ಬೆಂಗಳೂರು: ನಗರದ ಟಿಪ್ಪುನಗರ ವಾರ್ಡ್ನ ಮಾಜಿ ಕಾರ್ಪೊರೇಟರ್ ನಜೀಮಾ ಅವರ ಪತಿ ಆಯೂಬ್ ಖಾನ್ ಕೊಲೆಗೆ ಇರಬಹುದಾದ ಶಂಕಿತ ಕಾರಣವು ಪೊಲೀಸರ ದೂರಿನಲ್ಲಿ ನಮೂದಾಗಿದೆ. ನಜೀಮಾ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಮಸೀದಿಯ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಆಯೂಬ್ ಖಾನ್ ಅವರ ಸಹೋದರನ ಮಗ ಮತೀನ್ ಖಾನ್ ಈ ಕೊಲೆ ಮಾಡಿದ್ದಾನೆ ಎಂದು ದೂರಲಾಗಿದೆ.
ಟಿಪ್ಪು ನಗರದ ಖುದಾದತ್ ಮಸೀದಿಯ ಅಧ್ಯಕ್ಷಗಿರಿಗಾಗಿ ಇವರಿಬ್ಬರ ನಡುವೆ ಪೈಪೋಟಿ ನಡೆಯುತ್ತಿತ್ತು. 15 ವರ್ಷದಿಂದ ಖುದಾದತ್ ಮಸೀದಿಗೆ ಆಯೂಬ್ ಅಧ್ಯಕ್ಷರಾಗಿದ್ದರು. ಈ ಹುದ್ದೆಯನ್ನು ತನಗೆ ಬಿಟ್ಟುಕೊಡುವಂತೆ ಕಳೆದ ವರ್ಷದಿಂದ ಮತೀನ್ ಪಟ್ಟು ಹಿಡಿದ್ದರು. ಇದೇ ವಿವಾದಕ್ಕೆ ಸಂಬಂಧಿದಂತೆ 6 ತಿಂಗಳ ಹಿಂದೆಯೂ ಒಮ್ಮೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದ ಎಂದು ನಜೀಮಾ ಹೇಳಿದ್ದಾರೆ.
ನೀನು ಇರುವವರೆಗೂ ನಾನು ಪ್ರೆಸಿಡೆಂಟ್ ಆಗುವುದಿಲ್ಲ ಎಂದು ಮತೀನ್ ಪಟ್ಟು ಹಿಡಿದಿದ್ದ. ಸೋದರನ ಮಗ ಎನ್ನುವ ಕಾರಣಕ್ಕೆ ಆಯೂಬ್ ಈ ವಿಷಯದಲ್ಲಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಆಯೂಬ್ ಮನೆ ಬಳಿ ಬಂದಿದ್ದ ಮತೀನ್ ಗಲಾಟೆ ಮಾಡಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪತಿ ಆಯೂಬ್ ಖಾನ್ ಸಾವು
ಚಾಕು ಇರಿತದಿಂದ ಗಾಯಗೊಂಡಿದ್ದ ಬೆಂಗಳೂರಿನ ಟಿಪ್ಪುನಗರ ವಾರ್ಡ್ನ ಮಾಜಿ ಕಾರ್ಪೊರೇಟರ್ ನಜೀಮಾ ಅವರ ಪತಿ ಆಯೂಬ್ ಖಾನ್ ಗುರುವಾರ (ಜುಲೈ 14) ನಸುಕಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟರು. ನಿನ್ನೆಯಷ್ಟೇ ಆಯೂಬ್ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಯೂಬ್ ಹೊಟ್ಟೆಯ ಭಾಗದಲ್ಲಿ ತೀವ್ರ ರಕ್ತಸ್ರಾವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಫಲಿಸದೆ ಆಯೂಬ್ ಅವರು ಮೃತಪಟ್ಟರು. ಆಸ್ತಿ ವಿಚಾರವಾಗಿ ಆಸ್ತಿ ವಿಚಾರವಾಗಿ ಆಯೂಬ್ ಖಾನ್ ಅಣ್ಣನ ಮಕ್ಕಳಿಂದ ಅಪರಾಧ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದರು. ಆಯೂಬ್ ಹೊಟ್ಟೆಯ ಭಾಗಕ್ಕೆ ದುಷ್ಕರ್ಮಿಗಳು ಇರಿದಿದ್ದರು. ಆರೋಪಿಗಳಿಗಾಗಿ ಚಾಮರಾಜಪೇಟೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಮೇಲ್ನೋಟಕ್ಕೆ ಆಸ್ತಿ ವಿವಾದವೇ ಜಗಳಕ್ಕೆ ಮುಖ್ಯ ಕಾರಣ ಎಂದು ಶಂಕಿಸಲಾಗಿದೆ. ರಕ್ತದ ಮಡುವಿನಲ್ಲಿದ್ದ ಅಯೂಬ್ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನ ಮಗನೊಂದಿಗೆ ಪದೇ ಪದೇ ಜಗಳ ನಡೆಯುತ್ತಿತ್ತು. ನಿನ್ನೆ ಸಂಜೆ ಮನೆಗೆ ಹೋಗಿದ್ದ ಅಯೂಬ್ ಅಣ್ಣನ ಮಗನಿಂದ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಹೊಟ್ಟೆಗೆ ಇರಿಯಲಾಗಿದೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಗೆ ಶಾಸಕ ಜಮೀರ್ ಅಹಮದ್ ಭೇಟಿ
ಈ ನಡುವೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಯೂಬ್ ಖಾನ್ ಮರಣೋತ್ತರ ಪರೀಕ್ಷೆ ನಡೆಯಿತು. ನಂತರ ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರ ಮಾಡಲಾಯಿತು. ಈ ವೇಳೆ ಅಭಿಮಾನಿಗಳು ಕಣ್ಣೀರಿಟ್ಟರು.
Published On - 10:40 am, Thu, 14 July 22