ಮಂಡ್ಯ: ಬೈಕ್ ಕಳ್ಳತನದಲ್ಲಿ ತೊಡಗಿದ್ದ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಒಟ್ಟು ಮೂವರನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಟ್ಟನಹಳ್ಳಿ ಗ್ರಾಮದ ಅಭಿ ಮತ್ತು ಇಬ್ಬರು ಬಾಲ ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜೆಲ್ಲೆ ಮತ್ತು ರಾಮನಗರ ಜಿಲ್ಲೆಯಲ್ಲಿ ಬೈಕ್ಗಳನ್ನು ಕಳವು ಮಾಡುತ್ತಿದ್ದ ಈ ಗ್ಯಾಂಗ್ ಅನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 15 ಲಕ್ಷ ಮೌಲ್ಯದ 30 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಯತೀಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಲ್ವರು ಸುಲಿಗೆಕೋರರ ಬಂಧನ
ಬೆಳಗಾವಿ: ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ನಿಪ್ಪಾಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಕಾಂಬಳೆ(25), ಅವಧೂತ ಕೋಳಿ(25), ಅಕ್ಷಯ್ ಕೊಂಡಗೇರಿ(29), ಪಂಕಜ್ ಕೋಳಿ(25) ಎಂಬ ಆರೊಪಿಗಳನ್ನು ಬಂಧಿಸಿದ ಪೊಲಿಸರು, ಸುಲಿಗೆ ಮಾಡಿದ 75 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ಸಹಿತ ಕೃತ್ಯಕ್ಕೆ ಬಳಸಿದ 2 ಬೈಕ್ಗಳು, 4 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ಏಪ್ರಿಲ್ನಲ್ಲಿ ದೋಂಡಿರಾಮ್ ವಿಷ್ಣು ಕಾಂಬಳೆ ಎಂಬುವರಿಂದ ಚಿನ್ನ-ಬೆಳ್ಳಿ ಕದ್ದು ಆರೋಪಿಗಳು ಪರಾರಿಯಾಗಿದ್ದರು.
ಬಸ್ ಹಾಗೂ ಬೈಕ್ ಮುಖಾಮುಖಿ; ಓರ್ವ ಸಾವು
ಬೆಳಗಾವಿ: ಸರ್ಕಾರಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಸಮೀಪ ನಡೆದಿದೆ. ಸತ್ತಿ ಮಾರ್ಗವಾಗಿ ಜಮಖಂಡಿಯಿಂದ ಅಥಣಿ ಕಡೆ ಬರುತ್ತಿರುವ ಬಸ್ಗೆ ಕೆಎಂಎಫ್ ಡೈರಿ ಮುಂದೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ನಲ್ಲಿದ್ದ ಆನಂದ ಯಲ್ಲಪ್ಪ ವಟ್ಟನ್ನವರ (42) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಂಜುನಾಥ್ ಗಂಗಪ್ಪ ನಿಡೋಣಿ (25) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆರೆಗೆ ಇಳಿದಿದ್ದ ಇಬ್ಬರು ಬಾಲಕರ ಸಾವು
ಹಾಸನ: ಈಜು ಬಾರದಿದ್ದರೂ ಕೆರೆಗೆ ಇಳಿದಿದ್ದ ಇಬ್ಬರು ಬಾಲಕರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಂಜುನಾಥಪುರದಲ್ಲಿ ನಡೆದಿದೆ. ದಸರಾ ರಜೆ ಹಿನ್ನೆಲೆ ಆಕಾಶ್(13), ಲೋಕೇಶ್(13) ಮತ್ತು ಇನ್ನೊಬ್ಬ ಬಾಲಕ ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥಪುರ ಗ್ರಾಮದ ಸಮೀಪವಿದ್ದ ಕೆರೆಯೊಂದರಲ್ಲಿ ಈಜಲು ಹೋಗಿದ್ದಾರೆ. ಆದರೆ ಈಜಲು ಗೊತ್ತಿಲ್ಲ ಬಾಲಕರ ಪೈಕಿ ಆಕಾಶ್ ಮತ್ತು ಲೋಕೇಶ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Sat, 8 October 22