ಶಿವಮೊಗ್ಗ, ಮೇ.09: ಶಿವಮೊಗ್ಗದ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ನಿನ್ನೆ(ಮೇ.08) ರೌಡಿಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಘಟನೆಯಲ್ಲಿ ಗೌಸ್ ಮತ್ತು ಶೋಯೆಬ್ ಎಂಬ ಇಬ್ಬರು ರೌಡಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆಯಲ್ಲಿ ಗಾಯಗೊಂಡಿದ್ದ ರೌಡಿ ಯಾಸೀನ್ ಖುರೇಷಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು(ಮೇ.09) ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಆಪರೇಶನ್ ಮಾಡಿ ಎರಡು ಗ್ಯಾಂಗ್ನಿಂದ 15 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ರೌಡಿ ಶೀಟರ್ ಯಾಸೀನ್ ಖುರೇಶಿಯು ಗೋಪಾಳಗೌಡ ಬಡಾವಣೆಯಲ್ಲಿ ಮನೆಗೆ ನುಗ್ಗಿ ಯುವಕರ ಮೇಲೆ ಹಲ್ಲೆ ಮಾಡಿದ್ದನು. ರೌಡಿ ಯಾಸೀನ್ ಖುರೇಶಿ ಅಟ್ಟಹಾಸಕ್ಕೆ ಬುದ್ದಿಕಲಿಸಲು ಎದುರಾಗಿ ಗ್ಯಾಂಗ್ ರೆಡಿಯಾಗಿತ್ತು. ಮೂರು ದಿನದ ಹಿಂದಯೇ ನಗರದಲ್ಲಿ ಈ ರಕ್ತಪಾತ ನಡೆಯಬೇಕಿತ್ತು. ಶಿವಮೊಗ್ಗ ಪೊಲೀಸರು ಚುನಾವಣೆ ಹಿನ್ನಲೆಯಲ್ಲಿ ನಗರದಲ್ಲಿ ಹೈ ಅಲರ್ಟ್ ಆಗಿದ್ದರು. ಈ ನಡುವೆ ನಿನ್ನೆ ಮತದಾನ ಮುಗಿಯುತ್ತಿದ್ದಂತೆ ಪೊಲೀಸ್ ಬಂದೋಬಸ್ತ್ ಕಡಿಮೆ ಆಗಿತ್ತು. ಇದೇ ಅವಕಾಶವನ್ನು ಕಾಯುತ್ತಿದ್ದ ರೌಡಿಗಳಾದ ಗೌಸ್ ಮತ್ತು ಶೋಯಬ್ ಗ್ಯಾಂಗ್ ಮತ್ತು ಇವರ ಸಹಚರರು ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಸಂಜೆ ಐದು ಗಂಟೆ ಆಸುಪಾಸಿನಲ್ಲಿ ಬೈಕ್ ಮೇಲೆ ನಗರದ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಎಂಟ್ರಿಕೊಟ್ಟಿದ್ದರು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಹಾಡಹಗಲೇ ಗ್ಯಾಂಗ್ವಾರ್: ಅನ್ಯಕೋಮಿನ ಇಬ್ಬರು ಯುವಕರ ಬರ್ಬರ ಹತ್ಯೆ
ರೌಡಿ ಯಾಸೀನ್ ಖುರೇಶಿ ಕಥೆ ಮುಗಿಸಲು ಸಾರ್ವಜನಿಕರ ಮುಂದೆ ಮಚ್ಚು ಲಾಂಗ್ ಹಿಡಿದುಕೊಂಡು ಬಂದಿದ್ದ ಗ್ಯಾಂಗ್. ಗೌಸ್ ಮತ್ತು ಶೋಯಬ್ ಅಲಿಯಾಸ್ ಸೇಬು ಗ್ಯಾಂಗ್ ಮೊದಲು ರಸ್ತೆಯಲ್ಲಿದ್ದ ರೌಡಿ ಶೀಟರ್ ಯಾಸೀನ್ ಖುರೇಶಿ ಮೇಲೆ ಅಟ್ಯಾಕ್ ಮಾಡಿದೆ. ಈ ಅಟ್ಯಾಕ್ ನೋಡುತ್ತಿದ್ದಂತೆ ಯಾಸೀನ್ ಗ್ಯಾಂಗ್ ಅಲರ್ಟ್ ಆಗಿದೆ. ಅಟ್ಯಾಕ್ಗೆ ಬಂದಿದ್ದ ಗೌಸ್ ಮತ್ತು ಶೋಯಬ್ ಇಬ್ಬರನ್ನು ಯಾಸೀನ್ ಖುರೇಶಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ದೊಡ್ಡ ಸಿಮೆಂಟ್ ಶೀಟ್, ಚಪ್ಪಡಿ ಕಲ್ಲು, ಸೈಕಲ್ ಎತ್ತುಹಾಕಿ ಬರ್ಬರ ಹತ್ಯೆ ಮಾಡಿದ್ದಾರೆ. ಈ ಇಬ್ಬರು ಸಿಕ್ಕಿಬೀಳುತ್ತಿದ್ದಂತೆ ಮೃತರ ಜೊತೆ ಬಂದಿದ್ದ ಸಹಚರರು ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ರೌಡಿ ಶೀಟರ್ ಯಾಸೀನ್ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
ಸಂಜೆ ಹೊತ್ತಿನಲ್ಲಿ ನಡೆದ ರೌಡಿಗಳ ಗ್ಯಾಂಗ್ ವಾರ್ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಹೆಣವಾಗಿ ಬಿದ್ದವರ ಮುಖ ಕೂಡ ಗುರುತು ಸಿಗದ ರೀತಿಯಲ್ಲಿ ಹತ್ಯೆ ಮಾಡಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಕೋಟೆ ಪೊಲೀಸರು ಅಲ್ಲಿಗೆ ಎಂಟ್ರಿಕೊಟ್ಟು, ಬಳಿಕ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಎಸ್ಪಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಎಸ್ಪಿ ಕೂಡಲೇ ಒಂದು ತಂಡ ರಚನೆ ಮಾಡಿದ್ದರು. ನಗರದಲ್ಲಿ ರೌಡಿಗಳ ಮಟ್ಟಹಾಕಲು ಈಗಾಗಲೇ ಎಸ್ಪಿ ಮಿಥುನ್ ಕುಮಾರ್ ಎಲ್ಲ ಅಗತ್ಯದ ಕ್ರಮ ವಹಿಸಿದ್ದರು. ಅನೇಕ ರೌಡಿಗಳ ಶೀಟರ್ ಗಳ ಗಡಿಪಾರು ಕೂಡ ಮಾಡಿದ್ದಾರೆ. ಈ ನಡುವೆ ಮತದಾನ ಮರುದಿನವೇ ರೌಡಿಗಳ ಗ್ಯಾಂಗ್ ವಾರ್ ಆಗಿದೆ. ಎರಡು ಗ್ಯಾಂಗ್ಗಳ ನಡುವೆ ವೈಯಕ್ತಿಕ ದ್ವೇಷವಿತ್ತು. ಈ ಹಿನ್ನಲೆಯಲ್ಲಿ ಎರಡು ಕೊಲೆ ಆಗಿದೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಶಿವಮೊಗ್ಗ ಪೊಲೀಸ್ ರೌಡಿಗಳ ಮಟ್ಟಹಾಕಲು ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ