ಮೈಸೂರು ಪ್ರತಿಕಾರದ ಕೊಲೆ: 7 ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು
ರೌಡಿಶೀಟರ್ ಚಂದ್ರಶೇಖರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಸಿಸಿಬಿ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರು: ರೌಡಿಶೀಟರ್ (Rowdy sheeter) ಚಂದ್ರಶೇಖರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು (Mysore) ಸಿಸಿಬಿ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಚಂದ್ರಶೇಖರ್ ಅಲಿಯಾಸ್ ಚಂದ್ರು ಕೊಲೆಯಾದ ರೌಡಿಶೀಟರ್. ಆರ್ ಯಶವಂತ್ ಅಲಿಯಾಸ್ ಖರ್ಜೂರ, ಎನ್ ಮಹೇಶ್, ಆರ್ ಪ್ರೀತಂ ಗೌಡ ಅಲಿಯಾಸ್ ಹಾಲಪ್ಪ, ಎನ್ ಸುದೀಪ್, ರಾಘವೇಂದ್ರ, ಪ್ರಶಾಂತ್, ಅರವಿಂದ್ ಸಾಗರ್ ಬಂಧಿತ ಆರೋಪಿಗಳು. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರತಿಕಾರದ ಕೊಲೆ
2008 ರ ಮೇ 15 ರಂದು ಹುಣಸೂರಿನ ಎಪಿಎಂಸಿ ಬಳಿಯ ತೋಟದ ಮನೆಯಲ್ಲಿ ಇಬ್ಬರ ಹತ್ಯೆಯಾಗಿತ್ತು. ಹಾಗೆಯೇ 2016 ರಲ್ಲಿ ಮೇ.5 ರಂದು ಪಡುವಾರಹಳ್ಳಿ ದೇವು ಹತ್ಯೆಯಾಗಿತ್ತು. ಈ ಎರಡೂ ಪ್ರಕರಣದ ಆರೋಪಿಯಾಗಿದ್ದ ಚಂದ್ರು ಮತ್ತು ಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್ ಜೊತೆಗೆ ಜೈಲು ಸೇರಿ ಇತ್ತೀಚೆಗೆ ದೋಷಮುಕ್ತನಾಗಿ ಹೊರಬಂದಿದ್ದನು. ಬಂದ ಬಳಿಕ ಪತ್ನಿ ನಡೆಸುತ್ತಿರುವ ಫಾಸ್ಟ್ಫುಡ್ ಅಂಗಡಿಯಲ್ಲಿ ತಾನು ಕೂಡ ಕೆಲಸ ಮಾಡಲು ಆರಂಭಿಸಿದನು. ಇದರೊಂದಿಗೆ ಸಣ್ಣ ಪುಟ್ಟ ಫೈನಾನ್ಸ್ ಮಾಡ್ಕೊಂಡು ಆರಾಮಾಗಿಯೇ ಇದ್ದನು.
ಆದರೆ ಕಳೆದ ಕೆಲ ದಿನಗಳ ಹಿಂದೆ ಚಂದ್ರು ಒಂಟಿಕೊಪ್ಪಲಿನ ತನ್ನ ಮನೆ ಬಳಿ ಟೈಲರ್ ಅಂಗಡಿ ಮುಂಭಾಗ ಸಂಜೆ 5 ಗಂಟೆ ವೇಳೆಗೆ ಮಾತನಾಡುತ್ತ ಕುಳಿತಿದ್ದನು. ಈ ವೇಳೆ ದ್ವಿಚಕ್ರ ವಾಹನಗಳಲ್ಲಿ ಬಂದ ಹಂತಕರು ಲಾಂಗು ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದರು.
ಕೂಡಲೇ ಸಂಬಂಧಿಕರು ಹಲ್ಲೆಗೊಳಗಾದ ಚಂದ್ರುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಇನ್ನೂ ವಿಚಾರ ತಿಳಿದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿ ಮುತ್ತುರಾಜ್ ಸಿಬ್ಬಂದಿ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 am, Sun, 21 May 23