ಹಬ್ಬಕ್ಕೆ ಬಂದವಳ ಮೇಲೆ ಮಚ್ಚು ಬೀಸಿದ ಪತಿ; ಅಪ್ರಾಪ್ತ ವಯಸ್ಸಲ್ಲಿ ಪ್ರೀತಿಯಲ್ಲಿ ಬಿದ್ದ ಯುವತಿಯ ದುರಂತ ಅಂತ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 30, 2024 | 4:35 PM

ಅವರಿಬ್ಬರೂ ಒಂದೇ ಗ್ರಾಮದವರು, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಆರು ತಿಂಗಳಲ್ಲಿಯೇ ಸ್ವರ್ಗದಂತಿದ್ದ ಗಂಡನ ಮನೆ ನರಕವಾಗಿತ್ತು. ಪ್ರೀತಿಸಿ ಕೈ ಹಿಡಿದಿದ್ದ ಗಂಡನ ಟಾರ್ಚರ್ ಮಿತಿಮೀರಿತ್ತು. ಅಪ್ರಾಪ್ತ ವಯಸ್ಸಿನಲ್ಲಿಯೇ ಪ್ರೀತಿಗೆ ಬಿದ್ದು ಮದುವೆಯಾಗಿದ್ದ ಯುವತಿ ಸಾಕಪ್ಪ ಸಾಕು ಎಂದು ಗಂಡನ ಬಿಟ್ಟು ತಾಯಿ ಜೊತೆ ಊರನ್ನೇ ಬಿಟ್ಟು ಹೋದವಳು, ಮುಳಕಟ್ಟಮ್ಮ ಜಾತ್ರೆಗೆ ಊರಿಗೆ ಬಂದಿದ್ದಳು. ಈ ವೇಳೆ ಭದ್ರಾ ನದಿಯ ನಾಲೆಯಲ್ಲಿ ಹೆಣವಾಗಿ ಹೋಗಿದ್ದಾಳೆ.

ಹಬ್ಬಕ್ಕೆ ಬಂದವಳ ಮೇಲೆ ಮಚ್ಚು ಬೀಸಿದ ಪತಿ; ಅಪ್ರಾಪ್ತ ವಯಸ್ಸಲ್ಲಿ ಪ್ರೀತಿಯಲ್ಲಿ ಬಿದ್ದ ಯುವತಿಯ ದುರಂತ ಅಂತ್ಯ
ಆರೋಪಿ, ಮೃತ ಮೇಘಾ
Follow us on

ಚಿಕ್ಕಮಗಳೂರು, ಏ.30: ಜಿಲ್ಲೆಯ ತರೀಕೆರೆ(Tarikere) ತಾಲೂಕಿನ ಕರಕುಚ್ಚಿ ಗ್ರಾಮದ ಹೊಳೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ 20 ವರ್ಷದ ಮೇಘಾ ಎಂಬ ಮಹಿಳೆಯನ್ನ ಬರ್ಬರವಾಗಿ ಗಂಡನೇ ಹತ್ಯೆ ಮಾಡಿದ್ದಾನೆ. ಹೌದು, ಹೊಳೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಮೇಘಾಳ ಮೇಲೆ ಪತಿ ಚರಣ್ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಮೃತ ಮೇಘಾ ತನ್ನ ಅಪ್ರಾಪ್ತ ವಯಸ್ಸಿನಲ್ಲೇ ಇದೆ ಗ್ರಾಮದ ಚರಣ್ ಜೊತೆ ಪ್ರೀತಿಗೆ ಬಿದ್ದಿದ್ದಳು. 10ನೇ ತರಗತಿ ಓದುವಾಗಲೇ ಪ್ರಿಯಕರ ಚರಣ್​ನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದರು. ಇದೀಗ ದುರಂತ ಅಂತ್ಯ ಕಂಡಿದ್ದಾಳೆ.

ಘಟನೆ ವಿವರ

ಇನ್ನು ಚರಣ್ ಜೊತೆ ಊರು ಬಿಟ್ಟು ಹೋಗಿದ್ದ ಮೇಘಾ ವಿಚಾರವಾಗಿ ಮೇಘಾ ತಾಯಿ ಆತಂಕಗೊಂಡು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಚರಣ್ ವಿರುದ್ಧ ಕಿಡ್ನಾಪ್ ಮತ್ತು ಅತ್ಯಾಚಾರದ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲಕ್ಕವಳ್ಳಿ ಪೊಲೀಸರು ಚರಣ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ ಜೈಲಿಗೆ ಬಿಟ್ಟಿದ್ದರು. ಮೇಘ ಮಾತ್ರ ತಾಯಿಯ ಮಾತು ಕೇಳದೆ ತನ್ನ ಗಂಡ ಚರಣ್​ಗಾಗಿ ಪಟ್ಟು ಹಿಡಿದಿದ್ದಳು. ಪ್ರೀತಿಸಿದ ಹುಡುಗನ ಜೊತೆ ಮಗಳು ಚೆನ್ನಾಗಿರಲಿ ಎಂದು ಮೇಘಾಳಿಗೆ 18 ವರ್ಷ ತುಂಬುತ್ತಿದ್ದಂತೆ ಊರಿನವರನ್ನ ಸೇರಿಸಿ ಮದುವೆ ಮಾಡಿದ್ದರು.

ಇದನ್ನೂ ಓದಿ:ದಾವಣಗೆರೆ: ಪತ್ನಿ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ ಪತಿ; ವಿಷಯ ತಿಳಿದ ಮಗನಿಂದ ತಂದೆಯ ಬರ್ಬರ ಹತ್ಯೆ

ಮೇಘಾ ನೂರಾರು ಕನಸುಗಳ ಜೊತೆ ಚರಣ್ ಮನೆ ಸೇರಿ ಕೊಂಡಿದ್ದಳು. ಆದರೆ, ಮೇಘಾಳಿಗೆ ಮದುವೆಯಾದ 6 ತಿಂಗಳಲ್ಲಿ ಚರಣ್ ಮನೆ ನರಕವಾಗ ತೊಡಗಿತ್ತು. ಊರಲ್ಲಿ ಕಳ್ಳ ಎಂಬ ಪಟ್ಟ ಕಟ್ಟಿಕೊಂಡಿದ್ದ ಚರಣ್, ಗಾಂಜಾ ಚಟ ಕೂಡ ಅಂಟಿಸಿಕೊಂಡಿದ್ದ. ದಿನದಿಂದ ದಿನಕ್ಕೆ ಚರಣ್​ನಲ್ಲಿ ಮೇಘಾಳ ಮೇಲಿದ್ದ ಪ್ರೀತಿ ಕಡಿಮೆಯಾಗ ತೊಡಗಿತ್ತು. ಊರಲ್ಲಿ ನಡೆದಿದ್ದ ಮನೆ ಕಳ್ಳತನದಲ್ಲಿ ಚರಣ್ ಹೆಸರು ಕೇಳಿ ಬಂದಿತ್ತು‌. ಕಳ್ಳ ಗಂಡನ ಜೊತೆ ಬದುಕಬಾರದು ಎಂದು ನಿರ್ಧಾರ ಮಾಡಿದ್ದ ಮೇಘಾ, ಮದುವೆಯಾದ 6 ತಿಂಗಳಲ್ಲಿ ಕರಕುಚ್ಚಿ ಗ್ರಾಮದ ತಾಯಿ ಮನೆ ಸೇರಿಕೊಂಡಿದ್ದಳು. ತಾಯಿ ಮನೆ ಸೇರಿದ ಮೇಘಾಳಿಗೆ ನಿತ್ಯ ಮನೆಗೆ ಬಂದು ಚರಣ್ ಹಿಂಸೆ ಕೊಡಲಾರಂಬಿಸಿದ್ದ. ಈ ಊರಲ್ಲಿ ಇದ್ದರೆ ಸರಿಯಾಗಲ್ಲ ಎಂದು ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಅಜ್ಜಿ ಮನೆಗೆ ಶಿಫ್ಟ್ ಆಗಿದ್ದರು.

ಜಾತ್ರೆಗೆ ಬಂದಿದ್ದ ಮೃತ ಮೇಘಾ

ಗಂಡನಿಂದ ದೂರಾಗಿದ್ದ ಮೇಫಾ, ತಾಯಿಯ ಜೊತೆ ಶಂಕರಘಟ್ಟದಲ್ಲಿದ್ದ ಅಜ್ಜಿ ಮನೆಯಲ್ಲಿ ಇದ್ದುಕೊಂಡು ಅದೇ ಊರಿನ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದಳು. ವರ್ಷದಿಂದ ಊರಿಗೆ ಬಾರದೆ ಇದ್ದವರು ಏ. 29ರ ಬೆಳಗ್ಗೆ ಕರಕುಚ್ಚಿ ಗ್ರಾಮಕ್ಕೆ ಬಂದಿದ್ದರು. ಊರಲ್ಲಿ ಮುಳುಕಟ್ಟಮ್ಮ ಜಾತ್ರೆ ಇರೋದ್ರಿಂದ ಮನೆಯನ್ನ ತಾಯಿ ಮಗಳು ಕ್ಲೀನ್ ಮಾಡಿ .ಮಧ್ಯಾಹ್ನ ಊಟ ಮುಗಿಸಿ ಊರಿನ ಹೊರ ವಲಯದಲ್ಲಿದ್ದ ಶಿವಮೊಗ್ಗದ ಭದ್ರಾ ಡ್ಯಾಮ್​ನಿಂದ ದಾವಣಗೆರೆಗೆ ಹೋಗುವ ಭದ್ರಾ ನಲೆಯಲ್ಲಿ ಬಟ್ಟೆ ತೊಳೆಯಲು ಮೇಘಾ ಏಕಾಂಗಿಯಾಗಿ ಹೋಗಿದ್ದಳು. ಊರಿಗೆ ಮೇಘಾ ಬಂದಿರುವ ವಿಚಾರ ತಿಳಿದಿದ್ದ ಚರಣ್, ಮೇಘಾಳನ್ನ ಹಿಂಬಾಲಿಸಿ, ನಾಲೆಯ ನೀರಿನಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಮೇಘಾಳ ಮೇಲೆ ಮಚ್ಚಿನಿಂದ ತಲೆ , ಕೈಯನ್ನು ಕೊಚ್ಚಿ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ:ಶಿವಮೊಗ್ಗ: ಮೆಂಟಲ್ ಸೂರಿ ಹತ್ಯೆ ಪ್ರಕರಣ; ಮೃತನ ಮಗನೂ ಸೇರಿ ಮೂವರ ಬಂಧನ

ಬಳಿಕ ರಕ್ತದ ಮಡುವಿನಲ್ಲಿ ಬಿದಿದ್ದ ಮೇಘಾಳನ್ನ ನೋಡಿದ ಗ್ರಾಮಸ್ಥರು, ಲಕ್ಕವಳ್ಳಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಊರಿಗೆ ಬರುವ ಮುನ್ನವೇ ಕೊಲೆಗಾರ ಯಾರು ಎಂಬುದು ಪೊಲೀಸರು ಸೇರಿದಂತೆ ಗ್ರಾಮಸ್ಥರಿಗೆ ತಿಳಿದಿತ್ತು. ಚರಣ್ ಮನೆಗೆ ಸೇರಿದ ಮೇಘಾಳಿಗೆ ಚರಣ್ ತಂದೆ-ತಾಯಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ರು ಎಂದು ಮೇಘಾ ತಾಯಿ ಆರೋಪ ಮಾಡಿದ್ದಾರೆ. ಆದ್ರೆ, ಗಂಡ‌ ಮತ್ತು ಅತ್ತೆ-ಮಾವನ ಕಾಟವನ್ನು ತಾಳಲಾರದೆ ಮೇಘಾ ತಾಯಿ ಮನೆ ಸೇರಿದ್ದಳು. ಜಾತ್ರೆಗೆಂದು ಕರಕುಚ್ಚಿ ಗ್ರಾಮದ ಮನೆಗೆ ಬಂದಿದ್ದ ಮೇಘಾಳನ್ನ ಬರ್ಬರವಾಗಿ ಹತ್ಯೆ ಮಾಡಿ ಚರಣ್ ಎಸ್ಕೇಪ್ ಆಗಿದ್ದ. ಆದರೆ, ಪೊಲೀಸರು ಹತ್ಯೆ ನಡೆದ ಒಂದು ಗಂಟೆಯಲ್ಲಿ ಚರಣ್​​ನನ್ನ ಬಂಧಿಸಿದ್ದರು.

ಇನ್ನು ಮಗಳ ಹತ್ಯೆ ನೋಡಿ ಎದೆ ಬಡಿದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ರೆ, ಗ್ರಾಮಸ್ಥರು ಅಪ್ರಾಪ್ತ ಬಾಲಕಿಯನ್ನ ಪ್ರೀತಿ ಪ್ರೇಮದ ನಾಟಕವಾಡಿ ಅವಳ ಬದುಕನ್ನ ಮುಗಿಸಿ ಬಿಟ್ಟನಲ್ಲ ಎಂದು ಆಕ್ರೋಶಗೊಂಡಿದ್ದರು. ಸ್ಥಳಕ್ಕೆ ಚಿಕ್ಕಮಗಳೂರು ASP ಕೃಷ್ಣಮೂರ್ತಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ್ ಮುಂದೆ ಬೇಡಿಕೆಟ್ಟ ಗ್ರಾಮಸ್ಥರು ಚರಣ್ ಗ್ರಾಮಕ್ಕೆ ಕರೆ ತರಬೇಕು ಕರೆ ತರದೆ ಇದ್ರೆ ಶವವನ್ನು ತೆಗೆಯಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ ಅವರ ಮನವೊಲಿಸಿದ ಹಿರಿಯ ಅಧಿಕಾರಿಗಳು, ಮಧ್ಯರಾತ್ರಿ ಮೇಘಾಳ ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ, ಊರಿಗೆ ತಂದು ಅಂತಿಮ ಕ್ರಿಯೆ ನಡೆಸಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ