Bengaluru: ನಿರ್ಮಾಣ ಹಂತದ ಕಟ್ಟಡದ ಸೆಲ್ಲರ್‌ಗೆ ಬಿದ್ದು ಬಾಲಕ ಸಾವು
Karnataka News: ಒಂದು ವಾರದಿಂದ ಐವರು ಬಾಲಕರು ಈಜಾಡಲು ಬರುತ್ತಿದ್ದರು. ವಾರದಿಂದ ಮಕ್ಕಳು ಈಜಾಡಲು ಬರುತ್ತಿದ್ದರು ಯಾರೂ ಎಚ್ಚರಿಸಿರಲಿಲ್ಲ. ಇಂದು ಕೂಡ ಬಾಲಕರು ಈಜಾಡಲು ಬಂದಿದ್ದರು. ಈ ವೇಳೆ ಬೇಸ್ಮೆಂಟ್ ನೀರಿನಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ್ದಾನೆ.

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸೆಲ್ಲರ್‌ಗೆ ಬಿದ್ದು ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೆಲ್ಲರ್‌ಗೆ ಬಿದ್ದು 14 ವರ್ಷದ ಚಂದ್ರು ದುರ್ಮರಣವನ್ನಪ್ಪಿದ್ದಾನೆ. ಆಟವಾಡುವಾಗ ಆಯತಪ್ಪಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಅಂದಾಜಿಸಲಾಗಿದೆ. ಅಂಬೇಡ್ಕರ್ ಆಸ್ಪತ್ರೆಗೆ ಬಾಲಕನ ಮೃತದೇಹ ಸ್ಥಳಾಂತರ ಮಾಡಲಾಗಿದೆ.
ಬಾಲಕ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ. ಟ್ಯಾನರಿ ರಸ್ತೆಯ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ. ತಂದೆ ಮುತ್ತು ಮೇಸ್ತ್ರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ದಸರಾ ಹಿನ್ನಲೆ ಶಾಲೆಗೆ ರಜೆ ಇತ್ತು. ಹೀಗಾಗಿ ಒಂದು ವಾರದಿಂದ ಐವರು ಬಾಲಕರು ಈಜಾಡಲು ಬರುತ್ತಿದ್ದರು. ವಾರದಿಂದ ಮಕ್ಕಳು ಈಜಾಡಲು ಬರುತ್ತಿದ್ದರು ಯಾರೂ ಎಚ್ಚರಿಸಿರಲಿಲ್ಲ. ಇಂದು ಕೂಡ ಬಾಲಕರು ಈಜಾಡಲು ಬಂದಿದ್ದರು. ಈ ವೇಳೆ ಬೇಸ್ಮೆಂಟ್ ನೀರಿನಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ್ದಾನೆ. ಸದ್ಯ ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಕಟ್ಟಡಲ್ಲಿ ನಿಂತಿರುವ ಮಳೆ ನೀರನ್ನ ತೆರವು ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಟ್ಟಡದ ಬೇಸ್ ಮೆಂಟ್ ನೀರು ತೆರವು ಮಾಡಲಾಗುತ್ತಿದೆ.
ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ. ಪೀಣ್ಯ ಬಳಿಯ ನೆಲಗದರನಹಳ್ಳಿಯ ಶಿವಪುರ ಬಳಿ ಒಡಿಶಾ ಮೂಲದ ಮನೋಜ್ ಕುಮಾರ್(30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಮನೋಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಲು ಕಾರಣಗಳೇನು ಎಂದು ತಿಳಿದುಬಂದಿಲ್ಲ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರವೇ ಹೋರಾಟಗಾರರ ಕೇಸ್ ಹಿಂಪಡೆಯಲು ಮನವಿ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರವೀಣ್ ಕುಮಾರ್ ಶೆಟ್ಟಿ ಮನವಿ ಮಾಡಿದ್ದಾರೆ. ಜೊತೆಗೆ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆಗೆ ಅನುಮತಿಗೆ ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.
ಧಾರವಾಡ: 10 ತಿಂಗಳ ಗಂಡು ಮಗು ಅನುಮಾನಾಸ್ಪದವಾಗಿ ಸಾವು 10 ತಿಂಗಳ ಗಂಡು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ. ನಿನ್ನೆ ಅಸ್ವಸ್ಥಗೊಂಡಿದ್ದ ಮಗು ತನ್ವೀರ್ ಅಗಸಿಮನಿ ಸಾವನ್ನಪ್ಪಿದೆ. ಧಾರವಾಡ ಜಿಲ್ಲಾ ಆಸ್ಪತ್ರೆಗೆ ಮಗು ತರುವಷ್ಟರಲ್ಲಿ ಸಾವು ಸಂಭವಿಸಿದೆ. ಮಗು ಶವದಿಂದ ವಾಸನೆ ಬರುತ್ತಿದ್ದ ಹಿನ್ನೆಲೆ ಅನುಮಾನ ಉಂಟಾಗಿದೆ. ತಂದೆ ಮೊಹಮ್ಮದ್ ಅಲಿ ವಿರುದ್ಧ ಸಮ್ರೀನ್ ಆರೋಪ ಮಾಡಿದ್ದಾರೆ. ಮಗುವಿನ ತಂದೆ, ತಾಯಿ ನಡುವೆ ಆರೋಪ, ಪ್ರತ್ಯಾರೋಪ ಕೇಳಿಬಂದಿದೆ. ತಂದೆ, ತಾಯಿ ಜಗಳದಿಂದ ಮಗುವಿನ ಶವ ಜಿಲ್ಲಾಸ್ಪತ್ರೆಯಲ್ಲೇ ಉಳಿಯುವಂತಾಗಿದೆ. ಧಾರವಾಡ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ: ಮಹಿಳೆಗೆ ಅನೈತಿಕ ಸಂಬಂಧ ಇದೆ ಎಂದು ಥಳಿತ ಮಹಿಳೆಗೆ ಅನೈತಿಕ ಸಂಬಂಧ ಇದೆ ಎಂದು ಅರೆಬೆತ್ತಲೆ ಮಾಡಿ ಮಹಿಳೆ ಒಬ್ಬಾಕೆಗೆ ಹಿಗ್ಗಾಮುಗ್ಗಾ ಥಳಿಸಿದ ಆರೋಪ ಕೇಳಿಬಂದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಕೇರಿಯಲ್ಲಿ ಘಟನೆ ನಡೆದಿದೆ. ಮಹಿಳೆಯನ್ನು ಗ್ರಾಮದ ನಡು ರಸ್ತೆಯಲ್ಲಿ ಎಳೆದು ಅರೆಬೆತ್ತಲೆ ಮಾಡಿ ಥಳಿಸಿರುವ ಆರೋಪ ಕೇಳಿಬಂದಿದೆ. ಗಾಯಾಳು ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಚಪ್ಪ, ಬಸು, ಮಂಜುನಾಥ, ಅಂದಪ್ಪ, ಸಿದ್ದವ್ವ, ವಿಜಯಲಕ್ಷ್ಮೀ, ಬಸಮ್ಮ ವಿರುದ್ಧ ಹಲ್ಲೆ ಆರೋಪ ಇದೆ. ಆದರೆ, ಈ ಬಗ್ಗೆ ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧ ಹಲ್ಲೆಗೊಳಗಾದವರು ಆರೋಪ ಮಾಡಿದ್ದಾರೆ.
ರಾಯಚೂರು: ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ವಶ ಉಪ್ಪರಾಳದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆಯಲಾಗಿದೆ. ರಾಯಚೂರು ತಾಲೂಕಿನ ಉಪ್ಪರಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಉಪ್ಪರಾಳದ ಸಿದ್ದನಗೌಡ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ವಶಪಡಿಸಲಾಗಿದೆ.
ಇದನ್ನೂ ಓದಿ: ಹಾಸನ: ಸಮವಸ್ತ್ರದಲ್ಲೇ ಪೊಲೀಸರ ಎಣ್ಣೆ ಪಾರ್ಟಿ; ವಿಡಿಯೋ ವೈರಲ್
ಇದನ್ನೂ ಓದಿ: ತುಮಕೂರು: ಸ್ತ್ರೀಯರ ಶೌಚಾಲಯದಲ್ಲಿ ವಿಡಿಯೋ ಮಾಡುತ್ತಿದ್ದವನಿಗೆ ಗೂಸಾ