ಬೆಂಗಳೂರು: ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದು ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಯಶವಂತಪುರದ ಸುಬೇದಾರ್ ಪಾಳ್ಯದಲ್ಲಿ ನಡೆದಿದೆ. ಹುಲಿಯಪ್ಪ(75) ಚಾಕು ಇರಿತಕ್ಕೊಳಗಾದ ವೃದ್ಧ.
ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಹುಲಿಯಪ್ಪ ಎಂಬ ವೃದ್ಧನ ಕತ್ತು ಕೊಯ್ದು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಆರೋಪಿಗಳಾದ ರವೀಂದ್ರನ್, ಸುಹೇಲ್ನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯಶವಂತಪುರ ಸುಬೇದಾರ್ ಪಾಳ್ಯ ಕಾಳಿ ಟೆಂಪಲ್ ರಸ್ತೆ 4ನೇ ಅಡ್ಡ ರಸ್ತೆ ನಿವಾಸದಲ್ಲಿ ನಿನ್ನೆ ರಾತ್ರಿ ನಡೆದ ಘಟನೆ ಇದಾಗಿದೆ.
ಗಾಯಾಳು ಹುಲಿಯಪ್ಪನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.