ಚೆನ್ನೈ: ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಆಕೆಯ ಪೋಷಕರು ಒಪ್ಪದ ಕಾರಣ ಯುವನೊಬ್ಬ ತಾನೇ ತನ್ನ ಪ್ರೇಯಸಿಯ ಕತ್ತು ಸೀಳಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಮಿಂಜೂರ್ ನಿವಾಸಿ ಅಜಿತ್ ಎಂಬ ವ್ಯಕ್ತಿ ತಾರಾಮಣಿಯಲ್ಲಿರುವ ತನ್ನ ಪ್ರೇಯಸಿಯ ಮನೆಯಲ್ಲಿ ಆಕೆಯ ಕುತ್ತಿಗೆ ಸೀಳಿ, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಅವರಿಬ್ಬರೂ ಬದುಕುಳಿದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಜಿತ್ ಮತ್ತು 22 ವರ್ಷದ ಯುವತಿ ಮೊಬೈಲ್ ಫೋನ್ ರಿಟೇಲ್ ಶೋರೂಮ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಸ್ನೇಹಿತರಾಗಿದ್ದರು. ಆ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಬದಲಾಗಿತ್ತು. ಅವರಿಬ್ಬರೂ ಮದುವೆಯಾಗಿ ಜೀವನ ಪೂರ್ತಿ ಒಟ್ಟಿಗೇ ಇರಲು ನಿರ್ಧರಿಸಿದ್ದರು. ಆದರೆ, ಆ ಯುವತಿಯ ಪೋಷಕರು ಇವರಿಬ್ಬರ ಸಂಬಂಧವನ್ನು ಒಪ್ಪದೆ ಬೇರೊಬ್ಬ ಪುರುಷನೊಂದಿಗೆ ಆಕೆಯ ಮದುವೆಯನ್ನು ಏರ್ಪಡಿಸಿದ್ದರು. ಇದರಿಂದ ಕೋಪಗೊಂಡ ಅಜಿತ್ ಭಾನುವಾರ ತಾರಾಮಣಿಯ ಕನಗಂ ಪ್ರದೇಶದಲ್ಲಿರುವ ತನ್ನ ಪ್ರೇಯಸಿಯ ಮನೆಗೆ ಹೋಗಿ ತಾವಿಬ್ಬರೂ ಸಾಯಬೇಕೆಂದು ನಿರ್ಧರಿಸಿದ್ದ.
ಪ್ರೇಯಸಿಯ ಮನೆಗೆ ಹೋಗಿ ಆಕೆಗೆ ತನ್ನ ಪ್ಲಾನ್ ಹೇಳಿದಾಗ ಆಕೆ ಸಾಯಲು ಒಪ್ಪಿಲ್ಲ. ಇದರಿಂದ ತಾನೇ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿದ ಅಜಿತ್ ಬಳಿಕ ತಾನು ಕೂಡ ನೇಣು ಬಿಗಿದುಕೊಂಡು ಸಾಯಲು ಪರಯತ್ನಿಸಿದ್ದ. ಅಷ್ಟರಲ್ಲಿ ರೂಮಿನಲ್ಲಿ ಗಲಾಟೆ ಕೇಳಿ ಬಾಗಿಲು ಒಡೆದು ಒಳಗೆ ಬಂದ ಆಕೆಯ ಮನೆಯವರಿಗೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ತಮ್ಮ ಮಗಳು ಕಂಡಿದ್ದಳು. ತಕ್ಷಣ ಆಕೆಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಬಳಿಕ, ಆ ಯುವತಿಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಾರಾಮಣಿ ಪೊಲೀಸರು ಆ ಮನೆಗೆ ಧಾವಿಸಿ ಬಾಗಿಲು ಒಡೆದು ನೋಡಿದಾಗ ಅಜಿತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ. ಮನೆಗೆ ಬಂದ ಅಜಿತ್ ನೀವು ಯಾರಾದರೂ ನಮ್ಮಿಬ್ಬರ ಮದುವೆ ನಿಲ್ಲಿಸಲು ಪ್ರಯತ್ನಿಸಿದರೆ ಎಲ್ಲರನ್ನೂ ಕೊಲ್ಲುವುದಾಗಿ ಅಜಿತ್ ಬೆದರಿಸಿದ್ದ. ನಂತರ ನಮ್ಮ ಮಗಳ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ಎಂದು ಯುವತಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ನಂತರ ಅಜಿತ್ನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Murder: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ