ಕಾಶ್ಮೀರ: ಆತ್ಮಹತ್ಯೆ ತಡೆದ ಪುಟ್ಟ ಮಗಳ ಕತ್ತು ಹಿಸುಕಿ, ಚಾಕುನಿಂದ ಸೀಳಿ ಬರ್ಬರ ಹತ್ಯೆಗೈದ ಅಪ್ಪ
ಲೋಲಾಬ್ ಪ್ರದೇಶದ ಖುರ್ಹಾಮಾ ಗ್ರಾಮದಲ್ಲಿ ಇಕ್ಬಾಲ್ ತನ್ನ ಮನೆಯಿಂದ ಹೊರಬಂದಾಗ, ನಾಲ್ಕು ಮಕ್ಕಳಲ್ಲಿ ಒಬ್ಬಳಾದ ಅವರ ಮಗಳು ಕೂಡಾ ಆತನನ್ನು ಹಿಂಬಾಲಿಸಿದ್ದು, ಹಿಂತಿರುಗಲು ನಿರಾಕರಿಸಿದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಪ್ವಾರ ಜಿಲ್ಲೆಯಲ್ಲಿ 8 ವರ್ಷದ ಮಗುವನ್ನು ಭೀಕರವಾಗಿ ಹತ್ಯೆಗೈದ (Murder) ಐದು ದಿನಗಳ ನಂತರ, ಮಗಳ ಹತ್ಯೆಯ ಹಿಂದೆ ತಂದೆಯ ಕೈವಾಡವಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಯೋಜನೆಗೆ ಬಾಲಕಿ ಅಡ್ಡಿಯಾಗಿದ್ದಕ್ಕೆ ಅಪ್ಪನೇ ಮಗಳನ್ನು ಕೊಲೆ ಮಾಡಿದ್ದು,ಆತನನ್ನು ಪೊಲೀಸರು ಬಂದಿಸಿದ್ದಾರೆ. ವೃತ್ತಿಯಲ್ಲಿ ಡ್ರೈವರ್ ಆಗಿರುವ 45 ವರ್ಷದ ಇಕ್ಬಾಲ್ ಆತ್ಮಹತ್ಯೆ ಮಾಡಿಕೊಳ್ಳಲು ವಿಫಲವಾದ ನಂತರ ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತನಿಖೆಯ ಮೇಲ್ವಿಚಾರಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ಸಂಜೆ, ಇಕ್ಬಾಲ್ ತನ್ನ ಹೆಂಡತಿಯೊಂದಿಗೆ ಜಗಳದ ನಂತರ ಚಾಕು ಹಿಡಿದು ಮನೆಯಿಂದ ಹೊರಬಂದಾಗಬಾಲಕಿ ಆತನನ್ನು ತಡೆದಿದ್ದಳು.
ಅವನು ಅಲ್ಲಿಂದ ವಾಹನದಲ್ಲಿ ಹೋಗಲು ಅಣಿಯಾದಾಗ ಬಾಲಕಿ ಕೂಡಾ ಆ ವಾಹನ ಹತ್ತಿದ್ದಳು. ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಲೋಲಾಬ್ ಪ್ರದೇಶದ ಖುರ್ಹಾಮಾ ಗ್ರಾಮದಲ್ಲಿ ಇಕ್ಬಾಲ್ ತನ್ನ ಮನೆಯಿಂದ ಹೊರಬಂದಾಗ, ನಾಲ್ಕು ಮಕ್ಕಳಲ್ಲಿ ಒಬ್ಬಳಾದ ಅವರ ಮಗಳು ಕೂಡಾ ಆತನನ್ನು ಹಿಂಬಾಲಿಸಿದ್ದು, ಹಿಂತಿರುಗಲು ನಿರಾಕರಿಸಿದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲಿಂದ ಹೊರಟು ಹೋಗುವಂತೆ ಮಗಳಲ್ಲಿ ಮನವಿ ಮಾಡಿದ್ದು, ಆಕೆಯ ಮನವೊಲಿಸಲು ಇಕ್ಬಾಲ್ ಸುಮಾರು 45 ನಿಮಿಷ ಪ್ರಯತ್ನಿಸಿದ್ದಾನೆ. ಆಕೆಗೆ ಮಿಠಾಯಿ ಖರೀದಿಸಲು ₹ 10 ನೀಡಿದರೂ ಆಕೆ ಕೇಳಲಿಲ್ಲ. ಹುಡುಗಿಯೂ ವಾಹನದಲ್ಲಿ ಇದ್ದುದರಿಂದ, ಆಕೆಯ ಸಮ್ಮುಖದಲ್ಲಿ ಆತ್ಮಹತ್ಯೆ ಮಾಡುವುದು ಹೇಗೆ ಎಂದು ಅವನು ಯೋಚಿಸಿದ. ಕೋಪದ ಭರದಲ್ಲಿ ಆತ ಬಾಲಕಿಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಕುಪ್ವಾರದ ಹಿರಿಯ ಪೊಲೀಸ್ ಅಧೀಕ್ಷಕ ಯೋಗುಲ್ ಮನ್ಹಾಸ್ ಹೇಳಿದ್ದಾರೆ. ನಂತರ ಆಕೆಯ ಕತ್ತು ಸೀಳಿ, ಮೃತದೇಹವನ್ನು ಉರುವಲು ಶೇಖರಿಸುವ ಶೆಡ್‌ನಲ್ಲಿ ಎಸೆದಿದ್ದಾನೆ . ಇದಾಗಿ ಕೆಲವು ಗಂಟೆಗಳ ನಂತರ ಇಕ್ಬಾಲ್ ಮನೆಗೆ ಹೋಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಪೊಲೀಸರು ತನ್ನನ್ನು ಹಿಡಿಯುತ್ತಾರೆಂಬ ಆತಂಕದಲ್ಲಿ ಓಡಿದ್ದ ವ್ಯಕ್ತಿ ರೈಲ್ವೆ ಫ್ಲೈ ಓವರ್ನಿಂದ ಬಿದ್ದು ಮೃತ ಶಂಕೆ
ಮನೆಯವರು ಹುಡುಗಿಯ ಬಗ್ಗೆ ಕೇಳಿದಾಗ, ಅವಳು ತನ್ನೊಂದಿಗೆ ಬರುತ್ತಿಲ್ಲ ಎಂದು ಹಠಹಿಡಿದಿರುವುದಾಗಿ ಆತ ಸುಳ್ಳು ಹೇಳಿದ್ದಾನೆ. ಕನಿಷ್ಠ ನಾಲ್ಕು ಜನರು ಇಕ್ಬಾಲ್ ಜೊತೆಯಲ್ಲಿ ಹುಡುಗಿಯನ್ನು ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮಗಳನ್ನು ಕೊಂದ ನಂತರ, ಆತ ಆತ್ಮಹತ್ಯೆಗೆ ಪ್ರಯತ್ನಿಸಲಿಲ್ಲ ಎಂದು ಮನ್ಹಾಸ್ ಹೇಳಿದ್ದಾರೆ. ಹುಡುಗಿಯ ಕುಟುಂಬ ವಿಚಾರಿಸಿದಾಗ ಇಕ್ಬಾಲ್ ಪೊಲೀಸ್ ಠಾಣೆಗೆ ಹೋಗಿ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ಸಲ್ಲಿಸಿದ್ದಾನೆ.
ಆದರೆ ಅವರು ಪೊಲೀಸ್ ಠಾಣೆಯಿಂದ ಹಿಂದಿರುಗುವ ವೇಳೆಗೆ, ಕುಟುಂಬ ಮತ್ತು ಸಂಬಂಧಿಕರು ಉರುವಲು ಶೇಖರಣಾ ಶೆಡ್‌ನಿಂದ ಶವವನ್ನು ಪತ್ತೆ ಮಾಡಿದ್ದಾರೆ ಎಂದು ಎಸ್‌ಎಸ್‌ಪಿ ಹೇಳಿದರು.ಮಗುವಿನ ಅಂತಿಮ ಸಂಸ್ಕಾರಕ್ಕಾಗಿ ಸಾವಿರಾರು ಜನರು ಜಮಾಯಿಸಿದ್ದು ಮೊಹಮ್ಮದ್ ಇಕ್ಬಾಲ್ ಖತಾನಾಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ