ವಿಚ್ಛೇದನ ಪಡೆದಿದ್ದ ಪತ್ನಿಯನ್ನು ಹುಡುಕಿಕೊಂಡು ಹೋಗಿ ಕೊಂದ ಪೊಲೀಸಪ್ಪ
ಅವರು 13ವರ್ಷಗಳಿಂದ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಜಾತಿ ಬೇರೆಯಾದ್ರೂ ಪ್ರೀತಿ ಒಂದೇ ಅನ್ನೋ ಸಂದೇಶ ನೀಡಿದ್ದರು. ಆತ ಪೊಲೀಸ್ ಕಾನ್ಸ್ಟೆಬಲ್ ಆಗಿದ್ರೇ ಅವಳು ಸರ್ಕಾರಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಳು. ಪ್ರೀತಿಸಿ ಮದುವೆಯಾಗಿದ್ದಾಕೆ ಗಂಡ ಬೇಡಾ ಅಂತಾ ಕೆಲ ತಿಂಗಳ ಹಿಂದೆ ವಿಚ್ಛೇದನ ಕೂಡ ಪಡೆದಿದ್ದಳು ಅಷ್ಟೇ, ಆಕೆಯ ಕಥೆಯನ್ನೇ ಮುಗಿಸಿದ್ದಾನೆ ಪಾಪಿ ಗಂಡ. ಅಷ್ಟಕ್ಕೂ ಯಾವ ಕಾರಣಕ್ಕೆ ಈ ಜೋಡಿ ಬೇರೆಯಾಗಿದ್ದು? ಪತ್ನಿ ಕೊಂದು ಗಂಡ ಮಾಡಿದ್ದೇನು ಅಂತೀರಾ ಈ ಸ್ಟೋರಿ ನೋಡಿ.

ಬೆಳಗಾವಿ, (ಅಕ್ಟೋಬರ್ 19): ಆತ ಪೊಲೀಸ್ ಕಾನ್ಸ್‌ಟೇಬಲ್ (Karnataka Police Constable). ಆಕೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ (KSRTC Conductor). ಪ್ರೀತಿಸಿ ಮದ್ವೆಯಾದವ್ರಿಗೆ (Love Marriage) ಒಬ್ಬ ಮುದ್ದಾದ ಮಗನೂ ಇದ್ದ. ಆದ್ರೆ, ದುಶ್ಚಟಗಳ ದಾಸನಾದ ಗಂಡ (Husband) ಕೊಡಬಾರದ ಕಾಟ ಕೊಡ್ತಿದ್ದ. ಹೀಗಾಗಿ ಗಂಡನಿಂದ ದೂರವಾಗುತ್ತಿದ್ದಂತೆಯೇ ಇಳಿ ಸಂಜೆ ಹೊತ್ತಲ್ಲಿ (Wife) ಅಟ್ಟಹಾಸ ಮೆರೆದಿದ್ದಾನೆ. ಹೌದು..ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಾಕೆ ಗಂಡ ಬುದ್ದಿ ಕಲಿಲ್ಲ ಎಂದು ವಿಚ್ಛೇಧನ ಪಡೆದು ತನ್ನಷ್ಟಕ್ಕೆ ತಾನು ಬದುಕುತ್ತಿದ್ದಳು. ಆದ್ರೆ ಒಂಟಿಯಾಗಿ ಬದುಕು ಕಟ್ಟಿಕೊಳ್ಳುತ್ತಿದ್ದವಳು ಭೀಕರವಾಗಿ ಹತ್ಯೆಯಾಗಿ ಹೋಗಿದ್ದಾಳೆ. ಅಷ್ಟಕ್ಕೂ ಆಕೆಯೆ ಹೆಸರು ಕಾಶಮ್ಮಾ ನೆಲ್ಲಿಗಣಿ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ನಿವಾಸಿಯಾಗಿದ್ದ ಈಕೆ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾರೆ.
ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡ್ತಿದ್ದ ಈಕೆ ತನ್ನೂರು ಬಿಟ್ಟು ಸವದತ್ತಿ ಪಟ್ಟಣದ ರಾಮಸೈಟ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಳು. ಅಕ್ಟೋಬರ್ 13ರಂದು ಕೆಲಸ ಮುಗಿಸಿ ಮನೆಗೆ ಬಂದಾಕೆ ವಾಪಾಸ್ ಹೋಗಿರಲಿಲ್ಲ. ಇದಾದ ಬಳಿಕ ಇಂದು ಬೆಳಗ್ಗೆ ಮನೆಯಿಂದ ದುರ್ವಾಸನೆ ಬರಲಾರಂಭಿಸಿತ್ತು, ಇದನ್ನ ಗಮನಿಸಿದ ಅಕ್ಕ ಪಕ್ಕದ ಜನರು ಕೂಡಲೇ ಸವದತ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ನೋಡಿದ ಪೊಲೀಸರು ಕಾಶಮ್ಮ ಬರ್ಬರವಾಗಿ ಕೊಲೆಯಾಗಿದ್ದಳು. ಸತ್ತು ನಾಲ್ಕು ದಿನದ ಬಳಿಕ ಗೊತ್ತಾಗಿದ್ದು ಕೂಡಲೇ ಆಕೆಯ ಹೆತ್ತವರಿಗೆ ಸುದ್ದಿ ಮುಟ್ಟಿಸಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದರು.
ಇದನ್ನೂ ಓದಿ: ಕಾರ್ಕಳ ಯುವಕನ ಸಾವಿನ ಹಿಂದೆ ಹನಿಟ್ರ್ಯಾಪ್ ಜಾಲ? ಡೆತ್ ನೋಟ್ನಿಂದ ಸ್ಪೋಟಕ ಅಂಶ ಬಯಲು
ಅಷ್ಟಕ್ಕೂ ಇಲ್ಲಿ ಕಾಶಮ್ಮ ಮನೆಯವರ ವಿರೋಧದ ನಡುವೆ 13ವರ್ಷದ ಹಿಂದೆ ಕಾಗವಾಡ ತಾಲೂಕಿನ ಬನಜವಾಡ ಗ್ರಾಮದ ಸಂತೋಷ್ ಕಾಂಬಳೆ ಎಂಬಾತನ ಪ್ರೀತಿಸಿ ಮದುವೆಯಾಗಿದ್ದಳು. ಇನ್ನೂ ಗಂಡ ಪೊಲೀಸ್ ಪೇದೆಯಾಗಿ ಕೆಲಸ ಮಾಡ್ತಿದ್ರೇ ಹತ್ತು ವರ್ಷದ ಹಿಂದೆ ಈಕೆಯೂ ಕಂಡೆಕ್ಟರ್ ನೌಕರಿ ಮಾಡುತ್ತಿದ್ದಳು. ಆದ್ರೆ ಕೆಲ ವರ್ಷಗಳ ಬಳಿಕ ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಮನಸ್ತಾಪ ಶುರುವಾಗಿತ್ತು. ಅದರಲ್ಲೂ ಪತ್ನಿ ಕಾಶಮ್ಮಳ ಮೇಲೆ ಗಂಡ ಸಂತೋಷ್ ಸಂಶಯ ಪಡಲಾರಂಭಿಸಿದ್ದ, ಇದೇ ವಿಚಾರಕ್ಕೆ ಆಕೆಗೆ ಕಿರುಕುಳ ಕೂಡ ನೀಡುತ್ತಿದ್ದ. ಇದರಿಂದ ರೋಷಿ ಹೋಗಿದ್ದ ಕಾಶಮ್ಮ ಈತನ ಸಹವಾಸ ಬೇಡ ಎಂದು ಬಿಟ್ಟು ತವರು ಮನೆ ಸೇರಿದ್ದಳು. ಜೊತೆಗೆ ಸವದತ್ತಿ ಬಸ್ ಡಿಪೋಗೆ ವರ್ಗಾವಣೆ ಕೂಡ ಮಾಡಿಸಿಕೊಂಡು ಇಲ್ಲಿಯೇ ನೌಕರಿ ಶುರು ಮಾಡಿದ್ದಳು.
ತನ್ನಪಾಡಿಗೆ ತಾನು ಇದ್ದ ಕಾಶಮ್ಮಳನ್ನು ವರ್ಷದ ಹಿಂದೆ ಹುಡುಕಿಕೊಂಡು ಬಂದ ಗಂಡ ಸಂತೋಷ್ ಬಸ್ ನಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿ ಟಿಕೆಟ್ ಮಷೀನ್ ಒಡೆದು ಹಾಕಿ ಅಟ್ಟಹಾಸ ಮೆರೆದಿದ್ದ. ಇದೇ ದಿನ ಗಂಡನ ವಿರುದ್ದ ಪತ್ನಿ ಕೇಸ್ ಕೊಟ್ಟು ತನಗೆ ರಕ್ಷಣೆ ನೀಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಳು. ಆಗ ಆತನ ಮೇಲೆ ದೂರು ದಾಖಲಿಸಿ ಬುದ್ದಿ ಕಲಿಸುವ ಕೆಲಸ ಕೂಡ ಆಗಿತ್ತು. ಅಷ್ಟೇ ಅಲ್ಲದೇ ಆತನನ್ನು ಸಸ್ಪೆಂಡ್ ಕೂಡ ಮಾಡಲಾಗಿತ್ತು. ಇದಾದ ಬಳಿಕ ಮತ್ತೆ ನಿಪ್ಪಾಣಿ ಬಸವೇಶ್ವರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ಇತ್ತ ಬಸ್ ನಲ್ಲೇ ಗಂಡ ಹೊಡೆದಿದ್ದನ್ನ ಸಹಿಸಿಕೊಳ್ಳಲು ಆಗದ ಕಾಶಮ್ಮ ಬೈಲಹೊಂಗಲ ಕೋರ್ಟ್ ನಲ್ಲಿ ವಿಚ್ಛೇದನ ಅರ್ಜಿಯನ್ನ ಸಲ್ಲಿಸಿದ್ದಳು. ಅದು ಕೂಡ ಆರು ತಿಂಗಳ ಹಿಂದೆ ಆದೇಶ ಬಂದು ಕಾಶಮ್ಮಗೆ ವಿಚ್ಛೇದನ ಕೂಡ ಕೋರ್ಟ್ ನಲ್ಲಿ ಸಿಕ್ಕಿತ್ತು. ಇದಾದ ಬಳಿಕ ಕಂಗಾಲಾಗಿದ್ದ ಗಂಡ ಸಂತೋಷ್ 13ರಂದು ಮತ್ತೆ ಆಕೆಯನ್ನ ಹುಡುಕಿಕೊಂಡು ಮನೆಗೆ ಬಂದಿದ್ದ, ಈ ವೇಳೆ ಆಕೆಗೆ ಕೊನೆಯದಾಗಿ ಮಾತನಾಡಲು ಬಂದಿದ್ದೇನೆ ಅಂತಾ ಒಳ ಹೋಗಿದ್ದಾನೆ. ಬಳಿಕ ಮಾರಕಾಸ್ತ್ರದಿಂದ ಆಕೆಯ ಕತ್ತು ಕೊಯ್ದು, ಹೊಟ್ಟೆಗೆ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಕೊಲೆಯಾದ ನಾಲ್ಕು ದಿನದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಒಟ್ಟಿನಲ್ಲಿ ಜಾತಿ, ಕುಟುಂಬ ಮೀರಿ ಮದುವೆಯಾಗಿದ್ದ ಜೋಡಿ ಒಳ್ಳೆ ಕೆಲಸ ಕೂಡ ಸಿಕ್ಕಿತ್ತು ಎಂದು ಖುಷಿಯಾಗಿದ್ದರು. ಒಟ್ಟಿಗೆ ಬದುಕಿ ಬಾಳಬೇಕಿದ್ದವರು ಕ್ಷುಲ್ಲಕ ವಿಚಾರಕ್ಕೆ ಕಿತ್ತಾಡಿಕೊಂಡು ದೂರವಾಗಿದ್ದರು. ನೊಂದವರಿಗೆ ನ್ಯಾಯ ಕೊಡಿಸುವ ಸ್ಥಾನದಲ್ಲಿದ್ದ ಪೊಲೀಸಪ್ಪ ಕಡೆಗೆ ಪತ್ನಿಯನ್ನೇ ಕೊಂದು ಪರಾರಿಯಾಗಿದ್ದಾನೆ. ಮಗಳ ಸ್ಥಿತಿ ಕಂಡು ಕುಟುಂಬಸ್ಥರು ಶಾಕ್ ನಲ್ಲಿದ್ದು ತಮಗೆ ನ್ಯಾಯ ಬೇಕು ಅಂತಾ ಅಂಗಲಾಚುತ್ತಿದ್ದಾರೆ.



