Bangalore: ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸ್ ದಾಳಿ; ಸೂಕ್ತ ತನಿಖೆ ನಡೆಸದ ಪಿಎಸ್ಐ ಸೇರಿ ಐವರು ಅಮಾನತು
ಬೆಟ್ಟಿಂಗ್ ಅಡ್ಡೆ ಮೇಲೆ ನಡೆದ ಪೊಲೀಸರ ದಾಳಿ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸದ ಆರೋಪ ಮೇಲೆ ಸದಾಶಿವನಗರ ಠಾಣೆ ಪಿಎಸ್ಐ ಸೇರಿ ನಾಲ್ವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ
ಬೆಂಗಳೂರು: ನಗರದಲ್ಲಿ ಬೆಟ್ಟಿಂಗ್ ಅಡ್ಡೆ ಮೇಲೆ ನಡೆದ ಪೊಲೀಸರ ದಾಳಿ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸದ ಆರೋಪ ಮೇಲೆ ಇದೀಗ ಸದಾಶಿವನಗರ ಠಾಣೆ ಪಿಎಸ್ಐ ಸೇರಿ ನಾಲ್ವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ ವೇಳೆ ಸರಿಯಾದ ತನಿಖೆ ನಡೆಸದಿರುವ ಆರೋಪ ಕೇಳಿಬಂದಿದೆ. ಈ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ಇಬ್ಬರು ಪಿಎಸ್ಐ, ಮೂವರು ಕಾನ್ಸ್‌ಟೇಬಲ್ಸ್ ಸಹಿತ ಐವರನ್ನು ಅಮಾನತುಗೊಳಿಸಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ.
ಗೋದಾಮಿನಲ್ಲಿ ಅಗ್ನಿ ಅವಘಡ
ಟ್ರೋಫಿ, ಪದಕಗಳು ಹಾಗೂ ಉಡುಗೊರೆ ಸಂಗ್ರಹಿಸಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಬೆಂಗಳೂರು ನಗರದ ಕಬ್ಬನ್ ಪೇಟೆಯ 2ನೇ ಕ್ರಾಸ್ನ ವಸತಿ ಪ್ರದೇಶದಲ್ಲಿ ನಡೆದಿದೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ವಸತಿ ಪ್ರದೇಶದಲ್ಲಿ ಬಾಡಿಗೆಗೆ ನೀಡಲಾಗಿದ್ದ ಈ ಗೋದಾಮಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಯಾಂಟರ್ ಡಿಕ್ಕಿ; ಇಬ್ಬರ ದುರ್ಮರಣ
ಕೋಲಾರ: ಕ್ಯಾಂಟರ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊರವಲಯದ ಕೋಲಾರಮ್ಮ ಕೆರೆ ಬಳಿ ನಡೆದಿದೆ. ಕೆಜಿಎಫ್ ತಾಲೂಕಿನ ಬೇತಮಂಗಲ ನಿವಾಸಿಗಳಾದ ಶಬ್ಬಿ ಉಲ್ಲಾಬೇಗ್(41) ಮತ್ತು ಇರ್ಷಾದ್ ಉಲ್ಲಾ(40) ಮೃತಪಟ್ಟ ದುರ್ದೈವಿಗಳು. ಕೆಲಸದ ನಿಮಿತ್ತ ಕೋಲಾರಕ್ಕೆ ಆಗಮಿಸುತ್ತಿದ್ದ ಶಬ್ಬಿ ಮತ್ತು ಇರ್ಷಾದ್ ಪ್ರಯಾಣಿಸುತ್ತಿದ್ದ ಬೈಕ್ಗೆ ಕೋಲಾರ ನಗರ ಸಂಚಾರಿ ಠಾಣಾ ವ್ಯಾಪ್ತಿಯ ಕೋಲಾರಮ್ಮ ಕೆರೆ ಬಳಿ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Sat, 8 October 22