ಇಷ್ಟ ಬಂದಂತೆ ಪ್ರೀತಿಸಿದ ಎಳಸು ಪ್ರೇಮಿಗಳ ದುರಂತ ಅಂತ್ಯ, ಜೊತೆಗೆ ಘೋರ ಮರ್ಯಾದಾ ಹತ್ಯೆಯ ಕಮಟು ವಾಸನೆ!

Tikota, Vijayapura: ತನ್ನ ಪ್ರಿಯಕರನ ಜೊತೆಗೆ ಇದ್ಧಾಗ ಸ್ವತಃ ತಂದೆ ಕೈಗೆ ಸಿಕ್ಕಿ ಬಿದ್ದ ನೋವಲ್ಲಿ, ಮುಂದೇನು ಮಾಡುತ್ತಾರೆ ಎಂಬ ಭಯದಲ್ಲಿ ಬಾಲಕಿ ವಿಷ ಸೇವಿಸಿ ಜೀವ ಬಿಟ್ಟರೆ, ಮಗಳ ಸಾವಿಗೆ ಹಾಗೂ ನಮ್ಮ ಮರ್ಯಾದೆಗೆ ಕುಂದು ತಂದನಲ್ಲಾ ಎಂಬ ಕೋಪದಲ್ಲಿ ಯುವಕನ್ನು ಅಮಾನುಷವಾಗಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿ, ಆತನಿಗೂ ವಿಷ ಕುಡಿಸಿ ಮರ್ಯಾದೆ ಹತ್ಯೆ ಮಾಡಿದ್ದಾರೆ.

ಇಷ್ಟ ಬಂದಂತೆ ಪ್ರೀತಿಸಿದ ಎಳಸು ಪ್ರೇಮಿಗಳ ದುರಂತ ಅಂತ್ಯ, ಜೊತೆಗೆ ಘೋರ ಮರ್ಯಾದಾ ಹತ್ಯೆಯ ಕಮಟು ವಾಸನೆ!
ಇಷ್ಟ ಬಂದಂತೆ ಪ್ರೀತಿಸಿದ ಎಳಸು ಪ್ರೇಮಿಗಳ ದುರಂತ ಅಂತ್ಯ, ಜೊತೆಗೆ ಘೋರ ಮರ್ಯಾದಾ ಹತ್ಯೆಯ ಕಮಟು ವಾಸನೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 18, 2022 | 6:31 PM

ಇದು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಿರೋ ಎಲ್ಲಾ ಪೋಷಕರು ಓದಲೇಬೇಕಾದ ಸ್ಟೋರಿ. ಹದಿಹರೆಯದ ಮಕ್ಕಳು ಮನೆಯಿಂದ ಕಾಲೇಜಿಗೆ ಹೋಗಿ-ಬರುವವರೆಗೂ ಅವರ ಮೇಲೊಂದು ಕಣ್ಣಿಡಬೇಕಿರುವುದು ಪೋಷಕರ ಜವಾಬ್ದಾರಿಯಾಗಿದೆ. ಇಲ್ಲವಾದರೆ ಕೆಲವೊಮ್ಮ ಅನಾಹುತಗಳೇ ಆಗುವ ಸಂಭವಗಳು ಇವೆ. ಇಲ್ಲಿ ನಡೆದಿದ್ದು ಒಂದು ಘೋರ ದುರಂತ. ವಿಜಯಪುರ ಜಿಲ್ಲೆ ಇದೀಗಾ ಮರ್ಯಾದಾ ಹತ್ಯೆಗೆ (maryada hatya) ಉದಾಹರಣೆಯಾಗಿದೆ. ಅಪರಾಧ ಕೃತ್ಯಗಳ ನೆಲದಲ್ಲಿ ಮರ್ಯಾದೆ ಹತ್ಯೆಯಂಥ ಹೇಯ ಕೃತ್ಯ ನಡೆದಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಎಳಸು ಪ್ರೇಮ ಕಥೆ ಇಲ್ಲಿ ದುರಂತದ ಅಂತ್ಯ ಕಂಡಿದೆ. ಸೇನೆಗೆ ಸೇರಿ ಮನೆಗೆ ಆಸರೆಯಾಗಬೇಕಿದ್ದವ ಮಣ್ಣಾಗಿದ್ದಾನೆ. ಮನೆಗೆ ಬೆಳಕಾಗಬೇಕಿದ್ದ ಮಗಳು ಸಹ ಯಮಲೋಕಕ್ಕೆ ಹೋಗಿದ್ದಾಳೆ (lovers death). ಗುಮ್ಮಟ ನಗರಿಯಲ್ಲಿ (Vijayapura) ಮರ್ಯಾದಾ ಹತ್ಯೆ ಕುರಿತಾದ ಭೀಕರ ಕ್ರೈಂ ಕಥೆ ಇಲ್ಲಿದೆ…

ವಿಜಯಪುರ ಜಿಲ್ಲೆ ಎಂದರೆ ಸಾಕು ವಿಶ್ವಗುರು ಬಸವಣ್ಣನವರ ಹುಟ್ಟಿನ ನೆಲ. ಆದಿಲ್ ಶಾಹಿಗಳು ಆಳ್ವಿಕೆ ಮಾಡಿದ ಸಾಮ್ರಾಜ್ಯ ಗೋಲಗುಮ್ಮಟದ ನಾಡು ಎಂದು ಕಣ್ಣಿಗೆ ಬರುತ್ತದೆ. ಜೊತೆಗೆ ಜಿಲ್ಲೆಯ ಕ್ರೈಂ ಹಿಸ್ಟರಿ ಕೂಡಾ ನೆನಪಾಗದೇ ಇರದು. ಇಷ್ಟರ ಮಧ್ಯೆ ಇದೀಗಾ, ಇದೇ ವಿಜಯಪುರ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯಾಗಿದ್ದು ಜಿಲ್ಲೆಗೆ ಕಪ್ಪುಚುಕ್ಕೆ ಇಟ್ಟಂತಾಗಿದೆ. ಹುಚ್ಚು ಕೋಡಿ ವಯಸ್ಸಿನಲ್ಲಿರೋ ಅಪ್ರಾಪ್ತೆ ತನಗೆ ಇಷ್ಟ ಬಂದವನನ್ನು ಪ್ರೀತಿಸಿದ್ದೇ, ಇಲ್ಲಿ ಮರ್ಯಾದಾ ಹತ್ಯೆಗೆ ಪ್ರಮುಖ ಕಾರಣವಾಗಿದೆ. ಹದಿಹರೆಯದ ಪ್ರಾಯದಲ್ಲಿದ್ದವರು ಇಹಲೋಕದ ಯಾತ್ರೆ ಮುಗಿಸಿದ್ದು ದೊಡ್ಡ ದುರಂತವಾಗಿದೆ. ಇಂಥ ದುರಂತ ನಡೆದಿದ್ದು ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಘೋಣಸಗಿ ಹಾಗೂ ಕಳ್ಳಕವಟಗಿ ಗ್ರಾಮದ ಮಧ್ಯದಲ್ಲಿರುವ ತೋಟದ ಮನೆಯಲ್ಲಿ. ಅದು ಕಳೆದ ಅಕ್ಟೋಬರ್ 10 ರಂದು ನೆರೆಯ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಹದರಿಹಾಳ ಗ್ರಾಮದ ಕೃಷ್ಣಾ ನದಿಯ ತಟದಲ್ಲಿ ಮೂಟೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಇದನ್ನು ನೋಡಿದ ಸ್ಥಳೀಯ ಬೀಳಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಮೂಟೆಯನ್ನು ಹೊರಗೆಳೆದು ನೋಡಿದಾಗ ಅದರಲ್ಲಿದ್ದ ಶವ ಕೊಳೆತು ಹೋಗಿತ್ತು. ಶವದ ಮೈಮೇಲಿನ ಬಟ್ಟೆಗಳು, ಕೈಲಿದ್ದ ವಾಚು ಹಾಗೂ ಇತರ ವಸ್ತುಗಳು… ಇವಿಷ್ಟೂ ಯುವಕನೋರ್ವನ ಶವವೆಂದು ಗೊತ್ತಾಗಿತ್ತು. ಬೀಳಗಿ ಪೊಲೀಸ್ ಠಾಣೆಯ ಆಧಿಕಾರಿಗಳು ಪತ್ತೆಯಾದ ಶವ ಯಾರದ್ದಿರಬಹುದೆಂದು ತನಿಖೆ ನಡೆಸಿದರು. (ವರದಿ: ಅಶೋಕ ಯಡಳ್ಳಿ, ಟಿವಿ 9 ವಿಜಯಪುರ)

ಬೀಳಗಿ ಪೊಲೀಸರಿಗೆ ಪತ್ತೆಯಾದ ಶವ ಯುವಕನದ್ದಾಗಿದೆ. ಯಾರೋ ಆತನನ್ನು ಕೊಲೆ ಮಾಡಿ, ಬಳಿಕ ಕೈಕಾಲು ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿ, ಆದಾದ ಮೇಲೂ ಗೋಣಿ ಚೀಲದಲ್ಲಿ ಕಟ್ಟಿ ನದಿಗೆ ಎಸೆದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿತ್ತು. ಆದರೆ ಶವವಾಗಿ ಸಿಕ್ಕವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲಾ. ಶವದ ಜೊತೆಗೆ ಐಡಿ ಕಾರ್ಡ್, ವೋಟರ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಗುರುತು ಸಿಗುವಂತಹ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಕೊನೆಗೆ ಶವವಾದವ ಧರಿಸಿದ್ದ ಟೀ ಶರ್ಟ್ ಪೊಲೀಸರ ತನಿಖೆಗೆ ದಾರಿ ಮಾಡಿಕೊಟ್ಟಿತ್ತು. ಶವವಾಗಿ ಪತ್ತೆಯಾದ ಯುವಕ ಧರಿಸಿದ ಟೀ ಶರ್ಟ್ ಮೇಲೆ ನಿಸರ್ಗ ಸ್ಪೋರ್ಟ್ಸ್ ಬನಹಟ್ಟಿ ಜಗದಾಳ ಎಂಬ ಪ್ರಿಂಟ್ ಕಂಡು ಬಂದಿತ್ತು. ಇದೇ ಜಾಡನ್ನು ಹಿಡಿದು ಹೊರಟ ಖಾಕಿ ಪಡೆ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಗ್ರಾಮದಲ್ಲಿರುವ ನಿಸರ್ಗ ಸ್ಪೋರ್ಟ್ ಎಂಬ ಸೇನಾ ತರಬೇತಿ ಹಾಗೂ ಕ್ರೀಡಾ ತರಬೇತಿ ನಡೆಸುತ್ತಿದ್ದ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿತ್ತು. ಆಗಲೇ ಪೊಲೀಸರಿಗೆ ಮತ್ತೊಂದು ಕ್ಲೂ ಸಿಕ್ಕಿತ್ತು. ತರಬೇತಿ ಕೇಂದ್ರ ನಡೆಸುತ್ತಿದ್ದ ಮುಖ್ಯಸ್ಥನ ಸಂಬಂಧಿಕನೇ ಈ ಯುವಕ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ಮಲ್ಲಿಕಾರ್ಜುನ ಜಮಖಂಡಿ ಇದೇ ತರಬೇತಿ ಕೇಂದ್ರದಲ್ಲಿ ಸೇನೆಗೆ ಸೇರಲು ತರಬೇತಿ ಪಡೆಯುತ್ತಿದ್ದ. ಕಳೆದ ಸಪ್ಟೆಂಬರ್ 15 ರಂದು ಬಿಎ ದ್ವಿತೀಯ ವರ್ಷದ ಸೆಮಿಸ್ಟರ್ ಪರೀಕ್ಷೆಯಿದೆ ಎಂದು ಊರಿಗೆ ಹೋಗಿದ್ದ. ಆದರೆ ಆ ನಂತರ ಮನೆಯಿಂದ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನ ಮಾಹಿತಿ ಮೇರೆಗೆ ಬೀಳಗಿ ಪೊಲೀಸರು ಮಲ್ಲಿಕಾರ್ಜುನನ ಪೋಷಕರನ್ನು ಕರೆಸಿಕೊಂಡು ಕೊಳೆತ ಸ್ಥಿತಿಯಲ್ಲಿದ್ದ ಶವನನ್ನು ತೋರಿಸಿದ್ದಾರೆ. ಶವದ ಬಟ್ಟೆಗಳನ್ನು. ಕೈಲಿದ್ದ ವಾಚ್ ಹಾಗೂ ಇತರ ವಸ್ತುಗಳನ್ನು ನೋಡಿ ಇದು ನಮ್ಮ ಮಗನ ಶವವೆಂದು ಕಂಡುಹಿಡಿದು ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ನದಿಯಲ್ಲಿ ಸಿಕ್ಕ ಶವ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ಮಲ್ಲಿಕಾರ್ಜುನ ಜಮಖಂಡಿ ಎಂಬುದು ವಿಷಯ ಗೊತ್ತಾಗುತ್ತಿದ್ದಂತೆ ತನಿಖೆ ಮತ್ತಷ್ಟು ಆಳವಾಗಿ ನಡೆದಿದೆ. ಆಗ ಶವವಾಗಿ ಪತ್ತೆಯಾದ ಯುವಕನ ತಂದೆ ಹಾಗೂ ಸಂಬಂಧಿಕರು ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ. ನಮ್ಮೂರಿನ ಪಕ್ಕದ ಗ್ರಾಮ ಕಳ್ಳಕವಟಗಿ ಗ್ರಾಮದ, ಸದ್ಯ ತೋಟದ ವಸತಿ ಮನೆಯಲ್ಲಿರೋ ಗುರಪ್ಪಾ ಗಿಡ್ಡನ್ನವರ ಹಾಗೂ ಆತನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಕಾರಣ ಶವವಾಗಿ ಪತ್ತೆಯಾದ ನಮ್ಮ ಮಗ ಹಾಗೂ ಗುರಪ್ಪ ಗಿಡ್ಡನ್ನವರ ಮಗಳು ಅಪ್ರಾಪ್ತ ವಯಸ್ಸಿನ ಬಾಲಕಿ (ಗಾಯತ್ರಿ) ಮಧ್ಯೆ ಲವ್ ಇತ್ತು. ಅದೇ ಸಿಟ್ಟಲ್ಲಿ ನಮ್ಮ ಮಗನನ್ನು ಗುರಪ್ಪಾ ಕೊಲೆ ಮಾಡಿ ಶವವನ್ನು ನದಿಗೆ ಎಸೆದಿರಬುದು ಎಂದು ಕೊಲೆಯಾದ ಬಾಲಕನ ಮನೆಯವರು ಆರೋಪ ಮಾಡಿದ್ದರು. ನಾವು ಕಡುಬಡವರು, ನಿತ್ಯ ದುಡಿದರೆ ಮಾತ್ರ ನಮ್ಮ ಜೀವನ ನಡೆಯೋದು. ಆದರೆ ಗುರಪ್ಪ ಗಿಡ್ಡನ್ನವರ ಶ್ರೀಮಂತರಾಗಿದ್ದಾರೆ. ಅವರ ಜಾತಿ ಬೇರೆ – ನಮ್ಮ ಜಾತಿ ಬೇರೆ. ಅವರ ಮಗಳು ಅನ್ಯ ಜಾತಿಯ ಹಾಗೂ ಕಡು ಬಡತನದಲ್ಲಿರೋ ಯುವಕನ್ನು ಪ್ರೇಮಿಸಿದಳಲ್ಲಾ. ಇದರಿಂದ ನಮ್ಮ ಮನೆತನದ ಮರ್ಯಾದೆ, ನಮ್ಮ ಮರ್ಯಾದೆ ಹೋಗುತ್ತದೆ ಎಂದು ಮರ್ಯಾದೆ ಹತ್ಯೆ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ.

ಈ ರೀತಿಯಾಗಿ ಬೀಳಗಿ ಪೊಲೀಸರಿಗೆ ಮಲ್ಲಿಕಾರ್ಜುನ ಹಾಗೂ ಬಾಲಕಿಯ ಪ್ರೇಮ್ ಕಹಾನಿ ಬಗ್ಗೆ ತಿಳಿದು ಬರುತ್ತದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ಮಲ್ಲಿಕಾರ್ಜುನ ಜಮಖಂಡಿ ವಿಜಯಪುರ ನಗರದ ಪದವಿ ಮಹಾವಿದ್ಯಾಲಯವೊಂದರಲ್ಲಿ ಬಿಎ ದ್ವೀತಿಯ ವರ್ಷದ ವಿದ್ಯಾರ್ಥಿಯಾಗಿದ್ದ. ನಿತ್ಯ ಬಸ್ ಮೂಲಕ ಕಾಲೇಜಿಗೆ ಹೋಗಿ ಬರೋದು ಮಾಡುತ್ತಿದ್ದ. ಕಡು ಬಡವರಾಗಿದ್ದ ಮಲ್ಲಿಕಾರ್ಜುನನ ತಂದೆ-ತಾಯಿ ನಿತ್ಯ ಕೂಲಿ ಕೆಲಸ ಮಾಡಿ ಜೀವನ ಮಾಡುವವರು. ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಮಗನನ್ನು ಚೆನ್ನಾಗಿ ಓದಿಸಿ ಸೇನೆಗೆ ಸೇರಿಸಿ ದೇಶ ಸೇವೆ ಮಾಡಿಸಬೇಕೆಂಬ ಕನಸು ಕಂಡವರು. ಹೀಗೆ ಬಡತನವಿದ್ದರೂ ತಂದೆ ತಾಯಿ ಆಸೆಯಂತೆ ಮಿಲಿಟರಿ ಸೇರಲು ಹಾಗೂ ಪದವಿ ಪೂರೈಸಲು ನಿತ್ಯ ಕಾಲೇಜಿಗೆ ಹೋಗಿ ಬರೋವಾಗಲೇ ಮಲ್ಲಿಕಾರ್ಜುನನಿಗೆ ಬಸ್ ನಲ್ಲಿ ಓರ್ವ ಬಾಲಕಿಯ ಪರಿಚಯವಾಗಿದೆ. ಆಕೆಯೇ ಪಕ್ಕದ ಕಳ್ಳಕವಟಗಿ ಗ್ರಾಮದ ಅಪ್ರಾಪ್ತ ವಯಸ್ಸಿನ ಯುವತಿ ಗಾಯತ್ರಿ. ಇದೇ ಗಾಯತ್ರಿ ವಿಜಯಪುರ ನಗರದ ಪಿಯು ಕಾಲೇಜಿಗೆ ಒಂದೇ ಬಸ್ ನಲ್ಲಿ ಹೋಗಿ ಬರುತ್ತಿದ್ದ ವೇಳೆಯೇ ಇಬ್ಬರ ನಡುವೆ ಪರಿಚಿಯವಾಗಿ, ಮುಂದೆ ಪ್ರೇಮವಾಗಿದೆ. ಟೀನೇಜಿನ ಲವ್ ಇಬ್ಬರನ್ನೂ ವಿಜಯಪುರ ನಗರದ ಗೋಲಗುಮ್ಮಟ ಸೇರಿದಂತೆ ಐತಿಹಾಸಿಕ ಸ್ಮಾರಕಗಳು, ಪಾರ್ಕ್ ಗಳಲ್ಲಿ ಸುತ್ತಾಡಿಸಿದೆ. ಕೈ ಕೈ ಹಿಡಿದುಕೊಂಡು ಓಡಾಡಿ ಪೋಟೋಗಳಿಗೆ ಪೋಸ್​​ ಕೊಟ್ಟು, ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡ ಎಳಸು ಪ್ರೇಮಿಗಳು ತಮ್ಮದೇ ಕನಸುಗಳಲ್ಲಿ ತೇಲಾಡಿದ್ದವು ಎಂಬ ವಿಚಾರ ಗೊತ್ತಾಗುತ್ತದೆ.

ಹೀಗೆ ಅಪ್ರಾಪ್ತ ಬಾಲಕಿ ಹಾಗೂ ಯುವಕ ಮಲ್ಲಿಕಾರ್ಜುನ ಪ್ರೇಮ ಕಹಾನಿ ಈ ಹಿಂದೆಯೇ ಇಬ್ಬರ ಮನೆಯಲ್ಲಿ ಗೊತ್ತಾಗಿತ್ತಂತೆ. ಗ್ರಾಮದ ಹಿರಿಯರ ಮೂಲಕ ನ್ಯಾಯ ಪಂಚಾಯತಿಯೂ ಆಗಿತ್ತಂತೆ. ಕಾರಣ ಮಲ್ಲಿಕಾರ್ಜುನನನ್ನು ಆತನ ಪೋಷಕರು ಮಿಲಿಟರಿ ತರಬೇತಿಗೆ ಬಾಗಲಕೋಟೆಯ ಬನಹಟ್ಟಿಯಲ್ಲಿನ ನಿಸರ್ಗ ಸ್ಪೋರ್ಟ್ ಎಂಬ ಸೇನಾ ತರಬೇತಿ ಶಾಲೆಯೊರುವ ಕೇಂದ್ರಕ್ಕೆ ಸೇರಿಸಿದ್ದಾರೆ. ಬಾಲಕಿಯ ಉಸಾಬರಿಗೆ ಹೋಗಬೇಡವೆಂದು ತಿದ್ದಿ ಬುದ್ದಿ ಹೇಳಿದ್ದರಂತೆ. ಇಷ್ಟಾದರೂ ಪ್ರೇಮಿಗಳು ಮೊಬೈಲ್ ನಲ್ಲಿ ಕಾಂಟ್ಯಾಕ್ಟ್ ಇದ್ದರಂತೆ. ಕೊನೆಗೆ ಬಾಲಕಿಯ ತಂದೆ ಗುರಪ್ಪ ಗಿಡ್ಡನ್ನವರ ನಮ್ಮ ಮಗಳು ಪ್ರೇಮಿಸಿದನ ಜೊತೆಗೆ ಮದುವೆಯನ್ನೂ ಮಾಡೋದಾಗಿ ಹೇಳಿದ್ದನಂತೆ. ಮಿಟಲಿರಿ ತರಬೇತಿಗೆ ಹೋಗಿದ್ದ ಮಲ್ಲಿಕಾರ್ಜುನ ಜಮಖಂಡಿ ಕಳೆದ ಸಪ್ಟೆಂಬರ್ 15 ರಂದು ಬಿಎ ಸೆಮಿಸ್ಟರ್ ಪರೀಕ್ಷೆ ಬರೆಯಲು ತನ್ನೂರಿಗೆ ಬಂದಿದ್ದಾನೆ. ಅದು ಸಪ್ಟೆಂಬರ್ 22 ರ ರಾತ್ರಿ ಬೈಕ್ ಸಮೇತ ಮನೆಯಿಂದ ರಾತ್ರಿ ಹೋದವ ನಂತರ ಪತ್ತೆಯೇ ಆಗಿರಲಿಲ್ಲಾ. ಇತ್ತ ಬಾಲಕಿಯೂ ಸಹ ಆಕೆಯ ಮನೆಯಿಂದ ನಾಪತ್ತೆಯಾಗಿದ್ದಾಳೆ. ಇಬ್ಬರೂ ಎಲ್ಲಿಯೋ ಓಡಿ ಹೋಗಿದ್ದಾರೆಂದು ಎರಡೂ ಮನೆಯವರು ತಿಳಿದುಕೊಂಡಿದ್ದರು. ಈ ವೇಳೆ ಬಾಲಕಿಯ ಪೋಷಕರು ನಮ್ಮ ಮಗಳನ್ನು ಮಲ್ಲಿಕಾರ್ಜುನ ಜಮಖಂಡಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆಂದು ದೂರು ನೀಡಿದ್ದಂತೆ. ಯುವಕ ಮಲ್ಲಿಕಾರ್ಜುನ ಮನೆಯವರು ನಮ್ಮ ಮಗಾ ಕಾಣೆಯಾಗಿದ್ದಾನೆಂದು ತಿಕೋಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಸಹ ಇಬ್ಬರ ಶೋಧ ನಡೆಸಿದ್ದರು. ಇಷ್ಟರ ಮಧ್ಯೆ ಯುವಕನ ಶವ ಸಿಕ್ಕಿದೆ.

ಯುವಕನ ಶವದ ಹಿಂದೆ ಇಷ್ಟೆಲ್ಲಾ ಕಥೆಯಿರುವುದು ಹಾಗೂ ಕೊಲೆಯಾದ ಯುವಕನ ಮನೆಯವರ ಆರೋಪದ ಕಾರಣ ಬೀಳಗಿ ಪೊಲೀಸರು ನಾಪತ್ತೆಯಾಗಿರೋ ಬಾಲಕಿಯ ತಂದೆ ಗುರಪ್ಪ ಗಿಡ್ಡನ್ನವರನನ್ನು ವಶಕ್ಕೆ ಪಡೆದು ವಿಚಾರಿಸಿದಾಗಲೇ ಮತ್ತೇ ಭಯಾನಕ ಘಟನೆಯನ್ನು ಗುರಪ್ಪ ಬಾಯಿ ಬಿಟ್ಟಿದ್ದಾನೆ. ಅದು ಕಳೆದ ಸಪ್ಟೆಂಬರ್ 22 ರ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದೆವು. ತಡರಾತ್ರಿ ನಮ್ಮ ಮನೆಯ ಬಾಗಿಲು ತೆರೆದಂತೆ ಕಂಡಿತ್ತು. ಹೊರಗಡೆ ಬಂದು ನೋಡಿದಾಗ ಮನೆಯ ಪಕ್ಕದ ತಗಡಿನ ಶೆಡ್ ನಲ್ಲಿ ನನ್ನ ಮಗಳು ( ಗಾಯತ್ರಿ ) ಆಕೆಯ ಪ್ರೇಮಿ ಮಲ್ಲಿಕಾರ್ಜನನ ಜೊತೆಗಿದ್ದಳು. ಅವರಿಗೆ ನಾನು ಏನೂ ಅನ್ನದೇ ಶೆಡ್ ನ ಬಾಗಿಲನ್ನು ಹಾಕಿ ಲಾಕ್ ಮಾಡಿದೆ. ವಿಷಯವನ್ನು ನನ್ನ ಅಳಿಯ ಅಜೀತನಿಗೆ ತಿಳಿಸಿ ಆತನನ್ನೂ ಕರೆಸಿಕೊಂಡೆ. ಹಿಂದೆ ಇವರಿಬ್ಬರ ವಿಚಾರ ಗುರು ಹಿರಿಯರ ಬಳಿ ಪಂಚಾಯತಿ ಮಾಡಿದ್ದೆ. ಈಗಾ ಮತ್ತೇ ಹಿರಿಯರನ್ನು ಕೂಡಿಸಿ ನ್ಯಾಯ ಕೇಳೋಣವೆಂದು ಅವರನ್ನು ಶೆಡ್ ನಲ್ಲೇ ಲಾಕ್ ಮಾಡಿ ಮನೆಯೊಳಗೆ ಬಂದೆವು. ಒಂದು ಗಂಟೆ ಸುಮಾರು ಬಿಟ್ಟು ಶೆಡ್ ಬಳಿ ಹೋದಾಗ ನನ್ನ ಮಗಳ ಕಿರುಚಾಟ ಕೇಳಿತ್ತು. ಕೂಡಲೇ ಶೆಡ್ ಬಾಗಿಲು ತೆರೆಗದು ನೋಡಿದರೆ ಅದಾಗಲೇ ಆಕೆ ಶೆಡ್ ನಲ್ಲಿ ಕ್ರಿಮಿನಾಶಕ ಸೇವಿಸಿ ಬಿಟ್ಟಿದ್ದಳು. ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಬೇಕೆನ್ನುಷ್ಟರಲ್ಲಿ ಒದ್ದಾಡಿ ಒದ್ದಾಡಿ ಮೃತಪಟ್ಟಳು. ನಮ್ಮ ಮಗಳ ಸಾವಿಗೆ ಇದೇ ಯುವಕ ಕಾರಣವೆಂಬ ಸಿಟ್ಟಿನಲ್ಲಿ ಯುವಕನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದೆವು. ಆತನಿಗೂ ಬಲವಂತದಿಂದ ವಿಷ ಕುಡಿಸಿದೆವು. ಆತ ಮೃತಪಟ್ಟ ಬಳಿಕ ಯಾರಿಗೂ ಗೊತ್ತಾಗದಂತೆ ಇಬ್ಬರ ಶವವನ್ನು ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿ ಗೋಣಿ ಚೀಲದಲ್ಲಿ ಹಾಕಿ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿ ಕೃಷ್ಣಾ ನದಿಗೆ ನಿರ್ಮಿಸಿರೋ ಬೃಹತ್ ಸೇತುವೆ ಮೇಲಿಂದ ತುಂಬಿ ಹರಿಯುತ್ತಿದ್ದ ನದಿಗೆ ಎಸೆದು ಬಂದೆವು. ಇದಕ್ಕೆ ನಮ್ಮ ಅಳಿಯ ಅಜೀತ್ ಸಾಥ್ ನೀಡಿದ್ದ. ತುಂಬಿ ಹರಿಯುತ್ತಿದ್ದ ನದಿಯಲ್ಲಿ ಇಬ್ಬರ ಶವಗಳು ಹಾಕಲಾಗಿದ್ದು, ಅವು ಯಾರಿಗೂ ಸಿಗಲ್ಲಾ ಎಂದು ಕೊಂಡಿದ್ದೆವು. ಮಾರನೇ ದಿನ ತಿಕೋಟಾ ಪೊಲೀಸ್ ಠಾಣೆಯಲ್ಲಿ ನಮ್ಮ ಮಗಳನ್ನು ಮಲ್ಲಿಕಾರ್ಜುನ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ದೂರು ನೀಡಿದೆವು. ಎಲ್ಲಿಗೋ ಓಡಿ ಹೋಗಿರೋ ನಮ್ಮ ಮಗಳು ಹಾಗೂ ಮಲ್ಲಿಕಾರ್ಜುನ ಮದುವೆಯಾಗಿರಬಹುದು ಎಂದು ಜನರನ್ನು ನಂಬಿಸಿದ್ದೆವು. ಮಗಳನ್ನು ಕಳೆದುಕೊಂಡ ಹಾಗೂ ನಮ್ಮ ಮರ್ಯಾದೆ ಹೋಯಿತಲ್ಲಾ ಎಂಬ ನಿಟ್ಟಿನಲ್ಲಿ ಎಲ್ಲವನ್ನೂ ಮುಚ್ಚಿ ಹಾಕಲು ಇಬ್ಬರ ಶವಗಳನ್ನು ನದಿಗೆ ಹಾಕಿದ್ದೆವೆ ಎಂದು ಘಟನೆಯನ್ನು ಬಾಯಿಬಿಟ್ಟಾಗ ಪೊಲೀಸರೇ ಶಾಕ್ ಆಗಿದ್ದರು. ಇತ್ತ ತೋಟದ ವಸತಿ ಮನೆಯಲ್ಲಿರುವ ಬಾಲಕಿಯ ತಾಯಿ, ಅಜ್ಜ, ಅಜ್ಜಿ ಘಟನೆ ಕುರಿತು ನಮಗೇನು ಗೊತ್ತಿಲ್ಲಾ. ನಮ್ಮ ಮಗಳು ಎಲ್ಲಿದ್ದಾಳೆಂಬುದು ಗೊತ್ತಿಲ್ಲಾ. ನಮ್ಮ ಯಜಮಾನ ಹಾಗೂ ತಮ್ಮನನ್ನು ಬೀಳಗಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ನಮಗೆ ಹೆಚ್ಚಿನ ಮಾಹಿತಿ ವಿಷಯ ಗೊತ್ತಿಲ್ಲಾ ಎಂದಿದ್ದಾರೆ. ಮತ್ತೊಂದೆಡೆ ನಮ್ಮ ಮಗನನ್ನು ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮರ್ಯಾದೆ ಹತ್ಯೆಗೀಡಾದ ಮಲ್ಲಿಕಾರ್ಜುನನ ತಾಯಿ ಹಾಗೂ ಮನೆಯವರು ಕಣ್ಣೀರು ಹಾಕಿದ್ದಾರೆ.

ತನ್ನ ಪ್ರಿಯಕರನ ಜೊತೆಗೆ ಇದ್ಧಾಗ ಸ್ವತಃ ತಂದೆ ಕೈಗೆ ಸಿಕ್ಕಿ ಬಿದ್ದ ನೋವಲ್ಲಿ, ಮುಂದೇನು ಮಾಡುತ್ತಾರೆ ಎಂಬ ಭಯದಲ್ಲಿ ಬಾಲಕಿ ವಿಷ ಸೇವಿಸಿ ಜೀವ ಬಿಟ್ಟರೆ, ಮಗಳ ಸಾವಿಗೆ ಹಾಗೂ ನಮ್ಮ ಮರ್ಯಾದೆಗೆ ಕುಂದು ತಂದನಲ್ಲಾ ಎಂಬ ಕೋಪದಲ್ಲಿ ಯುವಕನ್ನು ಅಮಾನುಷವಾಗಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿ, ಆತನಿಗೂ ವಿಷ ಕುಡಿಸಿ ಮರ್ಯಾದೆ ಹತ್ಯೆ ಮಾಡಿದ್ದಾರೆ. ಸಾಲದೆರಂಬಂತೆ ಸಾಕ್ಷಿಗಳನ್ನು ನಾಶ ಮಾಡಲು ಇಬ್ಬರ ಶವಗಳನ್ನು ಕಟ್ಟಿ ಪ್ಯಾಕ್ ಮಾಡಿ ಗೋಣಿ ಚೀಲದಲ್ಲಿ ಹಾಕಿ ನದಿಗೆ ಎಸೆದಿದ್ದು ಸಹ ಅಮಾನವೀಯವಾಗಿದೆ. ಎಷ್ಟೇ ಜಾಗರೂಕತೆಯಿಂದ ಅಪರಾಧ ಕೃತ್ಯ ಮಾಡಿದರೆ ಸಿಕ್ಕಿ ಬಿದ್ದೇ ಬೀಳುತ್ತಾರೆಂಬುದು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಾಲಕಿಯ ತಂದೆ ಗುರಪ್ಪ ಹಾಗೂ ಮಾವ ಅಜೀತ್ ಮಾಡಿದ ನೀಚತನಕ್ಕೆ – ಮರ್ಯಾದೆ ಹತ್ಯೆಗೆ ಜೈಲು ಪಾಲಾಗಿದ್ದಾರೆ. ಸದ್ಯ ಬಾಲಕಿಯ ಶವಕ್ಕಾಗಿ ಬೀಳಗಿ ಪೊಲೀಸರು ಶೋಧ ನಡೆಸಿದ್ದಾರೆ…

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ