ನೂರಕ್ಕಿಂತ ಹೆಚ್ಚು ಬಾಲಕರನ್ನು ಕೊಂದ ಪಾಕಿಸ್ತಾನದ ಶಿಶುಕಾಮಿ ಮತ್ತು ಸರಣಿ ಹಂತಕ ಇಕ್ಬಾಲ್ ಸಾವು ನಿಗೂಢವಾಗಿತ್ತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 13, 2023 | 7:44 AM

ಅದಾದ ಒಂದು ತಿಂಗಳ ನಂತರ ಅಂದರೆ ಡಿಸೆಂಬರ್ 30, 1999 ರಂದು ಇಕ್ಬಾಲ್ ಖುದ್ದು ಉರ್ದು ಭಾಷೆಯ ಡೈಲಿ ಜಂಗ್ ದಿನಪತ್ರಿಕೆಯ ಕಚೇರಿಯಲ್ಲಿ ಪ್ರತ್ಯಕ್ಷನಾದ. ಅಲ್ಲಿಯೇ ಅವನನ್ನು ಬಂಧಿಸಲಾಯಿತು. ನೇರವಾಗಿ ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ತನ್ನನ್ನು ಕೊಂದು ಹಾಕುತ್ತಾರೆ ಎಂಬ ಭಯದ ಕಾರಣ ತಾನು ದಿನಪತ್ರಿಕೆ ಕಚೇರಿಗೆ ಹೋಗಿ ಶರಣಾದೆ ಎಂದು ಅವನು ಹೇಳಿದ್ದ.

ನೂರಕ್ಕಿಂತ ಹೆಚ್ಚು ಬಾಲಕರನ್ನು ಕೊಂದ ಪಾಕಿಸ್ತಾನದ ಶಿಶುಕಾಮಿ ಮತ್ತು ಸರಣಿ ಹಂತಕ ಇಕ್ಬಾಲ್ ಸಾವು ನಿಗೂಢವಾಗಿತ್ತು!
ಜಾವೆದ್ ಇಕ್ಬಾಲ್, ಪಾಕಿಸ್ತಾನದ ಸರಣಿ ಹಂತಕ
Follow us on

ಪಾಕಿಸ್ತಾನದ ಜಾವೆದ್ ಇಕ್ಬಾಲ್ (Javed Iqbal) ಒಬ್ಬ ಶಿಶುಕಾಮಿ (pedophile) ಹಾಗೂ ಸರಣಿಹಂತಕನಾಗಿದ್ದ ಮತ್ತು ಅವನಿಗೆ ಬಲಿಯಾದ ಮಕ್ಕಳ ಸಂಖ್ಯೆ 100 ಕ್ಕೂ ಹೆಚ್ಚು! ಒಳ್ಳೆಯ ಮತ್ತು ಸ್ಥಿತಿವಂತ ಪೋಷಕರ 6 ಮಕ್ಕಳಲ್ಲಿ ಕೊನೆಯವನಾಗಿ ಲಾಹೋರ್ ನಲ್ಲಿ (Lahore) ಹುಟ್ಟಿದ ಜಾವೆದ್ ಇಕ್ಬಾಲ್ ಅದೇ ನಗರದ ಇಸ್ಲಾಮಿಯ ಹೈಸ್ಕೂಲ್ ನಲ್ಲಿ ಮೆಟ್ರಿಕ್ ಓದು ಪೂರ್ಣಗೊಳಿಸಿದ ಬಳಿಕ ಪದವಿ-ಪೂರ್ವ ಕಾಲೇಜಿಗೆ ಸೇರಿಕೊಂಡಾಗಲೇ ಅಪ್ಪ ನಡೆಸುತ್ತಿದ್ದ ವ್ಯಾಪಾರದಲ್ಲಿ ಆಸಕ್ತಿ ತೋರತೊಡಗಿದ್ದ. ನಂತರ 1978ರಲ್ಲಿ ತನ್ನದೇ ಆದ ಬಿಸಿನೆಸ್ ಆರಂಭಿಸಿದ. ಅವನಪ್ಪ ಮೊಹಮ್ಮದ್ ಅಲಿ ಮುಘಲ್, ಶಾದ್ಬಾಗ್ ಎಂಬಲ್ಲಿ ಎರಡು ಮನೆಗಳನ್ನು ಖರೀದಿಸಿ ಉಕ್ಕಿನ ವ್ಯಾಪಾರ ಮಾಡುತ್ತಿದ್ದ ಜಾವೆದ್ ಗೆ ಒಂದನ್ನು ನೀಡಿದ. ಅದೇ ಮನೆಯಲ್ಲಿ ಅವನು ಕೆಲ ಹುಡುಗರೊಂದಿಗೆ ಹಲವಾರು ವರ್ಷಗಳ ಕಾಲ ವಾಸವಾಗಿದ್ದ.

ಕೊಲೆಗಳು, ಬಂಧನ ಮತ್ತು ವಿಚಾರಣೆ

ಡಿಸೆಂಬರ್ 1999ರಲ್ಲಿ ಇಕ್ಬಾಲ್ ಪೊಲೀಸ್ ಮತ್ತು ಸ್ಥಳೀಯ ಪತ್ರಿಕೆಯೊಂದಕ್ಕೆ ಪತ್ರಗಳನ್ನು ಬರೆದು ತಾನು 6 ರಿಂದ 16 ವರ್ಷದೊಳಗಿನ 100 ಕ್ಕೂ ಹೆಚ್ಚು ಬಾಲಕರನ್ನು ಕೊಲೆ ಮಾಡಿರುವುದಾಗಿ ಹೇಳಿದ್ದ. ಬಾಲಕರನ್ನು ಉಸಿರುಗಟ್ಟಿಸಿ ಸಾಯಿಸಿದ ಬಳಿಕ ಅವರ ದೇಹಗಳನ್ನು ತುಂಡುಗಳಲ್ಲಿ ಕತ್ತರಿಸಿ ಆಮೇಲೆ ಅವುಗಳ ಮೇಲೆ ಹೈಡ್ರೊಕ್ಲೋರಿಕ್ ಌಸಿಡ್ ಸುರಿಯುತ್ತಿದ್ದೆ ಎಂದು ಅವನು ಪತ್ರದಲ್ಲಿ ಬರೆದಿದ್ದ. ದೇಹಗಳ ಅವಶೇಷಗಳನ್ನು ನದಿಯಲ್ಲಿ ಎಸೆಯತ್ತಿದ್ದ ಬಗ್ಗೆಯೂ ಅವನು ಪತ್ರದಲ್ಲಿ ನಮೂದಿಸಿದ್ದ. ಮನೆಯಿಂದ ಓಡಿಬಂದವರು, ಲಾಹೋರ್ ನಗರದ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ನಿರ್ಗತಿಕರು ತನ್ನ ಆಹುತಿಗಳಾಗಿದ್ದರು ಎಂದು ಅವನು ಹೇಳಿದ್ದ.

ಸಾಕ್ಷ್ಯಗಳು ಲಭ್ಯವಿದ್ದವು

ಅವನ ಮನೆಯನ್ನು ಪೊಲೀಸರು ಶೋಧಿಸಿದಾಗ ಅವರಿಗೆ ಗೋಡೆ ಮತ್ತು ನೆಲದ ಮೇಲೆ ರಕ್ತದ ಕಲೆಗಳು ಹಾಗೂ ಹುಡುಗರನ್ನು ಉಸಿರುಗಟ್ಟಿಸಿ ಸಾಯಿಸಲು ಬಳಸುತ್ತಿದ್ದ ಕಬ್ಬಿಣದ ಸರಪಳಿ ಸಿಕ್ಕವು. ತನಗೆ ಬಲಿಯಾದ ಅನೇಕ ಹುಡುಗರ ಫೋಟೋಗಳನ್ನು ಅವನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಇಟ್ಟಿದ್ದ. ಎಲ್ಲ ವಸ್ತುಗಳ ಮೇಲೆ ಅವನು ತನ್ನ ಕೈಬರಹದ ಲೇಬಲ್ ಗಳನ್ನು ಮೆತ್ತಿದ್ದ.
ದೇಹಗಳನ್ನು ಕರಗಿಸಲು ಅವನು ಬಳಸುತ್ತಿದ್ದ ಹೈಡ್ರೋಕ್ಲೋರಿಕ್ ಌಸಿಡ್ ಡಬ್ಬಗಳು ಸಹ ಇಕ್ಬಾಲ್ ಮನೆಯಲ್ಲಿ ಪೊಲೀಸರಿಗೆ ಸಿಕ್ಕವು. ಇವೆಲ್ಲವುಗಳ ಜೊತೆಗೆ ಕೆಲ ಮಕ್ಕಳ ದೇಹದ ಅವಶೇಷಗಳು ಸಹ ಪೊಲೀಸರಿಗೆ ಸಿಕ್ಕವು. ಅವುಗಳ ಮೇಲೆ, ‘ಪೊಲೀರಿಗೆ ಗೊತ್ತಾಗಲೆಂದು ಉದ್ದೇಶಪೂರ್ವಕವಾಗಿ ಅವಶೇಷಗಳನ್ನು ಅಲ್ಲೇ ಬಿಟ್ಟಿದ್ದೇನೆ,’ ಎಂದು ಇಕ್ಬಾಲ್ ಕೈಬರಹದಲ್ಲಿ ಬರೆದ ಲೇಬಲ್ ಗಳಿದ್ದವು.

ಇದನ್ನೂ ಓದಿ: Modi Jacket: ಹುಬ್ಬಳ್ಳಿಯಲ್ಲಿ ದೇಶದ ಅತೀ ಉದ್ದದ ಮೋದಿ ಜಾಕೆಟ್ ಅನಾವರಣ, ಹೇಗಿದೆ ನೋಡಿ

ಅಷ್ಟೆಲ್ಲ ಕೊಲೆಗಳನ್ನು ಮಾಡಿದ ನಂತರ ಅವನು ರಾವಿ ನದಿಯಲ್ಲಿ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನಂತೆ. ಆದರೆ ನದಿಯಲ್ಲಿ ಮುಳುಗುತ್ತಿದ್ದ ಅವನನ್ನು ಜಾಲಗಳ ಸಹಾಯದಿಂದ ಉಳಿಸಲಾಗಿತ್ತು. ಇಕ್ಬಾಲ್ ನನ್ನು ಅವತ್ತಿನ ಮಟ್ಟಿಗೆ ಪಾಕಿಸ್ತಾನದ ಅತಿದೊಡ್ಡ ಕ್ರಿಮಿನಲ್ ಎಂದು ಭಾವಿಸಲಾಗಿತ್ತು ಮತ್ತು ಪೊಲೀಸರು ಅವನ ಪತ್ತೆಗೆ ಮುಂದಾಗಿದ್ದರು.

ನಾಲ್ವರು ಸಹಚರರು 

ಇಕ್ಬಾಲ್ ಮನೆಯಲ್ಲಿದ್ದ ಮೂರು ಬೆಡ್ರೂಮ್ ಗಳನ್ನು ಶೇರ್ ಮಾಡಿಕೊಂಡಿದ್ದ ಅವನ ನಾಲ್ವರು ಸಹಚರರನ್ನು ಪೊಲೀಸರು ಸೊಹಾವಾ ಎಂಬಲ್ಲಿ ಬಂಧಿಸಿದರು. ಕೆಲವೇ ದಿನಗಳ ಬಳಿಕ ಪೊಲೀಸ್ ಕಸ್ಟಡಿಯಲ್ಲಿದ್ದ ನಾಲ್ವರ ಪೈಕಿ ಒಬ್ಬ ಕಿಟಕಿಯೊಂದರಿಂದ ಕೆಳಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡ.

ಅದಾದ ಒಂದು ತಿಂಗಳ ನಂತರ ಅಂದರೆ ಡಿಸೆಂಬರ್ 30, 1999 ರಂದು ಇಕ್ಬಾಲ್ ಖುದ್ದು ಉರ್ದು ಭಾಷೆಯ ಡೈಲಿ ಜಂಗ್ ದಿನಪತ್ರಿಕೆಯ ಕಚೇರಿಯಲ್ಲಿ ಪ್ರತ್ಯಕ್ಷನಾದ. ಅಲ್ಲಿಯೇ ಅವನನ್ನು ಬಂಧಿಸಲಾಯಿತು. ನೇರವಾಗಿ ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ತನ್ನನ್ನು ಕೊಂದು ಹಾಕುತ್ತಾರೆ ಎಂಬ ಭಯದ ಕಾರಣ ತಾನು ದಿನಪತ್ರಿಕೆ ಕಚೇರಿಗೆ ಹೋಗಿ ಶರಣಾದೆ ಎಂದು ಅವನು ಹೇಳಿದ್ದ.

ಕೈಬರಹ ತಾಳೆ

ಡೈರಿಯಲ್ಲಿ ತಾನು ನಡೆಸಿದ ಕೊಲೆಗಳ ಬಗ್ಗೆ ಅವನು ಬರೆದಿದ್ದ ವಿವರಣೆ ಮತ್ತು ಅವನ ಮನೆಯಲ್ಲಿ ಸಿಕ್ಕ ಲೇಬಲ್ ಗಳ ಮೇಲಿನ ಕೈಬರಹ ತಾಳೆಯಾದರೂ ಕೋರ್ಟ್ ನಲ್ಲಿ ತಾನು ನಿರಪರಾಧಿ ಎಂದು ಅವನು ವಾದಿಸಿದ. ಮನೆಬಿಟ್ಟು ಓಡಿಹೋಗುವ ಮಕ್ಕಳ ಗತಿ ಏನಾಗುತ್ತದೆ ಅಂತ ಅವರಲ್ಲಿ ಭಯ ಮೂಡಿಸಲು ಈ ಕಟ್ಟುಕತೆ ಮತ್ತು ಸುಳ್ಳಿನ ಕಂತೆಯನ್ನು ರಚಿಸಲಾಗಿದೆ ಎಂದು ಅವನು ನ್ಯಾಯಾಲಯದಲ್ಲಿ ಹೇಳಿದ. ಪೊಲೀಸರ ಒತ್ತಡದಿಂದಾಗಿ ಕೊಲೆ ಮಾಡಿದ್ದೇನೆ ಅಂತ ಹೇಳಬೇಕಾಯಿತು ಅಂತ ಅವನು ಹೇಳಿದ್ದ. ಅಮೇಲೆ ಪೊಲೀಸರು ನೂರಾರು ಸಾಕ್ಷ್ಯಗಳನ್ನು ಕೋರ್ಟ್ ನಲ್ಲಿ ಹಾಜರುಪಡಿಸಿದರು, ಅವರೆಲ್ಲ ಇಕ್ಬಾಲ್ ಮತ್ತು ಅವನ ಸಹಚರರ ವಿರುದ್ಧ ಸಾಕ್ಷ್ಯ ನುಡಿದರು. ಅಂತಿಮವಾಗಿ ಅವರೆಲ್ಲ ಅಪರಾಧಿಗಳು ಅಂತ ಸಾಬೀತಾಯಿತು.

ಇದನ್ನೂ ಓದಿ: Afghanistan ತಾಲಿಬಾನ್ ವಿದೇಶಾಂಗ ಸಚಿವಾಲಯದ ಪ್ರವೇಶ ದ್ವಾರದಲ್ಲಿ ಬಾಂಬ್ ಸ್ಫೋಟ; 3 ಸಾವು

ಸಾರ್ವಜನಿಕವಾಗಿ ಉಸಿರುಗಟ್ಟಿಸಿ ಸಾಯಿಸಬೇಕು

ತನ್ನ ಬೇಟೆಗಳನ್ನು ಅರಸಿಕೊಂಡು ಓಡಾಡುತ್ತಿದ್ದ ಲಾಹೋರ್ ನಗರದ ಚೌಕವೊಂದರಲ್ಲೇ ಇಕ್ಬಾಲ್ ನನ್ನು ಸಾರ್ವಜನಿಕವಾಗಿ ಉಸಿರುಗಟ್ಟಿಸಿ ಸಾಯಿಸಬೇಕೆಂದು ತೀರ್ಪು ನೀಡಿದ ನ್ಯಾಯಾಧೀಶರು, ಕಿಸಾಸ್ ನ ಕಾನೂನಾತ್ಮಕ ಪರಿಕಲ್ಪನೆ ಶರಿಯಾದ ಅಡಿಯಲ್ಲಿ ಉಲ್ಲೇಖವಾಗಿರುವಂತೆ (ಕಣ್ಣಿನ ಬದಲಿಗೆ ಕಣ್ಣು) ಹಾಗೆ ಅವನ ದೇಹವನ್ನು 100 ತುಂಡುಗಳಲ್ಲಿ ಕತ್ತರಿಸಿ ಌಸಿಡ್ ನಲ್ಲಿ ಕರಗಿಸಬೇಕೆಂದು ಹೇಳಿದರು.

ಹತ್ಯೆಗಳಲ್ಲಿ ಇಕ್ಬಾಲ್ ಗೆ ನೆರವಾದ 17-ವರ್ಷದ ಸಾಜಿದ್ ಅಹ್ಮದ್ ಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.

ಮಾಮದ್ ನದೀಮ್ ಹೆಸರಿನ 15-ವರ್ಷದ ಬಾಲಕ 13 ಕೊಲೆಗಳಲ್ಲಿ ಪಾಲುದಾರನಾಗಿದ್ದರಿಂದ ಅವನಿಗೆ 182-ವರ್ಷ (ಪ್ರತಿ ಕೊಲೆಗೆ 14 ವರ್ಷಗಳಂತೆ) ಸೆರೆವಾಸದ ಶಿಕ್ಷೆ ವಿಧಿಸಲಾಯಿತು.

13-ವರ್ಷದ ಮಾಮದ್ ಸಬಿರ್ ಗೆ 63-ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಇಕ್ಬಾಲ್ ಆತ್ಮಹತ್ಯೆ ಮಾಡಿಕೊಂಡನೆ?

ಅದರೆ, ಅಕ್ಟೋಬರ್ 8, 2001 ರಂದು ಇಕ್ಬಾಲ್ ಮತ್ತು ಅವನ ಸಹಚರ ಸಾಜಿದ್ ಕೋಟ್ ಲಖ್ಪತ್ ಕಾರಾಗೃಹದಲ್ಲಿ ಬೆಡ್ ಶೀಟ್ ಗಳನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡರು. ಆದರೆ ಅಸಲಿಗೆ ಅವರ ಕೊಲೆ ಮಾಡಲಾಯಿತೆಂದು ಹೇಳಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ ಸಾಯುವ ಮೊದಲು ಅವರನ್ನು ಭಯಂಕಾರವಾಗಿ ಹೊಡೆಯಲಾಗಿತ್ತು.

ಪಾಕಿಸ್ತಾನದ ಇತಿಹಾಸದಲ್ಲೇ ಇಕ್ಬಾಲ್ ನಷ್ಟು ಘೋರ, ಕ್ರೂರ ಮತ್ತು ಹಿಂಸಾವಿನೋದಿ ಸರಣಿ ಹಂತಕ ಮತ್ತೊಬ್ಬನಿಲ್ಲ ಎಂದು ಹೇಳಲಾಗುತ್ತದೆ.

ಮತ್ತಷ್ಟು ಕ್ರೈಮ್ ಕತೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ