ಕಲಬುರಗಿ, ಸೆ.15: ಜಿಲ್ಲೆಯ ಚಿತ್ತಾಪುರ (Chittapur)ತಾಲೂಕಿನ ಅಲ್ಲೂರು ಬಿ ಗ್ರಾಮದಲ್ಲಿ ನಿನ್ನೆ(ಸೆ.14) ಮಧ್ಯಾಹ್ನ ಹನ್ನೆರಡು ಗಂಟೆ ಸಮಯದಲ್ಲಿ ಗುಂಡಿನ ಸದ್ದು ಕೇಳಿದೆ. ಹಾಡಹಗಲೇ ಕೇಳಿಸಿದ ಗುಂಡಿನ ಸದ್ದು ಓರ್ವ ಮಹಿಳೆಯ ಜೀವವನ್ನೇ ಬಲಿ ಪಡೆದಿದೆ. ಘಟನೆಯಲ್ಲಿ ಮೂವತ್ತಾರು ವರ್ಷದ ಹನಮವ್ವ ಎನ್ನುವ ಮಹಿಳೆ ಗುಂಡೇಟು ತಗುಲಿದ ಪರಿಣಾಮ, ಸ್ಥಳದಲ್ಲೇ ಬಾರದ ಲೋಕಕ್ಕೆ ಹೋಗಿದ್ದಾರೆ. ತಾಳಿ ಕಟ್ಟಿ ಸಪ್ತಪದಿ ತುಳಿದು, ಜೀವನದ ಕೊನೆಯ ಕ್ಷಣದವರೆಗೆ ಚನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ ಪತಿಯೇ ಕೊಲೆಗೈದಿದ್ದಾನೆ. ಹೌದು, ಹನಮವ್ವಳನ್ನು ಆಕೆಯ ಪತಿ ಬಸವರಾಜ್, ಸಿಂಗಲ್ ಬ್ಯಾರಲ್ ಗನ್ನಿಂದ ಎರಡು ಗುಂಡು ಹೊಡೆದು ಕೊಲೆ ಮಾಡಿದ್ದಾನೆ.
ಇನ್ನು ಹನ್ನೆರಡು ವರ್ಷದ ಹಿಂದೆ ಅಲ್ಲೂರು ಬಿ ಗ್ರಾಮದ ಹನಮವ್ವಳನ್ನು, ಪಕ್ಕದ ಅಲ್ಲೂರು ಕೆ ಗ್ರಾಮದ ಬಸವರಾಜ್ ಜೊತೆ ಮದುವೆ ಮಾಡಲಾಗಿತ್ತು. ಇತ ಬೇರ್ಯಾರು ಅಲ್ಲ, ಹನಮವ್ವಳ ಸೋದರ ಮಾವ. ಆದ್ರೆ, ಮದುವೆಯಾದ ಮೇಲೆ ಪ್ರತಿನಿತ್ಯ ಕುಡಿದು ಬಂದು ಪತ್ನಿಯನ್ನು ಹೊಡೆಯುವುದೇ ಬಸವರಾಜ್ನ ಕೆಲಸವಾಗಿತ್ತಂತೆ. ಹೀಗಾಗಿ ಹೆತ್ತವರು ಮಗಳನ್ನು ಅಲ್ಲೂರು ಬಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ಗ್ರಾಮದಲ್ಲೇ ಪ್ರತ್ಯೇಕ ಮನೆಯನ್ನು ಕೂಡ ಮಾಡಿಕೊಟ್ಟಿದ್ದರು. ಪತ್ನಿ ಜೊತೆಯೇ ಇದ್ದ ಬಸವರಾಜ್, ಇಲ್ಲಿ ಕೂಡ ಪ್ರತಿನಿತ್ಯ ಕುಡಿದು ಬಂದು ಪತ್ನಿ ಜೊತೆ ಜಗಳ ಮಾಡಿ ಹಲ್ಲೆ ಮಾಡುವುದು ಮಾಡುತ್ತಿದ್ದನಂತೆ.
ದಂಪತಿಗೆ ನಾಲ್ಕು ಮಕ್ಕಳು ಕೂಡ ಇವೆ. ಹನಮವ್ವ ತಾನೇ ಸ್ವತಃ ಕೂಲಿ ಕೆಲಸ ಮಾಡಿ ಮಕ್ಕಳನ್ನು ಕೂಡ ಸಾಕಿದ್ದಳು. ನಿನ್ನೆ ಮನೆಗೆ ಕುಡಿದು ಬಂದಿದ್ದ ಬಸವರಾಜ್ಗೆ ಪ್ರತಿನಿತ್ಯ ಕುಡಿದು ಬರ್ತಿಯಾ, ಮಕ್ಕಳಿಗೆ ತುಂಡು ಬಟ್ಟೆಯನ್ನು ಕೂಡ ನೀನು ಕೊಡಿಸಿಲ್ಲ ಎಂದು ಹೇಳಿದ್ದಳಂತೆ. ಹೀಗಾಗಿ ಬಸವರಾಜ್, ಪತ್ನಿ ಜೊತೆ ಜಗಳ ಮಾಡಿದ್ದ. ಮುಂಜಾನೆ ಹೆತ್ತವರ ಮನೆಯಲ್ಲಿ ಹನಮವ್ವ ಇದ್ದಾಗ, ಅಲ್ಲಿಯೇ ಬಂದಿದ್ದ ಬಸವರಾಜ್ ಸ್ವಲ್ಪ ಹೊರಗೆ ಬಾ ಅಂತ ಕರೆದಿದ್ದ. ತಾನು ಬೇಟೆಯಾಡಲು ಹೋಗ್ತಿದ್ದೇನೆ, ನನಗೆ ಬುತ್ತಿಯನ್ನು ಕಟ್ಟು ಎಂದು ಹೇಳಿದ್ದ. ಆದ್ರೆ, ಅಮವಾಸ್ಯೆಯಿದೆ, ಮನೆಯಲ್ಲೇ ಸುಮ್ಮನೇ ಇರು ಎಂದು ಪತ್ನಿ ಹೇಳಿದ್ದಳು. ಇದರಿಂದ ಸಿಟ್ಟಾದ ಪತಿ ಬಸವರಾಜ್, ಪತ್ನಿ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.
ಸದ್ಯ ಹನಮವ್ವಳ ಕೊಲೆಗೆ ಸಂಬಂಧಿಸಿದಂತೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ನಂತರ ಹನಮವ್ವಳ ಪತಿ ಬಸವರಾಜ್ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ. ಮತ್ತೊಂದೆಡೆ ಸಿಂಗಲ್ ಬ್ಯಾರಲ್ ಗನ್ ಯಾರದ್ದು, ಆರೋಪಿ ಕೈಗೆ ಗನ್ ಸಿಕ್ಕಿದ್ದು ಹೇಗೆ ಅನ್ನೋದರ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದ್ರೆ, ಪಾಪಿ ಪತಿಯ ಕೃತ್ಯಕ್ಕೆ ಇದೀಗ ನಾಲ್ಕು ಮಕ್ಕಳು ತಾಯಿಯಿಲ್ಲದೇ ತಬ್ಬಲಿಯಾಗಿದ್ದು ಮಾತ್ರ ದುರಂತವೇ ಸರಿ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ