ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಸಿಲಿಕಾನ್ ಸಿಟಿಯ ಕೆಲವು ಪೊಲೀಸರಿಗೂ ಸೋಂಕು ತಗಲುತ್ತಿದ್ದು ನಗರದ ಹಲವು ಠಾಣೆಗಳು ಸಹ ಸೀಲ್ಡೌನ್ ಆಗುತ್ತಿವೆ. ಹಾಗಾಗಿ ನಮ್ಮ ಖಾಕಿ ಪಡೆ ಈ ಮಹಾಮಾರಿಯಿಂದ ಕೊಂಚ ನಲುಗಿ ಹೋಗಿದ್ದಾರೆ.
ಇದರಿಂದ ನಗರದ ಪುಂಡರು ಮತ್ತು ಕಳ್ಳಕಾಕರಿಗೆ ಎಂದಿಲ್ಲದ ಧೈರ್ಯ ಬಂದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಕೆಲವು ದಿನಗಳಿಂದ ಹೆಣ್ಣೂರು ಹಾಗೂ ಹೆಬ್ಬಾಳದ ಸುತ್ತಮುತ್ತಲಿನ ಏರಿಯಾಗಳಲ್ಲಿ ಪುಂಡರ ಗ್ಯಾಂಗ್ ಒಂದು ಜನರನ್ನು ಬೆದರಿಸಿ ಹಣ ಕಿತ್ತುಕೊಳ್ಳೋಕೆ ಶುರುಮಾಡಿದ್ದಾರೆ.
ಸೀದಾ ಜೇಬಿಗೆ ಕೈಹಾಕಿ ದರೋಡೆ..!
ಕೊರೊನಾ ಮಹಾಮಾರಿಗೆ ನಲುಗಿ ಜನರನ್ನೇ ಮುಟ್ಟಲು ಬೆಂಗಳೂರಿಗರು ಹಿಂದೆಮುಂದೆ ಯೋಚಿಸುತ್ತಿರುವ ಈ ಸಂದರ್ಭದಲ್ಲಿ ಸೀದಾ ಜೇಬಿಗೇ ಕೈಹಾಕಿ ಹಣ ದೋಚುತ್ತಿದ್ದಾರಂತೆ. ಹಣ ತಗೊಳ್ಳಲು ಬಿಟ್ರೆ ಬಚಾವ್. ಇಲ್ಲಾಂದ್ರೆ ಚಾಕು, ಮಚ್ಚು ತೋರಿಸಿ ಕಿತ್ತುಕೊಳ್ತಾರೆ. ಜಾಸ್ತಿ ಮಾತಾಡ್ರೆ ಎರಡೇಟು ಕೂಡ ಬೀಳುತ್ತೆ.
ಅಂದ ಹಾಗೆ ಇವರೇನು ದೊಡ್ಡ ಪಂಟರ್ಗಳಲ್ಲ. ಸಣ್ಣ ವಯಸ್ಸಿನ ಹುಡುಗರು. ಸ್ಕೂಟರ್, ಬೈಕ್ಗಳ ಮೇಲೆ ಗುಂಪುಗುಂಪಾಗಿ ಪೆಟ್ಟಿ, ಸಿಗರೇಟ್ ಅಂಗಡಿಗಳ ಬಳಿ ಅಡ್ಡಾಡೋ ಈ ಗ್ಯಾಂಗ್ ಎಲ್ಲಿ ಟಾರ್ಗೆಟ್ ಕಂಡರೇ ಅಲ್ಲೇ ಸ್ಕೆಚ್. ಸುತ್ತಲೂ ಜನರಿದ್ರೂ ಡೋಂಟ್ ಕೇರ್. ಬರೀ ಗ್ರಾಹಕರಲ್ಲದೆ ಅಂಗಡಿ ಮಾಲೀಕರನ್ನು ದೋಚುತ್ತಿದ್ದಾರೆ.
ಈ ಏರಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದ ಇಂಥ ಹತ್ತಕ್ಕು ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇನ್ನಾದರೂ ಪೊಲೀಸರು ಈ ಪುಂಡರ ಗ್ಯಾಂಗ್ನ ಹೆಡೆಮುರಿ ಕಟ್ಟಬೇಕು ಎಂಬುದು ಸ್ಥಳೀಯರ ಮನವಿ.