Lokayukta: ನಾಪತ್ತೆಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪತ್ತೆಗಾಗಿ 3 ವಿಶೇಷ ತಂಡ ರಚನೆ
ಅತ್ತ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡು ಚಾಪೆ ಕೆಳಗೆ ತೂರಿ ಕಾನೂನು ಹೋರಾಟದ ಬಗ್ಗೆ ಚಿಂತನೆ ನಡೆಸಿದ್ದರೆ, ಇತ್ತ ಲೋಕಾಯುಕ್ತ ಅಧಿಕಾರಿಗಳು ರಂಗೋಲಿ ಕೆಳಗೆ ತೂರುತ್ತಿದ್ದಾರೆ.
ಬೆಂಗಳೂರು: ದಾವಣಗೆರೆಯ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ (Madal Virupakshappa) ಬಂಧನದ ಭೀತಿ ಎದುರಾಗಿದೆ., ಪುತ್ರ ಪ್ರಕಾಶ್ ಮಾಡಾಳ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆ ಬಿದ್ದಿದ್ದು, ಈ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎ1 ಆರೋಪಿಯಾಗಿದ್ದಾರೆ. ಆದ್ರೆ, ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಲೋಕಾಯುಕ್ತ ಮೂರು ತಂಡ ರಚಿಸಿದೆ. ಮೂವರು ಡಿವೈಎಸ್ ಪಿ ಗಳ ನೇತೃತ್ವದಲ್ಲಿ ಸುಮಾರು ಹದಿನೈದು ಜನರ ಅಧಿಕಾರಿಗಳ ಒಳಗೊಂಡಿರುವ ಮೂರು ಟೀಮ್ ರಚನೆ ಮಡಲಾಗಿದ್ದು, ಮಾಡಾಳ್ಗಾಗಿ ಹುಡುಕಾಟ ಆರಂಭಿಸಿವೆ.
ಇದನ್ನೂ ಓದಿ: Arvind Kejriwal: 8 ಕೋಟಿ ಸಮೇತ ಸಿಕ್ಕಿಬಿದ್ದರೂ ಬಂಧನ ಏಕಿಲ್ಲ? ಬಿಜೆಪಿ ವಿರುದ್ಧ ಕೇಜ್ರಿವಾಲ್ ಆಕ್ರೋಶ
ಶಾಸಕ ಮಾಡಾಳ್ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಬೆನ್ನಲ್ಲೇ ಇಂದಿಗೆ ಐದು ದಿನಗಳು ಆದರೂ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರತ್ಯಕ್ಷವಾಗಿಲ್ಲ. ಪುತ್ರನ ಬಂಧನದ ಬಳಿಕ ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ಮತ್ತೆಗೆ ಲೋಕಾಯುಕ್ತ ಅಧಿಕಾರಿಗಳು ತಂಡ ಕಟ್ಟಿಕೊಂಡು ಕಾರ್ಯಚರಣೆ ನಡೆಸಿದ್ದಾರೆ.
ಪೊಲೀಸರು ನೋಟಿಸ್ ನೀಡಿದ ಬಳಿಕ ವಿಚಾರಣೆಗೆ ಹಾಜರಾಗುವ ಲೆಕ್ಕಾಚಾರದಲ್ಲಿ ಮಾಡಾಳ್ ಇದ್ದಾರೆ. ಆದ್ರೆ, ನೋಟಿಸ್ ನೀಡದೇ ಎಂಎಲ್ಎ ಲಾಕ್ ಮಾಡಲು ಲೋಕಾಯುಕ್ತ ಅಧಿಕಾರಿಗಳ ಪ್ಲಾನ್ ಮಾಡಿದ್ದಾರೆ. ನೋಟಿಸ್ ನೀಡಿದ ತಕ್ಷಣ ಬಂಧನ ಮಾಡುವಂತಿಲ್ಲ. ಕನಿಷ್ಠ ಮೂರು ಬಾರಿ ವಿಚಾರಣೆ ಮಾಡಿ ನಂತರ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂದು ಅರೆಸ್ಟ್ ಮಾಡಬಹುದು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡದೇ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವ ಚಿಂತನೆ ನಡೆಸಿದೆ.
ಸದ್ಯ ಮಾಡಾಳ್ ಬಂಧನ ಮಾಡಿ ಮುಂದಿನ ವಿಚಾರಣೆ ನಡೆಸುವ ಲೆಕ್ಕಾಚಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಇದ್ದಾರೆ. ಇದೇ ಕಾರಣಕ್ಕೆ ಮಗ ಪ್ರಶಾಂತ್ ಮಾಡಾಳ್ ಹಾಗೂ ಉಳಿದ ನಾಲ್ವರನ್ನು ವಶಕ್ಕೆ ಪಡೆದಿಲ್ಲ. ಶಾಸಕರ ಬಂಧನ ಬಳಿಕವೇ ಜೈಲಿನಲ್ಲಿ ಇರುವ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಲೆಕ್ಕಾಚಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಇದ್ದಾರೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ರೇಡ್ ಬಳಿಕ ಎ1 ಆರೋಪಿ ವಿರೂಪಾಕ್ಷಪ್ಪ ಮೊಬೈಲ್ ಸ್ಚಿಚ್ಡ್ ಆಫ್ ಮಾಡಿಕೊಂಡು ಭೂಗತರಾಗಿದ್ದಾರೆ. ಜೊತೆಗೆ ಪುತ್ರರಾದ ಮಲ್ಲಿಕಾರ್ಜುನ್ ಮತ್ತು ರಾಜಣ್ಣ ಸಹ ಎಸ್ಕೇಪ್ ಆಗಿದ್ದಾರೆ. ಒಂದು ವೇಳೆ ಶಾಸಕ ಮಾಡಾಳ್ ಅರೆಸ್ಟ್ ಆದ್ರೆ ಪ್ರಶ್ನೆಗಳ ಮಳೆ ಗರೆಯೋದಕ್ಕೆ ಲೋಕಾ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ರೆಡಿಮಾಡಿಕೊಂಡಿದ್ದಾರೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 50 ಪ್ರಶ್ನೆಗಳನ್ನ ಕೇಳಿ ಗ್ರಿಲ್ ಮಾಡುವುದಕ್ಕೆ ಅಧಿಕಾರಿಗಳು ಸಜ್ಜಾಗಿದ್ದಾರೆ.
ಒಟ್ಟಿನಲ್ಲಿ ಅತ್ತ ವಿರೂಪಾಕ್ಷಪ್ಪ ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡು ಚಾಪೆ ಕೆಳಗೆ ತೂರಿ ಕಾನೂನು ಹೋರಾಟದ ಬಗ್ಗೆ ಚಿಂತನೆ ನಡೆಸಿದ್ದರೆ, ಇತ್ತ ಲೋಕಾಯುಕ್ತ ಅಧಿಕಾರಿಗಳು ರಂಗೋಲಿ ಕೆಳಗೆ ತೂರುತ್ತಿದ್ದಾರೆ.
Published On - 8:08 am, Mon, 6 March 23