Crime News: ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದು ಮದುವೆಯಾಗಿ ಪತ್ನಿಯನ್ನು ಕೊಂದೇ ಬಿಟ್ಟ
ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದು ಮದುವೆಯೂ ಆದ, ಕೊನೆಯಲ್ಲಿ ಆಕೆಯ ಮೇಲೆ ಅನುಮಾನಗೊಂಡ ಪತಿ ಲಾಂಗ್ ಡ್ರೈವ್ ಕರೆದುಕೊಂಡು ಹೋಗಿ ಚಾಕುವಿನಿಂದ ಇಪ್ಪತ್ತು ಬಾರಿ ಚುಚ್ಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ಜೀವನ್ಮರಣ ಹೋರಾಟ ನಡೆಸುತ್ತಿದ್ದಾಕೆ ಈಗ ಕೊನೆಯುಸಿರೆಳೆದಿದ್ದಾಳೆ.
ಹೊಸಕೋಟೆ: ಪ್ರೀತಿಸಿ ಮದುವೆಯಾದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗಿ ಸಖತ್ ಎಂಜಾಯ್ ಮಾಡಿದ್ದಾನೆ. ಆದರೆ ಕೊನೆಗೆ ಮೊಬೈಲ್ ವಿಚಾರದಲ್ಲಿ ನಡೆದ ಜಗಳದಿಂದ ಗಂಡನ ಕೋಪ ನೆತ್ತಿಗೇರಿ ಚಾಕು ಕೈಗೆತ್ತಿಕೊಂಡು ಚುಚ್ಚುವಂತೆ ಮಾಡಿದೆ. ಇದನ್ನು ನೋಡಿದ ವ್ಯಕ್ತಿಯೊಬ್ಬರು ಕೃತ್ಯ ತಡೆಯಲು ಮುಂದಾಗಿದ್ದು, ಆತನ ಮೇಲೂ ಕೋಪಿಷ್ಟ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಭೀತಿಗೊಂಡಾತ ಹಿಂದೇಟು ಹಾಕಿ ಕಿರುಚಾಡಿ ಅಕ್ಕಪಕ್ಕದವರನ್ನು ಕರೆದಿದ್ದಾನೆ. ಅಷ್ಟರಲ್ಲಾಗಲೇ ಕೋಪಿಷ್ಟ ಗಂಡ ಪತ್ನಿಯ ದೇಹಕ್ಕೆ ಇಪ್ಪತ್ತಕ್ಕೂ ಹೆಚ್ಚು ಬಾರಿ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಈ ಘಟನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಚೊಕ್ಕಹಳ್ಳಿ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಕೆಲವು ವರ್ಷಗಳ ಕಾಲ ಆಂಧ್ರದಲ್ಲಿ ಕೆಲಸ ಮಾಡಿಕೊಂಡಿದ್ದ ತಮಿಳುನಾಡಿನ ಹೊಸೂರಿನ ರಮೇಶ, 8 ವರ್ಷಗಳ ಹಿಂದೆ ಹೊಸಕೋಟೆಗೆ ಬಂದು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈ ವೇಳೆ 10ನೇ ತರಗತಿಗೆ ಶಾಲೆಗೆ ಹೋಗುತ್ತಿದ್ದ ಅರ್ಪಿತಾ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. ಅರ್ಪಿತಾ ನಂತರ ಆತನ ಜೊತೆ ಪ್ರೀತಿ ಪ್ರೇಮ ಅಂತ ಸುತ್ತಾಡಿದ ವಿಚಾರ ಮನೆಯವರಿಗೂ ತಿಳಿದಿದೆ. ಅದರಂತೆ ಪೋಷಕರು ಬುದ್ಧಿವಾದನೂ ಹೇಳಿದ್ದಾರೆ. ಇದಕ್ಕೆ ಕ್ಯಾರೇ ಎನ್ನದ ಅರ್ಪಿತಾ ರಮೇಶನ ಜೊತೆ ಓಡಿಹೋಗಿ ಮದುವೆಯಾಗಿದ್ದಾಳೆ. ತಮ್ಮ ಮಾತನ್ನು ಕೇಳದ ಮಗಳನ್ನು ಆರಂಭದಲ್ಲಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರೂ ಆಕೆ ಗರ್ಭಿಣಿಯಾದ ನಂತರ ಆಕೆಗೆ ಬಾಣಂತನ ಮಾಡಿದ್ದಾರೆ.
ದೂರವಾಗಿದ್ದ ಕುಟುಂಬ ಒಂದಾದ ನಂತರ ಕುಡಿತದ ಚಟಕ್ಕೆ ಬಿದ್ದ ರಮೇಶ
ದೂರವಾಗಿದ್ದ ಮನೆಯವರು ಒಂದಾಗುತ್ತಿದ್ದಂತೆ ಕುಡಿತದ ಚಟಕ್ಕೆ ಬಿದ್ದ ರಮೇಶ ಪ್ರತಿನಿತ್ಯ ಮನೆಗೆ ಬಂದು ಪತ್ನಿ ಮೇಲೆ ಅನುಮಾನಿಸಿ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದನು. ಹೀಗಾಗಿ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಟುಂಬಸ್ಥರು ಪೊಲೀಸರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಗಳನ್ನೂ ಮಾಡಿ ದಂಪತಿಗೆ ಬುದ್ದಿವಾದ ಹೇಳಿ ಮಕ್ಕಳ ಮುಖ ನೋಡಿ ಜೀವನ ಸಾಗಿಸುವಂತೆ ಹೇಳಿ ಕಳಿಸಿದ್ದರು. ಹಲವು ಭಾರಿ ರಾಜಿ ಪಂಚಾಯ್ತಿಗಳನ್ನ ಮಾಡಿದ್ದರೂ ತಿಂಗಳಿಗೊಮ್ಮೆ ಗಂಡ ಅನುಮಾನದ ಭೂತದಿಂದ ಪತ್ನಿ ಮೇಲೆ ಹಲ್ಲೆ ಮಾಡುವುದು ತಪ್ಪುತ್ತಿರಲಿಲ್ಲ. ಸಾಕಷ್ಟು ಭಾರಿ ಬುದ್ದಿವಾದ ಹೇಳಿದರೂ ಕೇಳದ ಹಿನ್ನೆಲೆ ಇಬ್ಬರಿಗೂ ವಿಚ್ಛೇದನ ಕೊಡಿಸಲು ಕುಟುಂಬಸ್ಥರು ಒಪ್ಪಿದ್ದಾರೆ.
ಆದರೆ ಕಳೆದ ಎರಡು ವರ್ಷಗಳ ಹಿಂದೆ ಪತ್ನಿಯನ್ನ ಬಿಟ್ಟು ರಮೇಶ ಆಂಧ್ರಕ್ಕೆ ತೆರಳಿ ಅಲ್ಲೇ ಕೆಲಸ ಮಾಡಿಕೊಂಡಿದ್ದ. ಆದರೆ ನಾಲ್ಕು ದಿನಗಳ ಹಿಂದೆ ಹೊಸಕೋಟೆಗೆ ಬಂದಿದ್ದ ರಮೇಶ ಪತ್ನಿಯನ್ನ ಬೇಟಿಯಾಗಿ ಮಾತನಾಡಿಸಲು ಯತ್ನಿಸಿದ್ದಾನೆ. ಈ ವೇಳೆ ಗಂಡ ಅಲ್ವಾ ಎಂದು ಹರ್ಷಿತ ಸಹ ಮಾತನಾಡಿದ್ದಾಳೆ. ನಂತರ ತಾನು ಬೇರೆ ಹುಡುಗಿಯನ್ನ ಮುಂದಿನ ಎರಡು ತಿಂಗಳಲ್ಲಿ ಮದುವೆಯಾಗುತ್ತಿದ್ದು, ಒಂದೆರಡು ದಿನ ನಿನ್ನ ಮತ್ತು ಮಕ್ಕಳ ಜೊತೆ ಚೆನ್ನಾಗಿದ್ದು ಹೋಗುತ್ತೇನೆ ಎಂದು ರಮೇಶ ಆಕೆಯ ಬಳಿ ಬಣ್ಣದ ಮಾತುಗಳನ್ನಾಡಿದ್ದಾನೆ. ಗಂಡನ ಮಾತಿಗೆ ಮರುಳಾದ ಅರ್ಪಿತಾ ರಮೇಶನ ಜೊತೆ ಮಾತನಾಡಿದ್ದು ನಂತರ ಕೆಲಸಕ್ಕೆ ಹೊರಟಿದ್ದ ಅರ್ಷಿತಾಳನ್ನ ಬಸ್ ನಿಲ್ದಾಣಕ್ಕೆ ಬಿಡುತ್ತೇನೆ ಎಂದು ಬೈಕ್ನಲ್ಲಿ ಕೂರಿಸಿಕೊಂಡಿದ್ದಾನೆ.
ಬಸ್ ನಿಲ್ದಾಣ ಬಿಡುತ್ತೇನೆ ಎಂದವ ಕರೆದುಕೊಂಡು ಹೋಗಿದ್ದೆಲ್ಲಿಗೆ?
ಬಸ್ ನಿಲ್ದಾಣಕ್ಕೆ ಬಿಡುತ್ತೇನೆ ಎಂದವ ನೇರವಾಗಿ ಹೊಸಕೋಟೆಯಿಂದ ಚಿಂತಾಮಣಿ ರಸ್ತೆಯಲ್ಲಿ ಕರೆದುಕೊಂಡು ಹೋಗಿ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಬಳಿ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ನಿಲ್ಲಿಸಿದ್ದಾನೆ. ಈ ವೇಳೆ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಎಂದು ಪತ್ನಿ ಪ್ರಶ್ನಿಸಿದಾಗ ಗಲಾಟೆ ಮಾಡಿದ್ದಾನೆ. ಹೀಗಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿ ಬೈದು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.
ಬಳಿಕ, ಪೆಟ್ರೋಲ್ ಬಂಕ್ನಿಂದ ಹೊಸಕೋಟೆಗೆ ಬಿಡುವುದಾಗಿ ಕರೆದುಕೊಂಡು ಬಂದ ರಮೇಶ ನಂತರ ಚಹಾ ಕುಡಿಯಲು ಟೀ ಅಂಗಡಿ ಬಳಿ ನಿಲ್ಲಿಸಿದ್ದಾನೆ. ಇಲ್ಲಿ ಚಹಾ ಕುಡಿಯುತ್ತಾ ಒಂದು ಗಂಟೆಗೂ ಅಧಿಕ ಕಾಲ ಕಳೆದಿದ್ದಾರೆ. ಈ ವೇಳೆ ಅರ್ಪಿತಾ ಯಾರಿಗೋ ಮೆಸೆಜ್ ಮಾಡುತ್ತಿದ್ದಾಳೆ ಎಂದು ಅನುಮಾನಗೊಂಡ ರಮೇಶ ಮೊಬೈಲ್ ಕೊಡುವಂತೆ ಕೇಳಿದ್ದು, ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಇದು ತಾರಕಕ್ಕೇರುತ್ತಿದ್ದಂತೆ ರಮೇಶ ಚಾಕು ತೆಗೆದು ಕುತ್ತಿಗೆಗೆ, ಎದೆಗೆ ಚುಚ್ಚಿದ್ದಾನೆ. ಕೂಡಲೇ ಎಚ್ಚೆತ್ತ ಅಂಗಡಿ ಮಾಲೀಕ ವೆಂಕಟೇಶ ಮಹಿಳೆಯ ಜೀವ ಉಳಿಸಲು ಮುಂದಾಗಿದ್ದಾರೆ. ಕೋಪದಲ್ಲಿದ್ದ ರಮೇಶ ವೆಂಕಟೇಶನಿಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಹೀಗಾಗಿ ವೆಂಕಟೇಶ್ ಹಿಂದೆ ಸರಿದು ಸಹಾಯಕ್ಕೆ ಬರುವಂತೆ ಕಿರುಚಾಡಿದ್ದಾರೆ. ಅಕ್ಕಪಕ್ಕದವರು ಸ್ಥಳಕ್ಕೆ ದೌಡಾಯಿಸುವ ವೇಳೆ ರಮೇಶ ಅರ್ಪಿತಾಳ ದೇಹದ ಮೇಲೆ ಚಾಕುವಿನಿಂದ ಇಪ್ಪತ್ತಕ್ಕೂ ಹೆಚ್ಚುಬಾರಿ ಇರಿದಿದ್ದಾನೆ. ನಂತರ ರಮೇಶ ಕೂಡ ಕುತ್ತಿಗೆ ಮತ್ತು ಹೊಟ್ಟೆ ಭಾಗಕ್ಕೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಇಬ್ಬರನ್ನು ಆಸ್ವತ್ರೆಗೆ ದಾಖಲಿಸಿದ್ದರು.
ಗಂಭೀರ ಗಾಯಗಳಿಂದ ರಕ್ತ ಸ್ರಾವವಾಗಿದ್ದ ಪರಿಣಾಮ ಆಸ್ಪತ್ರೆಯಲ್ಲಿ 12 ಗಂಟೆಗಳ ಕಾಲ ಜೀವನ್ಮರಣದೊಂದಿಗೆ ಹೋರಾಡಿದ ಅರ್ಪಿತಾ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ. ಇತ್ತ ಪಾಪಿ ಗಂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನೂ ಆಸ್ವತ್ರೆಯಲ್ಲೆ ರಮೇಶನನ್ನ ವಶಕ್ಕೆ ಪಡೆದಿರುವ ಸೂಲಿಬೆಲೆ ಪೊಲೀಸರು ಜೈಲಿಗಟ್ಟಲು ಮುಂದಾಗಿದ್ದಾರೆ. ಕೊಲೆ ಆರೋಪಿ ರಮೇಶ ಈ ಹಿಂದೆಯು ಎಟಿಎಂ ಕಳ್ಳತನ ಸೇರಿದಂತೆ ಹಲವು ಕಾನೂನು ಭಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಈ ಬಗ್ಗೆಯೂ ಮಾಹಿತಿ ಕಲೆ ಹಾಕಿಕೊಳ್ಳಲಾಗುತ್ತಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ