ಲಾಹೋರ್: ತಮ್ಮ ಇಚ್ಛೆಗೆ ಮಗಳು ಪ್ರೀತಿಸಿ ಮದುವೆಯಾದಳು ಎಂಬ ಕೋಪದಿಂದ ಪಾಕಿಸ್ತಾನದ ವ್ಯಕ್ತಿಯೊಬ್ಬರು ತನ್ನಿಬ್ಬರು ಮಕ್ಕಳು, ನಾಲ್ವರು ಮೊಮ್ಮಕ್ಕಳು ಸೇರಿದಂತೆ ತಮ್ಮ ಮನೆಯ 7 ಜನರು ಜೀವಂತವಾಗಿ ಸುಟ್ಟು ಹಾಕಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ಈ ಮರ್ಯಾದಾ ಹತ್ಯೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಜಫರ್ಘರ್ ಜಿಲ್ಲೆಯಲ್ಲಿ ಈ ಮರ್ಯಾದಾ ಹತ್ಯೆ ನಡೆದಿದ್ದು, ಆರೋಪಿ ಮನ್ಸೂರ್ ಹುಸೇನ್ ತನ್ನ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಅವರ ಇಬ್ಬರು ಹೆಣ್ಣು ಮಕ್ಕಳು ಫೌಝಿಯಾ ಬೀಬಿ ಮತ್ತು ಖುರ್ಷಿದ್ ಮಾಯ್, ಖುರ್ಷಿದ್ ಮಾಯ್ ಅವರ ಗಂಡ ಸೇರಿದಂತೆ ನಾಲ್ವರು ಮೊಮ್ಮಕ್ಕಳು ಕೂಡ ಬೆಂಕಿಯಿಂದ ಸಜೀವ ದಹನವಾಗಿದ್ದಾರೆ.
ಬೆಂಕಿಯಿಂದ ಪಾರಾಗಿರುವ ಮನ್ಸೂರ್ ಹುಸೇನ್ ಅವರ ಅಳಿಯ ಮೊಹಬೂಬ್ ಅಹ್ಮದ್ ತನ್ನ ಮಾವ ಮತ್ತು ಆತನ ಮಗ ಸಬೀರ್ ಹುಸೇನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ವ್ಯಾಪಾರಕ್ಕೆಂದು ಮುಲ್ತಾನ್‍ನಲ್ಲಿದ್ದೆ. ಆದರೆ ನಾನು ಹಿಂದಿರುಗಿ ಮನೆಯ ಬಳಿ ಬಂದಾಗ ಮನೆ ಹೊತ್ತಿ ಉರಿಯುತ್ತಿತ್ತು. ಮನೆಯಿಂದ ಮನ್ಸೂರ್ ಹುಸೇನ್, ಸಬೀರ್ ಹುಸೇನ್ ಹೋಗುತ್ತಿರುವುದನ್ನು ನಾನು ನೋಡಿದೆ. ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮನ್ಸೂರ್ ಹುಸೇನ್ ಮತ್ತು ಆತನ ಮಗ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಈ ಘಟನೆಯಲ್ಲಿ ಮನ್ಸೂರ್ ಹುಸೇನ್ ಅವರ 4 ತಿಂಗಳ ಮಗು ಸೇರಿದಂತೆ 4 ಮಕ್ಕಳಿ ಕೂಡ ಸಾವನ್ನಪ್ಪಿದ್ದಾರೆ. ದೂರಿನ ಪ್ರಕಾರ, ಫೌಝಿಯಾ ಬೀಬಿ ಮತ್ತು ಮೆಹಬೂಬ್ ಅಹ್ಮದ್ 2020ರಲ್ಲಿ ಪ್ರೇಮ ವಿವಾಹವಾಗಿದ್ದರು. ಇದು ಮನ್ಸೂರ್ ಹುಸೇನ್ ಮನೆಯವರಿಗೆ ಇಷ್ಟವಿರಲಿಲ್ಲ. ತನ್ನ ಮಗಳು ತನ್ನ ಇಷ್ಟಕ್ಕೆ ವಿರುದ್ಧವಾಗಿ ಪ್ರೇಮ ವಿವಾಹವಾಗಿದ್ದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಮಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಆಕೆಯನ್ನೂ ಸೇರಿಸಿದಂತೆ ಮನೆಯೊಳಗೆ ಇದ್ದ 7 ಜನರನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಬೀಬಿ ಅವರ ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Murder: ಉತ್ತರ ಪ್ರದೇಶದಲ್ಲಿ ಕೋರ್ಟ್ ಒಳಗೇ ವಕೀಲನಿಗೆ ಗುಂಡು ಹಾರಿಸಿ ಬರ್ಬರ ಹತ್ಯೆ
Murder: ಅಪ್ಪ-ಅಮ್ಮನನ್ನು ಕೊಚ್ಚಿ ಕೊಂದಿದ್ದ ವ್ಯಕ್ತಿಗೆ 28 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ ಪ್ರಕಟ
Published On - 3:56 pm, Tue, 19 October 21