ತುಮಕೂರು, ಡಿ.15: ಸೈಬರ್ (Cyber crime) ವಂಚಕರು ಜನರಿಗೆ ಭಯ ಹುಟ್ಟಿಸಿ ಹಣ ವಸೂಲಿ ಮಾಡುವ ಕುತಂತ್ರವನ್ನು ರೂಪಸಿದ್ದಾರೆ. ಮುಂಬೈ ಪೊಲೀಸರ ಹೆಸರಿನಲ್ಲಿ ಮಹಿಳೆಯನ್ನ ಬೆದರಿಸಿ 27 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಇನ್ನೊಂದೆಡೆ, ಸೈಬರ್ ವಂಚಕರ ನಗ್ನ ವಿಡಿಯೋ ಕಾಲ್ ಬಲೆಗೆ ಸಿಲುಕಿ ನಿವೃತ್ತ ಸಹಾಯಕ ನಿರ್ದೇಶಕರೊಬ್ಬರು 6.13 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಮಹೇಂದ್ರಿ ಎಂಬ ವೃದ್ಧೆಯಿಂದ ಸೈಬರ್ ಖದೀಮರು 27 ಲಕ್ಷ ದೋಚಿದ್ದಾರೆ. ಮಹೇಂದ್ರಿ ಎಂಬವರಿಗೆ ದೂರವಾಣಿ ಕರೆ ಮಾಡಿದ ಸೈಬರ್ ಖದೀಮರು, ನಾವು ಮುಂಬೈ ಪೊಲೀಸರು, ನೀವು ಸಾರ್ವಜನಿಕರಿಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದೀರಿ ಎಂದು ದೂರು ದಾಖಲಾಗಿದೆ. ಇದನ್ನು ಮುಚ್ಚಿ ಹಾಕಲು ಹಣ ನೀಡುವಂತೆ ಬೇಡಿಕೆ ಇಟ್ಟು 27 ಲಕ್ಷ ಹಣ ಪೀಕಿದ್ದಾರೆ. ಬಳಿಕ ಸೈಬರ್ ವಂಚಕರ ಮೋಸದ ಬಲೆಗೆ ಬಿದ್ದಿರುವುದು ತಿಳಿದ ಮಹೇಂದ್ರಿ, ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಸೈಬರ್ ವಂಚಕರ ನಗ್ನ ವಿಡಿಯೋ ಬಲೆಗೆ ಸಿಲುಕಿ ನಿವೃತ್ತ ಸಹಾಯಕ ನಿರ್ದೇಶಕರೊಬ್ಬರು 6.13 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಾಣಿಕ್ಯಾಚಾರ್ ಎಂಬವರಿಗೆ ವಾಟ್ಸ್ಆ್ಯಪ್ ಮೂಲಕ ವಿಡಿಯೋ ಕರೆ ಬಂದಿದೆ. ವಿಡಿಯೋ ಕಾಲ್ ರಿಸೀವ್ ಮಾಡಿದ ತಕ್ಷಣ ಸೈಬರ್ ಖದೀಮರು ನಗ್ನ ಚಿತ್ರ ಪ್ರದರ್ಶನ ಮಾಡಿ ಸ್ಕ್ರೀನ್ ರೆಕಾರ್ಡಿಂಗ್ ಮಾಡಿ ಬಳಿಕ ಬೆದರಿಕೆ ಹಾಕಲು ಆರಂಭಿಸಿದ್ದಾರೆ.
ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಭೀತಿಗೊಂಡ ಮಾಣಿಕ್ಯಚಾರ್, ಒಟ್ಟಾರೆಯಾಗಿ 6.13 ಲಕ್ಷ ಹಣವನ್ನ ವಂಚಕರಿಗೆ ಕಳಿಸಿದ್ದಾರೆ. ಬಳಿಕ ತುಮಕೂರು ಸೈಬರ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ