ಸೆನ್ಸೇಷನಲ್ ಕ್ರೈಮ್ ಕತೆಗಳು: ಅಪರಾಧ ಕತೆಗಳನ್ನು ಓದುತ್ತಾ, ಕೇಳಿಸಿಕೊಳ್ಳುತ್ತಾ ಬಂದವರಿಗೆ 80 ರ ದಶಕದಲ್ಲಿ ತಮಿಳು ನಾಡು ರಾಜಧಾನಿಯ ದಕ್ಷಿಣ ಭಾಗಕ್ಕಿರುವ ತಿರುವನ್ಮಯ್ಯೂರ್ ಮತ್ತು ಪೆರಿಯಾರ್ ನಗರದಲ್ಲಿ (Periyarnagar) ಡಾನ್ ಅಗಿ ಮೆರೆದ, ಕೊಲೆಗಳ ಮೇಲೆ ಕೊಲೆಗಳನ್ನು ಮಾಡಿ ಇಡೀ ರಾಜ್ಯದ ಪೊಲೀಸ್ ವ್ಯವಸ್ಥೆಯನ್ನೇ ತತ್ತರಿಸುವಂತೆ ಮಾಡಿದ ಆಟೋ ಶಂಕರ್ (Auto Shankar) ಹೆಸರು ಗೊತ್ತಿರುತ್ತದೆ. ಹಾಗೆ ನೋಡಿದರೆ, ಅವನ ಪಾತಕ ಸಾಮ್ರಾಜ್ಯ ಬಹಳ ದಿನಗಳೇನೂ ಉಳಿಯಲಿಲ್ಲ. 80 ರ ದಶಕದಲ್ಲಿ ಅವನ ಕುಖ್ಯಾತಿಯ ಉತ್ತುಂಗಕ್ಕೇರಿದ್ದು ನಿಜವಾದರೂ ಅವನು ನಡೆಸಿದ ಹತ್ಯೆಗಳ ಸುಳಿವು ಸಿಗುತ್ತಿದ್ದಂತೆಯೇ ಪೊಲೀಸರ ಒಂದು ವಿಶೇಷ ತಂಡ (SIT) ಶಂಕರ್ ಮತ್ತವನ ಸಹಚರರನ್ನು ಮಟ್ಟಹಾಕಿತು.
ಪೇಂಟರ್ ಆಗಿದ್ದ!
1955 ರಲ್ಲಿ ವೆಲ್ಲೋರ್ ಜಿಲ್ಲೆಯ ಕಂಗೆಯಾಣಲ್ಲೂರ್ ಹೆಸರಿನ ಗ್ರಾಮದಲ್ಲಿ ಅವನು ಹುಟ್ಟಿದಾಗ ಅಪ್ಪ ಅಮ್ಮ ಗೌರಿಶಂಕರ್ ಅಂತ ಹೆಸರಿಟ್ಟರು. ಉಪಜೀವನ ನಡೆಸಲು ಶಂಕರ್, ಪೆರಿಯಾರ್ ನಗರಕ್ಕೆ ಬಂದು ಪೇಂಟರ್ ಆಗಿ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ಆರಂಭಿಸಿದ. ನಂತರ ಆಟೋ ರಿಕ್ಷಾ ಓಡಿಸಲಾರಂಭಿಸಿದ. ತನ್ನ ಆಟೋದಲ್ಲಿ ಅವನು ತಿರುವನ್ಮಯ್ಯೂರ್ ಮತ್ತು ಮಮ್ಮಲಾಪುರಂ ನಡುವಿನ ಹಳ್ಳಿಗಾಡು ಪ್ರದೇಶಗಳಿಂದ ಕಳ್ಳಭಟ್ಟಿಯನ್ನು ಆಗಿನ ಮದ್ರಾಸ್ ನಗರಕ್ಕೆ ಸಾಗಿಸುತ್ತಿದ್ದ. ಅವನ ಆಟೋಗಳು ಯುವತಿಯರನ್ನು ವೇಶಾವೃತ್ತಿ ನಡೆಯುತ್ತಿದ್ದ ಸ್ಥಳಗಳಿಗೆ ಒಯ್ಯಲು ‘ಸವಾರಿ‘ಯಾಗಿ ಸಹ ಉಪಯೋಗಿಸಲಾಗುತ್ತಿದ್ದವು.
ನಂತರ ಅವನೊಂದು ಟೀಮ್ ಕಟ್ಟಿದ. ಅದರಲ್ಲಿ ಅವನ ತಮ್ಮ ಮೋಹನ್, ಭಾವಮೈದುನ ಎಲ್ಡಿನ್ ಜೊತೆಗೆ ಶಿವಾಜಿ, ಜಯವೇಲು, ಪಳನಿ, ಪರಮಸಿವಂ ಮತ್ತು ಇನ್ನೂ ಕೆಲ ಜನ ಇದ್ದರು. ಅವನ ಕೈಯಲ್ಲಿ ದುಡ್ಡು ಆಡತೊಡಗಿತ್ತು. ಹೆಂಗಸರನ್ನು ತನ್ನ ಆಳುಗಳ ಹಾಗೆ ಟ್ರೀಟ್ ಮಾಡುತ್ತಿದ್ದ. ಅವನ ಒಡ್ಡೋಲಗದಲ್ಲಿ ಒಂದಷ್ಟು ಸಖಿಯರಿದ್ದರು. ಅವರಲ್ಲೊಬ್ಬಳ ಹೆಸರು ಲಲಿತಾ.
ಮೊದಲು ಹತ್ಯೆಯಾದವಳು ಲಲಿತಾ!
ಆಟೋ ಶಂಕರ್ ನಿಂದ ಮೊಟ್ಟ ಮೊದಲು ಹತ್ಯೆಗೊಳಗಾದವಳೇ ಲಲಿತಾ. ಅವಳನ್ನು ಕೊಲ್ಲುವುದಕ್ಕೆ ಕಾರಣವಿತ್ತು. ಶಂಕರ್ ತನ್ನ ರೂಮಿಗೆ ಕರೆದಾಗ ಅವಳು ಹೋಗಿ ಅವನೊಂದಿಗೆ ಮಲಗುತ್ತಿದ್ದಳಾದರೂ ಅವನ ಆಪ್ತವಲಯದಲ್ಲಿದ್ದ ಸುಡಲೈಮುತ್ತು ಎನ್ನುವನನ್ನು ಪ್ರೀತಿಸುತ್ತಿದ್ದಳು. ಅದೊಂದು ದಿನ ಲಲಿತಾ ಮತ್ತು ಸುಡಲೈಮುತ್ತು ನಾಪತ್ತೆಯಾದರು. ತನ್ನೊಂದಿಗೆ ಮಲಗುತ್ತಿದ್ದ ಹೆಂಗಸು ತಾನು ಹೇಳಿದಂತೆ ಕೇಳಿಕೊಂಡಿದ್ದ, ತಾನು ಕೊಡುವ ಹಣದಲ್ಲಿ ಬದುಕು ನಡೆಸುತ್ತಿದ್ದ ಯುವಕನೊದಿಗೆ ಓಡಿಹೋದ ಸಂಗತಿ ಅವನು ಸಹಿಸಿಕೊಳ್ಳುವುದು ಸಾಧ್ಯವಿರಲಿಲ್ಲ.
ಅವರನ್ನು ಪತ್ತೆ ಹೆಚ್ಚುವಂತೆ ಅವನು ಉಳಿದ ಸಹಚರರಿಗೆ ಫರ್ಮಾನು ಹೊರಡಿಸಿದ. ಅವರು ಲಲಿತಾ ಮತ್ತು ಸುಡಲೈಮುತ್ತುವನ್ನು ಹುಡುಕಿ ವಾಪಸ್ಸು ಪೆರಿಯಾರ್ ನಗರಲ್ಲಿದ್ದ ಶಂಕರ್ ನ ಡೆನ್ ಗೆ ಕರೆತಂದರು.
ಭೀಕರವಾಗಿ ಕೊಂದು ಹಾಕಿದ!
ಇದು 1987ರಲ್ಲಿ ನಡೆದ ಘಟನೆ. ಅವರು ಬಂದ ಕೂಡಲೇ ಶಂಕರ್ ಮಾಡಿದ್ದೇನು ಗೊತ್ತಾ? ಲಲಿತಾಳನ್ನು ಬಡಿಗೆಯೊಂದರಿಂದ ಸಾಯುವವರೆಗೆ ಹೊಡೆದು ಕೊಂದು ಹಾಕಿದ! ಅವಳು ನೋವಿನಿಂದ ಕಿರಿಚುತ್ತಿದ್ದರೆ ಶಂಕರ್ ಕೇಕೆ ಹಾಕುತ್ತಿದ್ದನಂತೆ!! ನಂತರ ಅವಳ ದೇಹವನ್ನು ಪೆರಿಯಾರ್ ನಗರದಲ್ಲಿದ್ದ ಒಂದು ಖಾಲಿ ನಿವೇಶನದಲ್ಲಿ ಹೂತುಹಾಕಿದ. ಆಮೇಲೆ ಸುಡಲೈಮುತ್ತು ಮೇಲೆ ಪೆಟ್ರೋಲ್ ಸುರಿದು ಅವನನ್ನು ಜೀವಂತವಾಗಿ ಸುಟ್ಟುಬಿಟ್ಟ! ಸುಡಲೈಮುತ್ತು ಒದ್ದಾಡಿ ಸತ್ತು ಅವನ ದೇಹ ಇದ್ದಿಲಿನಂತಾದಾಗ ಒಂದು ಕಂಬಳಿಯಲ್ಲಿ ಅದನ್ನು ಸುತ್ತಿ ಬಂಗಾಳ ಕೊಲ್ಲಿಯಲ್ಲಿ ಬಿಸಾಡಿದ. ಲಲಿತಾಳ ಅವಶೇಷಗಳು 15-ತಿಂಗಳು ನಂತರ ಪತ್ತೆಯಾಗಿದ್ದವು.
ಸೀರಿಯಲ್ ಕಿಲ್ಲರ್!
ಚೆನೈನ ಅಪರಾಧ ಜಗತ್ತಿನಲ್ಲಿ ಅವನೀಗ ಸೀರಿಯಲ್ ಕಿಲ್ಲರ್ ಆಗಿ ಗುರುತಿಸಿಕೊಳ್ಳಲಾರಭಿಸಿದ್ದ. 1987 ರಿಂದ 1988 ರವರೆಗೆ ಅವನು ತಿರುವನ್ಮಯೂರ್ ಮತ್ತು ಮದ್ರಾಸ್ ನಗರದಿಂದ 9 ಹದಿಹರೆಯದ ಬಾಲೆಯರನ್ನು ಅಪಹರಿಸಿ, ಅವರ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿದ. ಪೊಲೀಸರು ಅವನನ್ನು ಬಂಧಿಸಿ ಕೋರ್ಟ್ ಎದುರು ಹಾಜರುಪಡಿಸಿದಾಗ ಸಿನಿಮಾವೊಂದರಿಂದ ಪ್ರೇರಿತನಾಗಿ ಹತ್ಯೆಗಳನ್ನು ನಡೆಸಿನೆಂದು ಹೇಳಿದನಾದರೂ ನ್ಯಾಯಾಧೀಶರು ಅವನ ವಾದವನ್ನು ಕಡೆಗಣಿಸಿದರು.
ಅಂದಹಾಗೆ ಅವನು ಯುವತಿಯರನ್ನು ಯಾಕೆ ಕೊಲ್ಲುತ್ತಿದ್ದ ಗೊತ್ತಾ? ಶಂಕರ ಯುವತಿಯರನ್ನು ಮೊದಲಿಗೆ ಕೆಲ ರಾಜಕಾರಣಿಗೆ ಸರಬರಾಜು ಮಾಡುತ್ತಿದ್ದನಂತೆ. ಅಲ್ಲಿಂದ ವಾಪಸ್ಸು ಕರೆತರುವಾಗ ಅವರು ಯಾರಮುಂದೆಯಾದರೂ ಬಾಯಿಬಿಟ್ಟಾರು ಅನ್ನುವ ಕಾರಣಕ್ಕೆ ಅವರ ಮೇಲೆ ಅತ್ಯಾಚಾರವೆಸಗಿ ಕೊಂದುಬಿಡುತ್ತಿದ್ದನಂತೆ!
ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು!
ಅವನನ್ನು ಹಿಡಿಯಲು ಪೊಲೀಸರ ಒಂದು ವಿಶೇಷ ತಂಡ ರಚಿಸಲಾಗಿತ್ತು. ಆ ತಂಡದಲ್ಲಿ ಶಂಕರ್ ಪರಿಚಯವಿದ್ದ ಒಬ್ಬ ಪೊಲೀಸ್ ಪೇದೆ ಇದ್ದರು. ಅವರ ಮಾರ್ಗದರ್ಶನದಲ್ಲಿ ಪೆರಿಯಾರ್ ನಗರದಲ್ಲಿರುವ ಅವನ ಡೆನ್ ಮೇಲೆ ದಾಳಿ ನಡೆಸಿದ ಪೊಲೀಸ್ ತಂಡ ಶಂಕರ್ ಮತ್ತು ಅವನ ಸಹಚರರನ್ನು ಒಟ್ಟಿಗೆ ಬಂಧಿಸಿ ಚೆನೈನ ಕೇಂದ್ರೀಯ ಕಾರಾಗೃಹದಲ್ಲಿರಿಸಿದರು. ಆದರೆ, ಒಬ್ಬ ಹೆಂಗಸಿನ ನೆರವಿನಿಂದ ಶಂಕರ್ ಜೈಲಿನಿಂದ ಪರಾರಿಯಾದ!
ಆದರೆ ಅವನ ಪತ್ತೆಗಾಗಿ ಜಾಲ ಬೀಸಿದ ಪೋಲಿಸರಿಗೆ ಅವನ ಒಡಿಷಾದ ಉಕ್ಕಿನ ನಗರ ರೂರ್ಕೆಲಾದಲ್ಲಿರೋದು ಗೊತ್ತಾಯಿತು. ಅಲ್ಲಿಂದ ಅವನನ್ನು ಪೊಲೀಸರು ಎಳೆ ತಂದ ನಂತರ ನ್ಯಾಯಾಲಯ ಅವನಿಗೆ ಗಲ್ಲು ಶಿಕ್ಷೆ ವಿಧಿಸಿತು.
1995ರಲ್ಲಿ ಸೇಲಂ ಜೈಲಿನಲ್ಲಿ ಶಂಕರ್ ಮತ್ತು ಅವನ ಸಹಚರರಾದ ಎಲ್ಡಿನ್ ಮತ್ತು ಶಿವಾಜಿಯನ್ನು ಗಲ್ಲಿಗೇರಿಸಲಾಯಿತು.