ್ಯಕ್ತಿ 16 ವರ್ಷದ ಹುಡುಗಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ. ಗುವಾಹಟಿ ಪೊಲೀಸರು ಗುಂಡೇಟು ಕೊಟ್ಟು ಕೊಂದಿದ್ದಾರೆ. ಇನ್ನು ರಾಜೇಶ್ ಮುಂಡಾ ಹತ್ಯೆಯ ಬಗ್ಗೆ ಮಾಹಿತಿ ನೀಡಿದ ಉಡಾಲ್ಗುರಿ ಪೊಲೀಸ್ ಅಧೀಕ್ಷಕ ಬಿದ್ಯುತ್ ದಾಸ್ ಬೋರೊ, ಏಳುವವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಕೊಂದ ಪ್ರಕರಣವನ್ನು ನಾವು ಮಾರ್ಚ್ 10ರಂದು ದಾಖಲಿಸಿಕೊಂಡಿದ್ದೆವು. ಈ ಬಗ್ಗೆ ತನಿಖೆ ನಡೆಸಿದಾಗ ಇದರಲ್ಲಿ ರಾಜೇಶ್ ಮುಂಡಾ ಆರೋಪಿ ಎಂಬುದು ಸಾಬೀತಾಯಿತು. ಆತನನ್ನು ಮಂಗಳವಾರ ಅಂದರೆ ಮಾರ್ಚ್ 15ರ ರಾತ್ರಿ ಬೈಹಾಟಾ ಚರೈಲಿ ಎಂಬಲ್ಲಿರುವ ಒಂದು ಕಾರ್ಖಾನೆಯಿಂದ ಬಂಧಿಸಲಾಯಿತು. ಬುಧವಾರ ಮುಂಜಾನೆ 2.30ರ ಹೊತ್ತಿಗೆ ಈತನನ್ನು ಘಟನೆ ನಡೆದ ಸ್ಥಳಕ್ಕೆ ಮಹಜರು ಮಾಡಲು ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ತಪ್ಪಿಸಿಕೊಳ್ಳಲು ಯತ್ನಿಸಿದ. ಆತನನ್ನು ತಡೆಯಲು ಸಾಧ್ಯವಾಗದೆ ಇದ್ದಾಗ ಪೊಲೀಸ್ ತಂಡ ಗುಂಡು ಹಾರಿಸಿತು. ಗಾಯಗೊಂಡಿದ್ದವನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು, ಆದರೆ ಬದುಕುಳಿಯಲಿಲ್ಲ ಎಂದಿದ್ದಾರೆ.
ಇನ್ನೊಬ್ಬಾತನದೂ ಇದೇ ಕೇಸ್
ಮಂಗಳವಾರ ರಾತ್ರಿ ಪೊಲೀಸರಿಂದ ಹತ್ಯೆಯಾದ ಬಿಕಿ ಅಲಿಯದ್ದೂ ಕೂಡ ಇದೇ ಕೇಸ್ ಆಗಿದೆ. 20 ವರ್ಷದ ಈತನ ಎನ್ಕೌಂಟರ್ ಬಗ್ಗೆ ಗುವಾಹಟಿ ಪೊಲೀಸರು ಮಾಹಿತಿ ನೀಡಿದ್ದು, ಅಲಿ ಮತ್ತು ಆತನ ನಾಲ್ವರು ಸಹಚರರು ಸೇರಿ ಫೆಬ್ರವರಿಯಲ್ಲಿ 16 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ್ದರು. ಅಷ್ಟೇ ಅಲ್ಲ ಇದನ್ನು ವಿಡಿಯೋ ಕೂಡ ಮಾಡಿದ್ದರು. ಆ ವಿಡಿಯೋ ತೋರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಹುಡುಗಿಯನ್ನು ಬೆದರಿಸುತ್ತಿದ್ದರು. ಫೆ.19ರಂದು ಆಕೆಗೆ ವಿಡಿಯೋ ಡಿಲೀಟ್ ಮಾಡುವುದಾಗಿ ನಂಬಿಸಿ, ಹೊಟೆಲ್ವೊಂದಕ್ಕೆ ಕರೆಸಿಕೊಂಡು ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ನಂತರ ಆಕೆಯ ಕುಟುಂಬದವರೇ ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ 20ವರ್ಷದ ಅಲಿಯನ್ನು ಬಂಧಿಸಲಾಗಿತ್ತು. ಮಂಗಳವಾರ ರಾತ್ರಿ ಆತನನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗುವ ವೇಳೆ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಗುಂಡು ಹಾರಿಸಲಾಯಿತು ಎಂದಿದ್ದಾರೆ. ಈತನನ್ನು ಮಧ್ಯರಾತ್ರಿ 1 ಗಂಟೆ ಹೊತ್ತಿಗೆ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು, ಈತ ಎದೆ ಮೇಲೆ ಒಂದು ಮತ್ತು ಬೆನ್ನಿಗೆ ನಾಲ್ಕು ಗಾಯಗಳಾಗಿದ್ದವರು. ತರುವಷ್ಟರಲ್ಲೇ ಮೃತಪಟ್ಟಿದ್ದ ಎಂದು ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆ ಅಧೀಕ್ಷಕ ಅಭಿಜಿತ್ ಶರ್ಮಾ ತಿಳಿಸಿದ್ದಾರೆ.
ಸರ್ಕಾರದ ವಿರುದ್ಧ ಟೀಕೆ
ಕಳೆದ ವರ್ಷ ಆಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮತ್ತೆ ಆಡಳಿತ ಹಿಡಿದಿದ್ದು, ಹಿಮಂತ ಬಿಸ್ವಾ ಶರ್ಮಾ ಮುಖ್ಯಮಂತ್ರಿಯಾಗಿದ್ದಾರೆ. ಗೃಹ ಇಲಾಖೆಯೂ ಕೂಡ ಅವರ ಕೈಯ್ಯಲ್ಲೇ ಇದೆ. ಅಪರಾಧಗಳನ್ನು ಮಾಡುವವರ ವಿರುದ್ಧ, ಅದರಲ್ಲೂ ಅತ್ಯಾಚಾರಿಗಳ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿಬಿಟ್ಟಾರೆ. ತಪ್ಪಿಸಿಕೊಳ್ಳಲು ಯತ್ನಿಸಿದರೆ ಕಾಲಿಗೇ ಶೂಟ್ ಮಾಡಿ ಎಂದೂ ಹೇಳಿದ್ದಾರೆ. ಹಾಗೇ ಕಳೆದ ಮೇ ತಿಂಗಳಿಂದಲೂ ಅಸ್ಸಾಂನಲ್ಲಿ ಎನ್ಕೌಂಟರ್ ಸಂಖ್ಯೆ ಹೆಚ್ಚಾಗಿದ್ದು, ಅನೇಕರು ಟೀಕಿಸುತ್ತಿದ್ದಾರೆ. ಬೇಕೆಂದೇ ಆರೋಪಿಗಳ ಹತ್ಯೆ ನಡೆಯುತ್ತಿದೆ. ನಕಲಿ ಎನ್ಕೌಂಟರ್ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಇದನ್ನೂ ಓದಿ: ರಥ ಎಳೆಯುವ ಸಂದರ್ಭದಲ್ಲಿ ಅಹಿತಕರ ಘಟನೆ; ನೂಕು ನುಗ್ಗಲಿಗೆ ಸಿಲುಕಿ ಕಾಲು ಕಳೆದುಕೊಂಡ ಭಕ್ತ