ಕಲಬುರಗಿ: ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತೆ ಕಲಬುರಗಿ ನಗರದ ಸಂತೋಷ್ ಕಾಲೋನಿಯಲ್ಲಿ ದುಷ್ಕರ್ಮಿಗಳಿಗೆ ಚೆಲ್ಲಾಟ, ಬಡವಾಣೆ ನಿವಾಸಿಗಳಿಗೆ ಪ್ರಾಣ ಸಂಕಟವಾಗುತ್ತಿದೆ. ದುಷ್ಕರ್ಮಿಗಳು ಗಾಂಜಾ ಅಮಲಿನಲ್ಲಿ ತೇಲಾಡುತ್ತಾ ಬಡಾವಣೆಯ ಜನರ ನೆಮ್ಮದಿಯನ್ನು ಹಾಳು ಮಾಡಿದ್ದು, ಯಾವಾಗ ತಮ್ಮ ಮೇಲೆ ದಾಳಿ ನಡೆಸುತ್ತಾರೋ ಎಂಬ ಭಯ ನಿವಾಸಿಗಳಲ್ಲಿ ಕಾಡುತ್ತಿದೆ. ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ಯುವಕನೋರ್ವ ಗಾಂಜಾ ಅಮಲಿನಲ್ಲಿ ತೇಲಾಡುತ್ತಾ ಕೈಯಲ್ಲಿ ಕಲ್ಲನ್ನು ಹಿಡಿದು ಬೈಕ್ಗೆ ಹೊಡೆಯುತ್ತಾನೆ. ಅಷ್ಟೇ ಅಲ್ಲದೆ ಹತ್ತಕ್ಕೂ ಅಧಿಕ ಬೆಲೆಬಾಳುವ ಕಾರಿನ ಗಾಜುಗಳನ್ನು ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಈ ಎಲ್ಲದರ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಡಾವಣೆಯ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂತೋಷ್ ಕಾಲೋನಿಯಲ್ಲಿ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ಮನೆ ಮುಂದೆ ನಿಲ್ಲಿಸಿದ್ದ ಕಾರ್, ಬೈಕ್, ಆಟೋಗಳಿಗೆ ಕಲ್ಲೆಸೆದಿದ್ದಾರೆ. ಹತ್ತಕ್ಕೂ ಅಧಿಕ ಕಾರುಗಳ ಗಾಜುಗಳು ಪುಡಿಯಾಗಿದ್ದು, ಮಾಲೀಕರು ಇದೀಗ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಓರ್ವ ಯುವಕನ ದೃಷ್ಕೃತ್ಯ ಮಾತ್ರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎರಡ್ಮೂರು ಜನ ದುಷ್ಕರ್ಮಿಗಳು ಸೇರಿಕೊಂಡು ಗಾಂಜಾ ಮತ್ತಿನಲ್ಲಿ ತೇಲಾಡುತ್ತಾ, ಕಣ್ಣಿಗೆ ಕಂಡ ಕಾರು, ಆಟೋ, ಬೈಕ್ಗಳಿಗೆ ಕಲ್ಲೆಸದು ಹೋಗಿದ್ದಾರೆ. ಮುಂಜಾನೆ ಎದ್ದ ಮಾಲೀಕರಿಗೆ ಗಾಜುಗಳು ಒಡೆದಿರುವದನ್ನು ನೋಡಿ ಶಾಕ್ ಆಗಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದಾಗ ದುಷ್ಕರ್ಮಿಗಳ ಕೃತ್ಯ ಗೊತ್ತಾಗಿದೆ.
ಪೊಲೀಸರಿಗೆ ದೂರು ಕೊಟ್ಟರೂ ಬಗೆಹರಿಯದ ಸಮಸ್ಯೆ
ಸಂತೋಷ ಕಾಲೋನಿ, ದೇವಿ ನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಇಂತಹ ಘಟನೆಗಳು ಈ ಹಿಂದೆಯೂ ನಡೆದಿದೆ. ಗಾಂಜಾ ಮತ್ತಿನಲ್ಲಿ ನಡುರಾತ್ರಿ ಬಡಾವಣೆಗೆ ಬರುವ ದುಷ್ಕರ್ಮಿಗಳು, ವಿಕೃತಾನಂದವನ್ನು ಅನುಭವಿಸಲು ಈ ರೀತಿಯ ಕೃತ್ಯವನ್ನು ಮಾಡಿ ಹೋಗುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಅನೇಕ ಬಾರಿ ದೂರು ಕೊಟ್ಟರು ಕೂಡಾ ಯಾವುದೇ ಪ್ರಯೋಜನವಾಗಿಲ್ಲಾ. ಪೊಲೀಸರು ನೈಟ್ ಬೀಟ್ಗಳನ್ನು ಸರಿಯಾಗಿ ಮಾಡುತ್ತಿಲ್ಲ. ಅನೇಕ ಕಡೆಗಳಲ್ಲಿ ಗಾಂಜಾ ಸೇವಿಸಿ ಕೆಲವರು ಜನರಿಗೆ ತೊಂದರೆ ಕೊಡುತ್ತಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಂದ ಆರೋಪಿಗಳ ಬಂಧನದ ಭರವಸೆ
ದುಷ್ಕರ್ಮಿಗಳ ಕೃತ್ಯದ ಬಗ್ಗೆ ಮಾಹಿತಿ ತಿಳಿದ ರಾಘವೇಂದ್ರ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಲ್ಲು ಹೊಡೆದಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಮೇಲಿಂದ ಮೇಲೆ ಈ ರೀತಿ ಬಡಾವಣೆಯಲ್ಲಿ ದುಷ್ಕರ್ಮಿಗಳ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಘಟನೆಗಳು ನಡೆಯುತ್ತಿರುವುದರಿಂದ ಪೊಲೀಸರು ಇನ್ನಷ್ಟು ಕಠೀಣ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಜನರ ಜೊತೆ ಚೆಲ್ಲಾಟವಾಡುತ್ತಿರುವರಿಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡಬೇಕಿದೆ.
ವರದಿ: ಸಂಜಯ್, ಟಿವಿ9 ಕಲಬುರಗಿ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ