ಮೈಸೂರು: ಮನೆ ಕಟ್ಟಲು ಪಡೆದಿದ್ದ ಸಾಲ ತೀರಿಸಲಾಗದೆ ಯೋಧ ಆತ್ಮಹತ್ಯೆ

ನೇಣುಬಿಗಿದು ಯೋಧನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ನಗರದ ಹೊಸ ಬಡಾವಣೆಯಲ್ಲಿ ನಡೆದಿದೆ. ಮನೆ ಕಟ್ಟಲು ಮಾಡಿದ ಸಾಲ ತೀರಿಸಲಾಗದ ಕಾರಣ ನೊಂದಿದ್ದ ಸೈನಿಕ ಜೀವ ಕಳೆದುಕೊಂಡಿದ್ದಾರೆ. ಇತ್ತ ಕೊಪ್ಪಳದ ಲಾಡ್ಜ್​ ಒಂದರಲ್ಲಿ ನೇಣು ಹಾಕಿಕೊಂಡು ಹಾಸ್ಟೆಲ್​ ವಾರ್ಡನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾರ್ಡನ್​ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೈಸೂರು: ಮನೆ ಕಟ್ಟಲು ಪಡೆದಿದ್ದ ಸಾಲ ತೀರಿಸಲಾಗದೆ ಯೋಧ ಆತ್ಮಹತ್ಯೆ
ಯೋಧ ಆತ್ಮಹತ್ಯೆ
Updated By: ಪ್ರಸನ್ನ ಹೆಗಡೆ

Updated on: Oct 20, 2025 | 6:47 AM

ಮೈಸೂರು/ಕೊಪ್ಪಳ, ಅಕ್ಟೋಬರ್​ 20: ಮನೆ ಕಟ್ಟಲು ಪಡೆದಿದ್ದ ಸಾಲ ತೀರಿಸಲಾಗದೇ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ನಗರದ ಹೊಸ ಬಡಾವಣೆಯಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ಯೋಧ ಎಂ. ಚಂದ್ರಶೇಖರ್(35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರಶೇಖರ್​, ಬೆಂಗಳೂರಿನ R.T. ನಗರದ ಪ್ಯಾರಾಚೂಟ್ ರೆಜಮೆಂಟ್‌ನ ಯೋಧರಾಗಿದ್ದು, ಹುಣಸೂರಿನ ಹೊಸ ಬಡಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಹೊಸದಾಗಿ ಮನೆ ನಿರ್ಮಿಸಿದ್ದರು. ಮನೆ ನಿರ್ಮಾಣಕ್ಕಾಗಿ ಬ್ಯಾಂಕ್​ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿದ್ದರು ಎನ್ನಲಾಗಿದೆ.

15 ವರ್ಷಗಳಿಂದ ಜಮ್ಮುಕಾಶ್ಮೀರ, ಆಗ್ರಾ, ಚೀನಾ ಗಡಿ ಸೇರಿ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದ ಚಂದ್ರಶೇಖರ್​, ಒಂದು ತಿಂಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದರು. ದೀಪಾವಳಿ ಹಬ್ಬದ ನಂತರ ಕರ್ತವ್ಯಕ್ಕೆ ಅವರು ವಾಪಸ್ಸು ತೆರಳಬೇಕಿತ್ತು. ಆದರೆ ಮನೆಗಾಗಿ ಮಾಡಿರುವ ಸಾಲ ತೀರಿಸಲಾಗದೆ ಚಂದ್ರಶೇಖರ್​ ಪರದಾಟ ನಡೆಸುತ್ತಿದ್ದರು. ಇದರಿಂದಾಗಿ ಮನ ನೊಂದಿದ್ದ ಅವರು, ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಚಂದ್ರಶೇಖರ್​ ಅವರ ಆತ್ಮಹತ್ಯೆಯಿಂದಾಗಿ ದೀಪಾವಳಿ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಚ್ಛೇದನ ಪಡೆದಿದ್ದ ಪತ್ನಿಯನ್ನು ಹುಡುಕಿಕೊಂಡು ಹೋಗಿ ಕೊಂದ ಪೊಲೀಸಪ್ಪ

ಹಾಸ್ಟೆಲ್​ ವಾರ್ಡನ್ ಆತ್ಮಹತ್ಯೆ

ಲಾಡ್ಜ್​ನಲ್ಲಿ ನೇಣು ಹಾಕಿಕೊಂಡು ಹಾಸ್ಟೆಲ್​ ವಾರ್ಡನ್ ಆತ್ಮಹತ್ಯೆಗೆ ಶರಣಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಹಾಮೇಶ್ ಲಮಾಣಿ (39) ಎಂದು ಗುರುತಿಸಲಾಗಿದೆ. ನಗರದ ಬಸ್ ನಿಲ್ದಾಣದ ಮುಂಭಾಗವಿರುವ ಖಾಸಗಿ ಲಾಡ್ಜ್​ನಲ್ಲಿ ರೂಮ್​ ಪಡೆದಿದ್ದ ಹಾಮೇಶ್​, ರೂಮ್​ ನಂಬರ್​ 114ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸ್ಟೆಲ್​ ವಾರ್ಡನ್​ ಆತ್ಮಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನ ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.