ಬೆಂಗಳೂರು: ಪ್ರೀತಿ, ಪ್ರೇಮ, ಪ್ರಣಯದ ನಡುವೆ ಉಂಟಾದ ಮದುವೆಯ ಬಗ್ಗೆ ಅದೊಂದು ಭಿನ್ನಾಭಿಪ್ರಾಯ ಪ್ರೇಯಸಿಯನ್ನು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿತ್ತು. ಪ್ರೇಮಿಯ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದ ಪ್ರೇಯಸಿ ನಂತರ ದೂರು ಹಿಂಪಡೆಯಲು ಹೋದರೂ ಪ್ರಯೋಜನವಾಗಿರಲಿಲ್ಲ. ಪ್ರೇಮಿಯನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಇದೀಗ ಪ್ರೇಮಿ ಹಾಗೂ ಪ್ರೇಯಸಿ ಇಬ್ಬರೂ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ತಾವಿಬ್ಬರೂ ವಿವಾಹವಾಗಿರುವುದರಿಂದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು. ಇಬ್ಬರ ಪ್ರಮಾಣಪತ್ರ ಪರಿಶೀಲಿಸಿದ ನ್ಯಾ. ಕೆ.ನಟರಾಜನ್ ರವರಿದ್ದ ಕರ್ನಾಟಕ ಹೈಕೋರ್ಟ್(Karnataka high court) ಪೀಠ ಪ್ರಕರಣ ರದ್ದುಪಡಿಸಿ ಆದೇಶ ನೀಡಿದೆ.
ಈ ಮೂಲಕ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ವಿವಾಹವಾಗಿರುವುದನ್ನು ಪರಿಗಣಿಸಿದ ಹೈಕೋರ್ಟ್, ಆರೋಪಿ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿ ಆದೇಶಿಸಿದೆ.
ಸಂತ್ರಸ್ತೆಯನ್ನು ವಿವಾಹವಾಗಿದ್ದು, ಜೀವನಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ವಾಗ್ದಾನ ನೀಡಿ ಆರೋಪಿ ಪ್ರಮಾಣ ಪತ್ರ ಸಲ್ಲಿಸಿದ್ದ. ಅದನ್ನು ಪರಿಗಣಿಸಿದ ಹೈಕೋರ್ಟ್, ಆರೋಪಿ ವಿರುದ್ಧದ ಅತ್ಯಾಚಾರ, ಹಣ ವಸೂಲಿ, ಜೀವ ಬೆದರಿಕೆ ಪ್ರಕರಣ ರದ್ದುಪಡಿಸಿತು. ಹಾಗೆಯೇ, ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾವುದೇ ರೀತಿ ತೊಂದರೆ ನೀಡಬಾರದು ಎಂದು ಆರೋಪಿಗೆ ಸೂಚಿಸಿದೆ.
ಪ್ರಕರಣ ಹಿನ್ನೆಲೆ
ಬೆಂಗಳೂರಿನ ಯುವತಿ 2022ರ ಅಕ್ಟೋಬರ್‌ನಲ್ಲಿ ಪೊಲೀಸರಿಗೆ ದೂರು ನೀಡಿ, ರವಿ ಎಂಬಾತ ತನ್ನ ಹುಟ್ಟುಹಬ್ಬದ ಆಚರಣೆ ನಿಮಿತ್ತ ಮನೆಗೆ ಆಹ್ವಾನಿಸಿದ್ದರು. ಅಂದು ಮದ್ಯ ಸೇವಿಸಿ ಬಂದಿದ್ದ ರವಿ, ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು. ಈ ವಿಷಯ ಬಹಿರಂಗಪಡಿಸಿದರೆ ಹತ್ಯೆ ಬೆದರಿಕೆ ಹಾಕಿದ್ದರು. ಜೊತೆಗೆ ಮದುವೆಯಾಗಬೇಕಿದ್ದರೆ ಹಣ ನೀಡುವಂತೆ ಒತ್ತಾಯಿಸಿದ್ದರು ಎಂದು ಯುವತಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಮತ್ತು ಹಣ ವಸೂಲಿ ಸೇರಿದಂತೆ ಇನ್ನಿತರ ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದರು.
ಆ ಪ್ರಕರಣ ರದ್ದುಕೋರಿ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರೇಮಿಸಿ ವಿವಾಹವಾಗುವ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಕೇಸ್ ದಾಖಲಾಗಿತ್ತು. ಇದೀಗ ಇಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ. ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಆರೋಪಿ ಪ್ರೇಮಿ ಕೋರ್ಟ್ ಗೆ ಮನವಿ ಮಾಡಿದ್ದ. ಇದಕ್ಕೆ ಪ್ರತಿವಾದಿಯಾಗಿದ್ದ ಯುವತಿಯೂ ಸಹಮತ ಸೂಚಿಸಿ ಪ್ರಕರಣ ರದ್ದು ಕೋರಿದ್ದರಿಂದ ಹೈಕೋರ್ಟ್ ಪ್ರಕರಣ ರದ್ದುಪಡಿಸಿ ಆದೇಶ ನೀಡಿದೆ.
Published On - 12:57 am, Wed, 18 January 23