ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ: 15 ದಿನದಲ್ಲಿ ಮೂರು ಕೋಟಿ ಕಳೆದುಕೊಂಡ ಏಳು ಜನರು, ಏನಿದು ಡಿಜಿಟಲ್ ಅರೆಸ್ಟ್?
ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ 15 ದಿನಗಳಲ್ಲಿ ಸೈಬರ್ ಅಪರಾಧಿಗಳು ಏಳು ಮಂದಿಗೆ ಒಟ್ಟು ಮೂರು ಕೋಟಿ ರೂಪಾಯಿ ವಂಚಿಸಿದ್ದು, ಈ ಬಗ್ಗೆ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು, ಡಿ.15: ನಗರದಲ್ಲಿ (Bengaluru) ಸೈಬರ್ ಕ್ರೈಂಗಳು (Cyber Crime) ಹೆಚ್ಚಾಗುತ್ತಿದ್ದು, ಇದನ್ನು ನಿಗ್ರಹಿಸಲು ಪೊಲೀಸರು ಶ್ರಮವಹಿಸುತ್ತಿದ್ದಾರೆ. ಈ ನಡುವೆ, ಡಿಜಿಟಲ್ ಅರೆಸ್ಟ್ (Digital Arrest) ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಪ್ರಕರಣಗಳು ಬೆಳಕಿಗೆ ಬಂದಿದ್ದು, 15 ದಿನಗಳ ಅಂತರದಲ್ಲಿ 7 ಜನರಿಗೆ 3 ಕೋಟಿ ವಂಚಿಸಲಾಗಿದೆ. ಈ ಬಗ್ಗೆ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೈಬರ್ ಅಪರಾಧಿಗಳು ಪೊಲೀಸರು ಅಥವಾ ತನಿಖಾಸಂಸ್ಥೆ ಹೆಸರು ಹೇಳಿಕೊಂಡು ಜನರಿಗೆ ಕರೆ ಮಾಡಿ ವಂಚಿಸುತ್ತಿದ್ದಾರೆ. ನಿಮ್ಮ ಮನೆಗೆ ಪಾರ್ಸಲ್ ಬಂದಿದೆ ಎಂದು ಹೇಳುವ ಸೈಬರ್ ವಂಚಕರು, ಪೆಡೆಕ್ಸ್ ಅಥವಾ ಬೇರೆ ಕಂಪನಿ ಕೊರಿಯರ್ನಲ್ಲಿ ಪಾರ್ಸಲ್ ಬಂದಿದೆ. ನಿಮ್ಮ ದಾಖಲಾತಿಗಳು ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದೆ ಎಂದು ಹೇಳಿ ಭಯ ಹುಟ್ಟಿಸುತ್ತಾರೆ.
ಇದನ್ನೂ ಓದಿ: 11 ತಿಂಗಳಲ್ಲಿ 16 ಸಾವಿರ ಸೈಬರ್ ಪ್ರಕರಣಗಳು ದಾಖಲು! ಈ ವರ್ಷ ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ ಸಾಧ್ಯತೆ
ಬಳಿಕ ಸ್ಕೈಪ್ ಲಿಂಕ್ ನೀಡಿ ಲಾಗ್ಇನ್ ಆಗುವಂತೆ ತಿಳಿಸುವ ವಂಚಕರು, ಬಳಿಕ ಪೊಲೀಸ್ ಸಮವಸ್ತ್ರದಲ್ಲೇ ಸಂಭಾಷಣೆ ನಡೆಸುತ್ತಾರೆ. ನೀವು ವಿಚಾರಣೆಗೆ ಹಾಜರಾಗಬೇಕೆಂದು ಬೆದರಿಕೆ ಹಾಕುತ್ತಾರೆ. ವಿಚಾರಣೆಗೆ ವಿನಾಯಿತಿ ಬೇಕಾದರೆ ಹಣ ಹಾಕಿ, ಇಲ್ಲದಿದ್ದರೆ ಬಂಧಿಸುತ್ತೇವೆ ಎಂದು ಬೇಡಿಕೆ ಇಡುತ್ತಾರೆ.
ಬಳಿಕ ಗಂಟೆಗಳ ಕಾಲ ಸ್ಕೈಪ್ ಬಿಟ್ಟು ಬೇರೆ ಕಡೆ ಹೋಗಲು ಬಿಡುವುದಿಲ್ಲ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಇಲ್ಲೇ ಇರಬೇಕೆಂದು ಬೆದರಿಕೆ ಹಾಕಲಾಗುತ್ತದೆ. ಇದೇ ರೀತಿ ಹೆಚ್ಎಸ್ಆರ್ ಲೇಔಟ್ ಮೂಲದ ವೃದ್ಧ ದಂಪತಿಗೆ 1 ಕೋಟಿ 97 ಲಕ್ಷ ರೂಪಾಯಿ ವಂಚನೆ ಎಸಗಿದ್ದಾರೆ. ಇದೇ ರೀತಿ 15 ದಿನಗಳ ಅಂತರದಲ್ಲಿ ಏಳು ಮಂದಿಗೆ 3 ಕೋಟಿ ವಂಚಿಸಲಾಗಿದೆ.
ಇದನ್ನೂ ಓದಿ: ಲೋಕಾ ಬಲೆಯಲ್ಲಿರುವ ಉಪನ್ಯಾಸಕ ಮಹದೇವಸ್ವಾಮಿ ವಿರುದ್ಧ ಮತ್ತೊಂದು ಆರೋಪ: ಶಿಕ್ಷಕರಿಗೆ 70 ಕೋಟಿ ರೂ. ವಂಚನೆ
ಆದರೆ, ಸೈಬರ್ ಖದೀಮರ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ರಸ್ತೆಯಲ್ಲಿ, ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ ದೋಚುವ ಹಣಕ್ಕಿಂತ ಹತ್ತು ಪಟ್ಟು ಹೆಚ್ಚು ಹಣವನ್ನು ಸೈಬರ್ ಕಳ್ಳರು ಕೊಳ್ಳೆ ಹೊಡೆಯುತ್ತಿದ್ದಾರೆ. ಸದ್ಯ, ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ