ಕೋಲಾರ: ಕ್ಷುಲ್ಲಕ ಕಾರಣಕ್ಕೆ ಸಹೋದರರ ಕಾಳಗ; ಅಣ್ಣನನ್ನೇ ಹತ್ಯೆಗೈದ ತಮ್ಮ

ಅವರು ರಕ್ತ ಹಂಚಿಕೊಂಡು ಹುಟ್ಟಿದ್ದ ಅಣ್ಣ ತಮ್ಮಂದಿರು. ಒಟ್ಟಿಗೆ ಆಡುತ್ತಾ ಬೆಳೆದಿದ್ದರು ಕೂಡ ಮೂವರದ್ದು, ಒಂದೊಂದು ಕಥೆ. ಹೀಗಿರುವಾಗಲೇ ಶೋಕಿ ಮಾಡ್ಕೊಂಡಿದ್ದ ಅಣ್ಣನನ್ನು ತಮ್ಮನೇ ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಕೋಲಾರದ ಮಿಲ್ಲತ್​ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಗಲ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರ: ಕ್ಷುಲ್ಲಕ ಕಾರಣಕ್ಕೆ ಸಹೋದರರ ಕಾಳಗ; ಅಣ್ಣನನ್ನೇ ಹತ್ಯೆಗೈದ ತಮ್ಮ
ತಮ್ಮ ಅಣ್ಣ
Edited By:

Updated on: Nov 28, 2025 | 4:30 PM

ಕೋಲಾರ, ನವೆಂಬರ್​​ 28: ಟೀ ಅಂಗಡಿ ಎದುರೇ ಲಾಂಗು ಹಿಡಿದು ಒಡಹುಟ್ಟಿದ ಅಣ್ಣನನ್ನೇ (Brother)  ತಮ್ಮ ಕೊಲೆ (kill) ಮಾಡಿರುವಂತಹ ಘಟನೆ ಕೋಲಾರದ ಮಿಲ್ಲತ್​ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಚ್ಚಿನಿಂದ ಕೊಚ್ಚಿ ಸಲ್ಮಾನ್ ಮೊಹಮ್ಮದ್​ನನ್ನು ಸಾಜಿದ್ ಕೊಲೆಗೈದಿದ್ದಾನೆ. ಸದ್ಯ ಕೊಲೆ ಆರೋಪಿ ಸಾಜಿದ್​ನನ್ನು ಪೊಲೀಸರು ಬಂಧಿಸಿದ್ದು, ಗಲ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಕಳೆದ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಸಾಜಿದ್ ಎಂಬಾತ ತನ್ನ ಒಡಹುಟ್ಟಿದ ಅಣ್ಣ ಸಲ್ಮಾನ್​ ಎಂಬಾತನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆಯ ದೃಶ್ಯಗಳು ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಟಾಟಾ ಸುಮೋ ಕಾರ್​ನಲ್ಲಿದ್ದ ಸಾಜಿದ್​ ತನ್ನ ಅಣ್ಣನೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಈ ವೇಳೆ ಕಾರ್​ನಿಂದ ಒಂದು ಉದ್ದದ್ದ ಲಾಂಗ್ ತೆಗೆದು ಏಕಾಏಕಿ ಹಲ್ಲೆ ಮಾಡಿ, ನಂತರ ಕಾರ್ ಹತ್ತಿ ಅಲ್ಲಿಂದ ತೆರಳುತ್ತಾನೆ. ಕೂಡಲೇ ಹಲ್ಲೆಗೊಳಗಾದ ಸಲ್ಮಾನ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದ. ಕೂಡಲೇ ಸ್ಥಳಕ್ಕೆ ಬಂದ ಗಲ್​ ಪೇಟೆ ಪೊಲೀಸರು ತಲೆಮರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಆರೋಪಿ ಸಾಜಿದ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪತಿಗೇ ಚಟ್ಟ ಕಟ್ಟಿದ ಪತ್ನಿ: ಕೊಲೆ ಪ್ಲ್ಯಾನ್​​ ಕೇಳಿದ್ರೆ ಶಾಕ್​​ ಆಗ್ತೀರ!

ಕೋಲಾರದ ಪ್ರಶಾಂತ್ ನಗರ ನಿವಾಸಿಗಳಾದ ಜಾಫರ್​ ಹಾಗೂ ಫರಾನಾ ದಂಪತಿಗೆ ಮೂರು ಜನ ಗಂಡು ಮಕ್ಕಳು. ಮೊದಲನೆಯವನು ಸಾಧಿಕ್​, ಎರಡನೆಯವನು ಸಲ್ಮಾನ್​, ಮೂರನೇಯವನು ಸಾಜಿದ್​. ಮೂರು ಜನಕ್ಕೆ ಇನ್ನು ಮದುವೆಯಾಗಿಲ್ಲ. ತಂದೆ ಜಾಫರ್​ ಮೃತಪಟ್ಟು ಹತ್ತು ವರ್ಷಗಳೇ ಕಳೆದಿವೆ. ಆದರೆ ಮೂರು ಜನರನ್ನು ತಾಯಿಯೇ ಕೂಲಿ ನಾಲಿ ಮಾಡಿ ಸಾಕಿದ್ದಾರೆ. ಮೊದಲನೆಯವ ಸಾಧಿಕ್​ ಹಾಗೂ ಮೂರನೇಯವ ಸಾಜಿದ್ ಕುಟುಂಬದೊಂದಿಗೆ ಇದ್ದು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು, ಆದರೆ ಕೊಲೆಯಾದ ಸಲ್ಮಾನ್​, ಅವರ ತಾಯಿ ಹೇಳುವಂತೆ ಶೋಕಿಲಾಲ, ಮಾದಕ ವಸ್ತುಗಳಿಗೆ ದಾಸನಾಗಿ ಹೋಗಿದ್ದ.

ಈ ಮೊದಲು ಕೂಡ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದ. ಸದ್ಯ ಅದು ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ನ.27 ರಂದು ಕೂಡ ಕೋರ್ಟ್ ವಿಚಾರಣೆ ಇತ್ತು. ಈ ವೇಳೆ ಲಾಯರ್​​ಗೆ ಹಣ ಕೊಡುವ ವಿಚಾರದಲ್ಲೇ ಸಲ್ಮಾನ್​ ಹಾಗೂ ಸಾಜಿದ್ ನಡುವೆ ಜಗಳವಾಗಿದೆ. ಇದಾದ ನಂತರ ಸಲ್ಮಾನ್ ಮನೆಗೆ ಹೋಗಿ ತಾಯಿಯೊಂದಿಗೆ ಗಲಾಟೆ ಮಾಡಿ ಬಂದಿದ್ದ. ಈ ಎಲ್ಲಾ ವಿಷಯ ತಿಳಿದುಕೊಂಡಿದ್ದ ಸಾಜಿದ್ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಟೀ ಅಂಗಡಿಯ ಬಳಿ ಕುಳಿತಿದ್ದ ಸಲ್ಮಾನ್​ ಜೊತೆಗೆ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಸಾಜಿದ್, ಲಾಂಗ್​ನಿಂದ ತನ್ನ ಅಣ್ಣನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಸರ್ಕಾರಿ ನೌಕರನೇ ಬೇಕೆಂದು ಮದುವೆ ಆಗುವ ಯುವತಿಯರೇ ಜೋಕೆ: ಪತಿಯ ವರದಕ್ಷಿಣೆ ಟಾರ್ಚರ್​​ಗೆ ನಾಲೆಗೆ ಹಾರಿದ ಮಹಿಳೆ

ಒಟ್ಟಾರೆ ರೂಢಿಸಿಕೊಂಡ ಕೆಲವೊಂದು ದುಷ್ಚಟಗಳು, ಸಹವಾಸಗಳು, ಮಾಡಬಾರದನ್ನು ಮಾಡಿಸಿ ಕೊನೆಗೆ ನಮ್ಮವರೇ ನಮ್ಮವರನ್ನು ಹತ್ಯೆ ಮಾಡುವಂತ ಸ್ಥಿತಿಗೆ ತಲುಪಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.