ಮುನ್ನೂರು ರೂಪಾಯಿ ಜಗಳ ಕೊಲೆಯಲ್ಲಿ ಅಂತ್ಯ
ಆತ ಸಂಬಂಧಿಕನೆಂಬುದನ್ನು ಲೆಕ್ಕಿಸದೆ ಆ ಒಂದು ವಿಚಾರಕ್ಕೆ ಜಗಳ ಮಾಡಿ ಬರ್ಬರವಾಗಿ ಕೊಲೆ ಮಾಡಿಯೇ ಬಿಟ್ಟನು. ಕೊಲೆಗೆ ಕಾರಣ ಏನು ಎಂದು ನೀವು ತಿಳಿಯಲು ಮುಂದಾದರೆ ನೀವೇ ಒಂದು ಬಾರಿ ಶಾಕ್ ಆಗುತ್ತೀರಿ.
ಕಲಬುರಗಿ: ಕರೀಂ ಬಾಗವಾನ್ ಮತ್ತು ವಾಜೀದ್ ಸಂಬಂಧಿಕರಾಗಿದ್ದಾರೆ. ಒಂದೇ ಬಡವಾಣೆಯ ನಿವಾಸಿಗಳೂ ಆಗಿದ್ದರು. ಇಬ್ಬರು ಕೂಡ ಒಟ್ಟಿಗೇ ಇರುತ್ತಿದ್ದರು. ಕರೀಂ ಬಾಳೆಹಣ್ಣು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರೆ ವಾಜಿದ್ ಹಣ್ಣು ಮಾರಾಟದಲ್ಲಿ ತೊಡಗಿದ್ದನು. ಇಬ್ಬರು ಕೂಡಿ ಎಣ್ಣೆ ಪಾರ್ಟಿಯೂ ಮಾಡುತ್ತಿದ್ದರು. ಆದರೆ ಆ ಒಂದು ವಿಚಾರದಲ್ಲಿ ನಡೆದ ಜಗಳ ಕರೀಂನ ಕೊಲೆಯಲ್ಲಿ ಅಂತ್ಯವಾಗಿದೆ. ಅಕ್ಟೋಬರ್ 16 ರಂದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಪ್ರದೇಶದಲ್ಲಿ ವಾಜೀದ್ ಕರೀಂನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು. ಸದ್ಯ ಪೊಲೀಸರು ವಾಜೀದ್ನನ್ನು ಬಂಧಿಸಿದ್ದಾರೆ.
ಪ್ರತಿನಿತ್ಯ ಬಸ್ ನಿಲ್ದಾಣದ ಮುಂದೆ ಹಣ್ಣು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಆಳಂದ ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿ ನಿವಾಸಿ ಕರೀಂ, ಅಕ್ಟೋಬರ್ 16 ರಂದು ಮುಂಜಾನೆ ಕೂಡಾ ಬಾಳೆ ಹಣ್ಣು ಮಾರಾಟ ಮಾಡುವದಾಗಿ ಹೇಳಿ ಮನೆಯಿಂದ ತೆರಳಿದ್ದ. ಆದರೆ ರಾತ್ರಿ ಜನನಿಬಿಡ ಪ್ರದೇಶದಲ್ಲಿಯೇ ಕರೀಂನ ಹೊಟ್ಟೆಗೆ, ಕತ್ತಿನ ಭಾಗಕ್ಕೆ ಸಹೋದರ ಸಂಬಂಧಿ ವಾಜೀದ್ ಮಾಕರಾಸ್ತ್ರದಿಂದ ಇರಿದಿದ್ದನು. ಮಧ್ಯಪ್ರವೇಶಕ್ಕೆ ಮುಂದಾದ ಯುವಕನೋರ್ವನ ಮೇಲೂ ವಾಜೀದ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದನು.
ಕ್ಷುಲ್ಲಕ ಕಾರಣಕ್ಕೆ ಕರೀಂನ ಕೊಲೆ
ಅನೇಕ ವರ್ಷಗಳಿಂದ ಇಬ್ಬರು ಒಟ್ಟಿಗೇ ಇರುತ್ತಿದ್ದರೂ ಅನೇಕ ತಿಂಗಳಿಂದ ಇಬ್ಬರ ನಡುವೆ ಹಣದ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು. ಈ ಹಿಂದೆ ಕೂಡಾ ವಾಜೀದ್ ಕರೀಂ ಜೊತೆ ಜಗಳ ಮಾಡಿಕೊಂಡಿದ್ದನಂತೆ. ಆದರೆ ಅಕ್ಟೋಬರ್ 16 ರಂದು ಇಬ್ಬರು ಸೇರಿ ಮತ್ತೆ ಇಸ್ಪಿಟ್ ಆಡುವದು, ಮದ್ಯ ಕುಡಿಯುವದನ್ನು ಮಾಡಿದ್ದರಂತೆ. ಕೆಲ ದಿನಗಳ ಹಿಂದೆ ಕರೀಂ ಬಾಗಾವನ್ ಗೆ ವಾಜೀದ್ 300 ರೂಪಾಯಿ ನೀಡಿದ್ದನು. ಈ ವಿಚಾರವಾಗಿ ಅಂದು ಇಬ್ಬರು ಮದ್ಯ ಸೇವನೆ ಮಾಡಿದ ನಂತರ ಜಗಳ ಆರಂಭಿಸಿದ್ದಾರೆ.
ತಾನು ನೀಡಿದ 300 ರೂಪಾಯಿ ನೀಡುತ್ತಿಲ್ಲ ಎಂದು ಜಗಳ ತಗೆದಿದ್ದ ವಾಜೀದ್, ಕರೀಂನನ್ನು ಹಣ್ಣು ಕತ್ತರಿಸುವ ಮಾರಕಾಸ್ತ್ರವನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಕರೀಂ ಸಹೋದರನ ಮೇಲೂ ಹಲ್ಲೆ ಮಾಡಿದ್ದನು. ಆದರೆ ಇಬ್ಬರ ಜಗಳದಲ್ಲಿ ಕರೀಂ ಕೊನೆಯಲ್ಲಿ ಸಾವನ್ನಪ್ಪುತ್ತಾನೆ. ಸದ್ಯ ಆರೋಪಿ ವಾಜೀದ್ನನ್ನು ಆಳಂದ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ವರದಿ: ಸಂಜಯ್, ಟಿವಿ9 ಕಲಬುರಗಿ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:33 pm, Mon, 24 October 22