ಕೊಡಗು: ಕುತ್ತಿಗೆಗೆ ಗುಂಡು (Bullet) ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದಲ್ಲಿ ನಡೆದಿದೆ. ಮೈತಾಡಿ ಗ್ರಾಮದಲ್ಲಿ ಶರತ್ ಪೂವಯ್ಯ(36) ಮೃತ ದುರ್ದೈವಿ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶರತ್ ಪೂವಯ್ಯ ಸಿಂಗಲ್ ಬ್ಯಾರಲ್ ಗನ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿವೇಶನ ವಿಚಾರಕ್ಕೆ ಇಬ್ಬರ ಕೊಲೆ ಪ್ರಕರಣ
ತುಮಕೂರು: ನಿವೇಶನ ವಿಚಾರಕ್ಕೆ ಇಬ್ಬರು ಕೊಲೆಯಾಗಿರುವ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ. ರಾಮಾಂಜಿನಪ್ಪ(45), ಶಿಲ್ಪಾ(35) ಕೊಲೆಯಾದ ದುರ್ದೈವಿಗಳು. ಶ್ರೀಧರ್ ಗುಪ್ತಾ ಕೊಲೆ ಆರೋಪಿ. ಶ್ರೀಧರ್ ಗುಪ್ತಾ ಇಬ್ಬರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭೇಟಿ ನೀಡಿದ್ದು, ತುಮಕೂರು ಎಸ್ ಪಿ ರಾಹುಲ್ ಕುಮಾರ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ. ಐಜಿಪಿ ಚಂದ್ರಶೇಖರ್ ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಹಾಗೇ ಸ್ಥಳಕ್ಕೆ ಸಿಪಿಐ ರಾಮಕೃಷ್ಣಯ್ಯ ನೇತೃತ್ವದ ಡಿಸಿಆರ್ಇ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಡಿಸಿಆರ್ಇ ಅಧಿಕಾರಿಗಳು ಕೊಲೆಯಾದ ಸ್ಥಳ ಹಾಗೂ ವಿವಾದಿತ ಗಣೇಶ ದೇವಾಲಯ ಸ್ಥಳ ಮೃತರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಪೋಸ್ಟ್ಮಾರ್ಟ್ಮ್ ಬಳಿಕ ಮೃತದೇಹಗಳನ್ನು ಗ್ರಾಮಕ್ಕೆ ತರಲಾಗಿದೆ. ಗ್ರಾಮಕ್ಕೆ ಮಾಜಿ ಶಾಸಕ ಕೆಎನ್ ರಾಜಣ್ಣ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿಲ್ಲದ ಮೊಬೈಲ್ ಕಳ್ಳರ ಹಾವಳಿ
ಬೆಂಗಳೂರು: ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ ನಿಲ್ಲುತ್ತಿಲ್ಲ. ಸೆ.9ರಂದು ಉಪ್ಪಾರಪೇಟೆ ಠಾಣಾ ವ್ಯಾಪ್ತಿಯ ಗಾಂಧಿನಗರದಲ್ಲಿ ಬೀಟ್ ಪೊಲೀಸರ ಕಣ್ಣಳತೆಯಲ್ಲೆ ಕಳುವಾಗಿದೆ. ಖದೀಮರು ದ್ವಿಚಕ್ರ ವಾಹನದಲ್ಲಿ ಬಂದು ಕಲಬುರಗಿ ಮೂಲದ ರಾಕೇಶ್ ಎಂಬಾತನ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಪಂ ಸದಸ್ಯ ದೀಪಕ್ ಪಟದಾರಿ ಕೊಲೆ ಪ್ರಕರಣ; ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭ
ಹುಬ್ಬಳ್ಳಿ: ಜುಲೈ 4 ರಂದು ನಡೆದ ಗ್ರಾಪಂ ಸದಸ್ಯ ದೀಪಕ್ ಪಟದಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಕೆಗಾಗಿ ಸಿಐಡಿ ಅಧಿಕಾರಿಗಳು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಜುಲೈ 4 ರಂದು ಹುಬ್ಬಳ್ಳಿಯ ರಾಯನಾಳ ಬಳಿ ಗ್ರಾಪಂ ಸದಸ್ಯ ದೀಪಕ್ ಪಟದಾರಿಯನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಪೊಲೀಸರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಪ್ರಕರಣ ಮುಚ್ಚಿ ಹಾಕಲು ಪೊಲೀಸರು ಯತ್ನಿಸಿದ್ದಾರೆ ಎಂದು ದೀಪಕ್ ಪಟದಾರಿ ಸಹೋದರ ಸಂಜಯ್ ಗಂಭೀರ ಆರೋಪ ಮಾಡಿದ್ದರು. ಹೀಗಾಗಿ ಪ್ರಕರಣವನ್ನ ಕಳೆದ ಎರಡು ದಿನಗಳ ಹಿಂದೆ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.ಇದೀಗ ಸಿಐಡಿ ಅಧಿಕಾರಿಗಳಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಚಲಿಸುತ್ತಿದ್ದ ಗೂಡ್ಸ್ ವಾಹನದಲ್ಲಿ ದಿಢೀರನೆ ಹೊತ್ತಿಕೊಂಡ ಬೆಂಕಿ
ಕಲಬುರಗಿ: ಚಲಿಸುತ್ತಿದ್ದ ಗೂಡ್ಸ್ ವಾಹನದಲ್ಲಿ ದಿಢೀರನೆ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಲಬುರಗಿ ತಾಲೂಕಿನ ಶಿರನೂರು ಗ್ರಾಮದ ಬಳಿ ಗೂಡ್ಸ್ ವಾಹನದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಚಾಲಕ ಭಿಮಾಶಂಕರ್ ವಾಹನದಿಂದ ಕೆಳಗಿಳಿದಿದ್ದಾನೆ. ನೋಡು ನೋಡುತ್ತಿದ್ದಂತೆ ಗೂಡ್ಸ್ ವಾಹನ ಬೆಂಕಿಗೆ ಆಹುತಿಯಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗ್ರಾಮೀಣ ಭಾಗದಲ್ಲಿ ಸರಗಳ್ಳತನ ಮಾಡ್ತಿದ್ದವರ ಬಂಧನ
ದೊಡ್ಡಬಳ್ಳಾಪುರ: ಗ್ರಾಮಗಳಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಖದೀಮರನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ನಂದಿನಿ ಮತ್ತು ಹಾಸನ ಮೂಲದ ಧರ್ಮ ಬಂಧಿತ ಆರೋಪಿಗಳು. ಆರೋಪಿಗಳು ಗ್ರಾಮಗಳಲ್ಲಿ ಒಂಟಿಯಾಗಿ ಓಡಾಡುತ್ತಿದ್ದ, ಒಂಟಿಯಾಗಿ ಅಂಗಡಿ ನಡೆಸುತ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದರು.
ನಂತರ ಅಂಗಡಿಯಲ್ಲಿ ಖಾರದ ಪುಡಿಯನ್ನು ಖರೀದಿಸಿ ಮಹಿಳೆಯರ ಕಣ್ಣಿಗೆ ಎರುಚಿ ಸರವನ್ನು ಕದಿಯುತ್ತಿದ್ದರು. ಇದೇ ರೀತಿಯಾಗಿ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯಲ್ಲಿ ಖದೀಮರು ಕುಟುಂಬಸ್ಥರ ರೀತಿ ಬೈಕ್ನಲ್ಲಿ ಬಂದು ಗ್ರಾಮದಲ್ಲಿ ಸ್ಕೇಚ್ ಹಾಕಿದ್ದರು. ನಂದಿನಿ ಅಂಗಡಿಯೊಂದರಲ್ಲಿ ಒಂಟಿಯಾಗಿ ಇದ್ದ ಮಹಿಳೆಯನ್ನು ಟಾರ್ಗೆಟ್ ಮಾಡಿದ್ದಳು.‘
ನಂತರ ಅದೇ ಮಹಿಳೆಯ ಅಂಗಡಿಯಲ್ಲಿ ಖಾರದ ಪುಡಿಯನ್ನು ಖರೀದಿಸಿ ನಂತರ ಅದೇ ಮಹಿಳೆಯ ಕಣ್ಣಿಗೆ ನಂದಿನಿ ಕಾರದ ಪುಡಿಯನ್ನು ಎರಚಿದ್ದಾಳೆ. ನಂತರ ಕೊರಳಲ್ಲಿದ್ದ ಸರವನ್ನು ಖದಿಯಲು ಮುಂದಾಗಿದ್ದಾಳೆ. ಇದನ್ನು ಕಂಡ ಗ್ರಾಮಸ್ಥರು ಕೂಡಲೆ ಬಂದ ಮಹಿಳೆಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:41 pm, Fri, 23 September 22