ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕದಿಬ್ಬೂರಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನವೇ ಕೊಲೆಯೊಂದು ನಡೆದಿತ್ತು. ಹೌದು ಕುಡಿತದ ಚಟಕ್ಕೆ ದಾಸನಾಗಿದ್ದ ಅಶ್ವತ್ಥಪ್ಪ ಎಂಬಾತ ಕುಡಿಯುವುದಕ್ಕೆ ಪತ್ನಿ ಬಳಿ ಹಣ ಕೇಳಿದ್ದಾನೆ. ಪತ್ನಿ ಹಣ ಇಲ್ಲ ಎಂದಿದ್ದಾಳೆ ಇದರಿಂದ ಕೋಪಗೊಂಡ ಅಶ್ವತ್ಥಪ್ಪ, ನಿನಗೆ ಅಕ್ರಮ ಸಂಬಂಧವಿದೆ. ಅದಕ್ಕೆ ನನಗೆ ಹಣ ಕೊಡುತ್ತಿಲ್ಲವೆಂದು ರಂಪಾಟ ಮಾಡಿ, ಕೈಗೆ ಸಿಕ್ಕ ಮರದ ತುಂಡಿನಿಂದ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾನೆ. ಆಗ ಗಾಯಿತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಹೌದು ಇದೇ ಗ್ರಾಮದ 47 ವರ್ಷದ ಅಶ್ವತ್ಥಪ್ಪ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿಯ ಬೋಯಿನಹಳ್ಳಿ ಗ್ರಾಮದ 39 ವರ್ಷದ ಗಾಯಿತ್ರಿ ಇಬ್ಬರೂ ಮೊದಲೇ ಬೇರೆ ಬೇರೆ ವಿವಾಹಿತರಾಗಿದ್ದರು. ಆದರೂ ಪರಸ್ಪರ ಇಬ್ಬರೂ ಪ್ರೀತಿಸಿ 19 ವರ್ಷಗಳ ಹಿಂದೆ ಮದುವೆಯನ್ನು ಮಾಡಿಕೊಂಡಿದ್ದರು. ದಂಪತಿಗೆ 18 ವರ್ಷದ ಮಗಳು, 16 ವರ್ಷದ ಮಗನು ಇದ್ದಾನೆ. ಮದುವೆಯಾಗಿ 10 ವರ್ಷ ಚೆನ್ನಾಗಿದ್ದ ಜೋಡಿ ನಂತರ ಪರಸ್ಪರ ಕಾದಾಟಕ್ಕಿಳಿದಿದ್ದರು.
ಮದ್ಯವ್ಯಸನಿಯಾಗಿದ್ದ ಗಂಡ
ಅಶ್ವತ್ಥಪ್ಪ ಹಾಗೂ ಗಾಯಿತ್ರಿ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಅಶ್ವತ್ಥಪ್ಪ ಬಂಡೆ ಕೆಲಸಕ್ಕೆ ಹೋದರೆ ಗಾಯಿತ್ರಿ ಜಮೀನು ಕೆಲಸಕ್ಕೆ ಹೋಗುತ್ತಿದ್ದಳು. ಇದ್ದ ಇಬ್ಬರು ಮಕ್ಕಳು ಶಾಲೆ, ಕಾಲೇಜು ಎಂದು ಹೋಗುತ್ತಿದ್ದರು. ಆದರೆ ಕಳೆದ ಐದಾರು ವರ್ಷಗಳಿಂದ ಅಶ್ವತ್ಥಪ್ಪ ಮದ್ಯವ್ಯಸನಿಯಾಗಿದ್ದ. ಇದರಿಂದ ರಾತ್ರಿಯಾದರೆ ಸಾಕು ಕಂಠಪೂರ್ತಿ ಕುಡಿದು ಬಂದು ಪತ್ನಿ, ಮಕ್ಕಳ ಜೊತೆ ಕ್ಯಾತೆ ತೆಗೆಯುತ್ತಿದ್ದ. ಮಕ್ಕಳು ಎನ್ನುವುದನ್ನು ಲೆಕ್ಕಿಸದೆ ಮಕ್ಕಳು ಸಮೇತ ಪತ್ನಿಯನ್ನು ಥಳಿಸುತ್ತಿದ್ದ. ಇದರಿಂದ ಅಶ್ವತ್ಥಪ್ಪನ ಕಾಟಕ್ಕೆ ಪತ್ನಿ ಮಕ್ಕಳು ಬೇಸತ್ತು ಹೋಗಿದ್ದರು. ಹಗಲೆಲ್ಲ ಕೂಲಿ ಮಾಡುವುದು, ರಾತ್ರಿಯಾದರೆ ಹೆಂಡತಿ ಮಕ್ಕಳ ಜೊತೆ ಗಲಾಟೆ ಮಾಡುವುದು ಅಶ್ವತ್ಥಪ್ಪನ ಕಾಯಕವಾಗಿತ್ತು. ಇತ್ತೀಚಿಗೆ ರಾತ್ರಿಯಾದರೆ ಸಾಕು ಕುಡಿಯುವುದಕ್ಕೆ ದುಡ್ಡು ಕೊಡು ಎಂದು ಪತ್ನಿಯ ಜೊತೆ ಜಗಳ ಕಾಯುತ್ತಿದ್ದ. ಹಣ ಕೊಡದಿದ್ದರೆ ಮನಸ್ಸೋ ಇಚ್ಚೆ ಪತ್ನಿ ಮಕ್ಕಳನ್ನು ಥಳಿಸುತ್ತಿದ್ದ. ಬೆಪ್ಪ ತಂದೆಯ ಕಾಟದಿಂದ ಮಗಳು ಮೇಘನ ರಾತ್ರಿಯಾದರೆ ಸಾಕು ತಂದೆ ಮನೆ ಬಿಟ್ಟು ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದಳು.
ಇದನ್ನೂ ಓದಿ:ಬಳ್ಳಾರಿ: ಡಿಎಆರ್ ಪೇದೆಯ ಬರ್ಬರ ಕೊಲೆ; ಪತ್ನಿಯಿಂದಲೇ ಹತ್ಯೆಯಾದ್ನಾ ಇಬ್ಬರ ಹೆಂಡತಿಯರ ಮುದ್ದಿನ ಪೊಲೀಸ್?
ಇನ್ನು ಶಾಲೆಗೆ ಹೋಗುತ್ತಿದ್ದ 16 ವರ್ಷದ ಮಗನನ್ನು ಕೆಲಸಕ್ಕೆ ಹೋಗುವಂತೆ ಅಶ್ವತ್ಥಪ್ಪ ಗಲಾಟೆ ಮಾಡುತ್ತಿದ್ದ. ಇದರಿಂದ ಆತನ ಮಗ ಸಹ ಶಾಲೆ ತೊರೆದು ಗ್ಯಾರೇಜ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಇತ್ತ ಅಶ್ವತ್ಥಪ್ಪನ ಉಪಟಳ ಹೆಚ್ಚಾಗಿತ್ತು. ಮೊನ್ನೆ ಮಾರ್ಚ್ 22 ಊರಿಗೆ ಊರೇ ಯುಗಾದಿ ಹಬ್ಬದ ಸಂಭ್ರಮದಲ್ಲಿತ್ತು. ಅಂದು ಮಟಮಟ ಮಧ್ಯಾಹ್ನ 12.30ರ ಸಮಯದಲ್ಲಿ ಮನೆಗೆ ಬಂದ ಅಶ್ವತ್ಥಪ್ಪ ಕುಡಿಯುವುದಕ್ಕೆ ಪತ್ನಿ ಬಳಿ ಹಣ ಕೇಳಿದ್ದಾನೆ. ಪತ್ನಿ ಹಣ ಇಲ್ಲ ಎಂದಿದ್ದಾಳೆ ಇದರಿಂದ ಕೋಪಗೊಂಡ ಅಶ್ವತ್ಥಪ್ಪ, ನಿನಗೆ ಅಕ್ರಮ ಸಂಬಂಧವಿದೆ. ಅದಕ್ಕೆ ನನಗೆ ಹಣ ಕೊಡುತ್ತಿಲ್ಲವೆಂದು ರಂಪಾಟ ಮಾಡಿ, ಕೈಗೆ ಸಿಕ್ಕ ಮರದ ತುಂಡಿನಿಂದ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾನೆ. ಆಗ ಗಾಯಿತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಮತ್ತೊಂದೆಡೆ ಅಶ್ವತ್ಥಪ್ಪ ಕುಡಿಯುವುದಕ್ಕೆ ಹಣ ಸಿಗಲಿಲ್ಲವೆಂದರೆ ತವರುಮನೆಗೆ ಹೋಗಿ ಹಣ ತೆಗೆದುಕೊಂಡು ಬಾ ಎಂದು ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದನಂತೆ. ಪತ್ನಿಯನ್ನ ಮನೆಯಿಂದ ಹೊರಗೆ ಹಾಕುತ್ತಿದ್ದನಂತೆ. ಇದರಿಂದ ಗಾಯಿತ್ರಿ ಮನೆಯವರು ನ್ಯಾಯ ಪಂಚಾಯ್ತಿ ಮಾಡಿ ಸಮಾಧಾನ ಮಾಡಿದ್ದರಂತೆ ಆದರೂ ಬುದ್ದಿ ಕಲಿಯದ ಅಶ್ವತ್ಥಪ್ಪ ಕೊನೆಗೆ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ:ಕೋಲಾರ: ಕೌಟುಂಬಿಕ ಕಲಹ, ಚಾಕುವಿನಿಂದ ಇರಿದು ಮೈದುನನ ಕೊಲೆ
ಯುಗಾದಿ ದಿನ ಹಾಡಹಗಲೇ ಪತ್ನಿಯನ್ನು ಬರ್ಬರವಾಗಿ ಕೊಂದು, ತಲೆ ಮರೆಸಿಕೊಂಡಿದ್ದ ಆರೋಪಿ ಅಶ್ವತ್ಥಪ್ಪನನ್ನು ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. ಆದರೆ ತಮ್ಮದಲ್ಲದ ತಪ್ಪಿಗೆ ವಯಸ್ಸಿಗೆ ಬಂದ ಮಗಳು ಹಾಗೂ ಅಪ್ರಾಪ್ತ ಮಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ವರದಿ:ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ