ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸುಮಾರು ಐದು ವರ್ಷ ಪ್ರಾಯದ ಬಾಲಕಿಗೆ ತಿಂಡಿ ಕೊಡಿಸುವ ನೆಪದಲ್ಲಿ ಕಿರುಕುಳ ನೀಡಿದ ವ್ಯಕ್ತಿಯನ್ನು ಉಳ್ಳಾಲ ಪೊಲೀಸ್ ಠಾಣೆ ಸಿಬ್ಬಂದಿ ವಶಕ್ಕೆ ಒಪ್ಪಿಸಲಾಗಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಯನ್ನು ಆರೀಫ್ ಪಾಷಾ (30 ವರ್ಷ) ಎಂದು ಗುರುತಿಸಲಾಗಿದ್ದು, ಮೂಲತಃ ಬೆಂಗಳೂರಿನ ಕಲಾಸಿಪಾಳ್ಯ ನಿವಾಸಿಯಾದ ಆತ ಸದ್ಯ ಮಂಗಳೂರಿನ ಕಲ್ಕಟ್ಟದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. ಜೀವನ ನಡೆಸಲು ಕೆಲಸ ಅರಸಿ ಬಂದಿದ್ದ ಆರೀಫ್ ಪಾಷಾ ಕೂಲಿ ಕಾರ್ಮಿಕನಾಗಿದ್ದು, ಬಾಲಕಿಯ ತಂದೆಗೆ ಪರಿಚಿತನಾಗಿರುವ ಕಾರಣ ಅದನ್ನೇ ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಬಾಲಕಿ ತಂದೆಗೆ ಪರಿಚಿತನಾಗಿರುವ ಬಂಧಿತ ಆರೋಪಿಯು ಬಾಲಕಿಯನ್ನು ಮನೆಯಿಂದ ತಿಂಡಿ ಕೊಡಿಸುವ ನೆಪದಲ್ಲಿ ಕರೆತಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈತನ ಕೃತ್ಯದಿಂದ ಗಾಬರಿಗೊಂಡ ಬಾಲಕಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಅದೇ ಸಂದರ್ಭ ಆ ದಾರಿಯಲ್ಲಿ ಬರುತ್ತಿದ್ದ ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶು ಪಕಳ ದಂಪತಿ ಬೈಕ್ ನಿಲ್ಲಿಸಿದ್ದಾರೆ. ಕಾಪಾಡಿ ಕಾಪಾಡಿ ಅನ್ನುತ್ತಿದ್ದ ಬಾಲಕಿಯನ್ನು ಗಮನಿಸಿ ಏನಾಯಿತೆಂದು ಪ್ರಶ್ನಿಸಿದಾಗ ಪುಟ್ಟ ಬಾಲಕಿ ನಡೆದ ಕೃತ್ಯವನ್ನು ವಿವರಿಸಿದ್ದಾಳೆ.
ಬಾಲಕಿ ವಿಷಯ ತಿಳಿಸುತ್ತಿದ್ದಂತೆ ಸ್ಥಳೀಯರಿಗೆ ಮಾಹಿತಿ ನೀಡಿದ ಸಾಮಾಜಿಕ ಕಾರ್ಯಕರ್ತ ಯಶು ಪಕಳ ಅಲ್ಲಿದ್ದವರ ಸಹಕಾರದೊಂದಿಗೆ ಆರೋಪಿ ಆರೀಫ್ ಪಾಷಾನನ್ನು ತಕ್ಷಣ ಹಿಡಿದಿದ್ದಾರೆ. ಬಳಿಕ ಉಳ್ಳಾಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಆತನನ್ನು ಒಪ್ಪಿಸಿದ್ದಾರೆ. ಸದ್ಯ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:
ಫೇಸ್‌ಬುಕ್ ಖಾತೆ ತೆರೆದು ಮಹಿಳೆಯರಿಗೆ ಲೈಂಗಿಕ ಕಿರುಕುಳ: ಬಂಟ್ವಾಳ ಪೊಲೀಸರಿಂದ ಆರೋಪಿಯ ಬಂಧನ
(Mangaluru man sexually abused small girl detained by police with the help of public)