ದಾವಣಗೆರೆ: ಪತ್ನಿ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ ಪತಿ; ವಿಷಯ ತಿಳಿದ ಮಗನಿಂದ ತಂದೆಯ ಬರ್ಬರ ಹತ್ಯೆ
ಕುಡಿದ ಅಮಲಿನಲ್ಲಿ ಪತ್ನಿಯನ್ನ ಮುಗಿಸಿದ್ದ. ಬಳಿಕ ಮನೆಯಲ್ಲಿಯೇ ಹಗ್ಗ ಬಿಗಿದು ಆತ್ಮಹತ್ಯೆ ಕಥೆ ಕಟ್ಟಿದ್ದ. ನಂತರ ಅವಳ ಮೈ ಮೇಲಿದ್ದ ಚಿನ್ನಾಭರಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಮಗ ಎದುರಿಗೆ ಬಂದ್ದಿದ್ದಾನೆ. ಕೋಪದಲ್ಲಿದ್ದ ಮಗ, ತನ್ನ ತಾಯಿ ಸಾವಿಗೆ ಕಾರಣವಾದ ತಂದೆಯನ್ನ ಕಲ್ಲು ಎತ್ತಿ ಹಾಕಿ ಮುಗಿಸಿದ್ದಾನೆ.
ದಾವಣಗೆರೆ, ಏ.26: ತಾಯಿ ಸಾವಿಗೆ ಕಾರಣವಾದ ತಂದೆಯನ್ನೇ ಮಗನೊಬ್ಬ ಹತ್ಯೆಗೈದಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು(Jagaluru) ತಾಲೂಕಿನ ಲಕ್ಕಂಪುರ ಗ್ರಾಮದಲ್ಲಿ ನಡೆದಿದೆ. ಹೌದು ಅಂಜನಪ್ಪ( 55) ತನ್ನ ಪತ್ನಿ ತಿಪ್ಪಮ್ಮ(49 ) ಎಂಬುವವರನ್ನು ನೇಣು ಬಿಗಿದು ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಚಿನ್ನದ ಆಭರಣವನ್ನು ತೆಗೆದುಕೊಂಡು ಹೋಗುವ ಪ್ಲಾನ್ ಮಾಡಿದ್ದ. ಜೊತೆಗೆ ಪತ್ನಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕೂಡ ಕಟ್ಟಿದ್ದ. ಈ ವಿಷಯ ಮಗ ಮಗ ರಮೇಶ್ಗೆ ಗೊತ್ತಾಗಿ ತಂದೆಯನ್ನು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.
ಮಗನ ಮದುವೆ ತಯಾರಿಯಲ್ಲಿದ್ದ ತಾಯಿ ಶವವಾದಳು
ಇನ್ನು ಕುಡಿತದ ಚಟಕ್ಕೆ ದಾಸನಾಗಿದ್ದ ಅಂಜನಪ್ಪ, ತನ್ನ ಪತ್ನಿಗೆ ಅಂಗನವಾಡಿ ಶಿಕ್ಷಕಿ ಹುದ್ದೆ ಸಿಕ್ಕರೂ ಬೇಡ ಎಂದು ನೌಕರಿ ಬಿಡಿಸಿದ್ದ. ಕುಡುಕ ಗಂಡನ ಕಟ್ಟಿಕೊಂಡ ಆಕೆ, ಗ್ರಾಮದ ಶಾಲೆಯಲ್ಲಿ ಬಿಸಿಯೂಟ ಮಾಡುತ್ತಾ ಮೂರು ಮಕ್ಕಳನ್ನು ಸಲುಹಿ, ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದಳು. ಇನ್ನೇನು ಮಗನ ಮದುವೆ ಯೋಜನೆಯಲ್ಲಿ ಇದ್ದ ಆಕೆಯನ್ನ ಪತಿಯೇ ಬಾರದ ಲೋಕಕ್ಕೆ ಕಳುಹಿಸಿದ್ದಾನೆ.
ಇದನ್ನೂ ಓದಿ:ರಾಯಚೂರು: ಹೆಂಡ್ತಿ ತಂಟೆಗೆ ಬಂದಿದ್ದವನ ಬರ್ಬರ ಹತ್ಯೆ; ಪತಿ-ಪತ್ನಿ ಸೇರಿ ಐದು ಜನ ಅರೆಸ್ಟ್!
ಎದುರಿಗೆ ಬಂದ ತಂದೆಯನ್ನೇ ಹತ್ಯೆಗೈದ ಮಗ
ಬೆಂಗಳೂರಿನಲ್ಲಿ ಕಾರ್ ಚಾಲಕನಾಗಿದ್ದ ಆರೋಪಿ ಮಗ ರಮೇಶ್, ಏ.25 ರಂದು ಸಂಬಂಧಿಕರ ಮದುವೆಗೆ ಬಂದಿದ್ದ. ತಡ ರಾತ್ರಿ ತನ್ನ ತಾಯಿಯನ್ನ ತಂದೆಯೇ ಕೊಲೆ ಮಾಡಿದ್ದಾನೆ ಎಂಬ ವಿಚಾರ ತಿಳಿದು, ಕೂಡಲೇ ಗ್ರಾಮಕ್ಕೆ ಬಂದಿದ್ದ, ಇದೇ ವೇಳೆ ತಂದೆ ಎದುರಿಗೆ ಬಂದಿದ್ದಾನೆ. ತಕ್ಷಣ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಹಾಕಿ ತಂದೆಯನ್ನು ಹತ್ಯೆಗೈದಿದ್ದಾನೆ. ತಂದೆಯ ಕುಡಿತದ ಚಟಕ್ಕೆ ಇಡೀ ಕುಟುಂಬ ನಾಶವಾಗಿದೆ. ಮದುವೆಗೆ ಬಂದಿದ್ದ ಮಗ ಜೈಲು ಪಾಲಾದರೆ, ತಾಯಿ-ತಂದೆ ಕೊಲೆಯಾಗಿ ಮಣ್ಣು ಸೇರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ