ಹಸಿರು ಸಿಂಹದ ಮೇಲೆ ಪಾಕ್ ಧ್ವಜ: ಪ್ರಶ್ನಿಸಿದ ಯುವಕನ ಮೇಲೆ 20 ಜನರಿಂದ ಹಲ್ಲೆ
ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಹಸಿರು ಸಿಂಹದ ಮೇಲೆ ಪಾಕ್ ಧ್ವಜ ಮಾದರಿಯನ್ನು ಮಾಡಿ ಹರಿಬಿಟ್ಟಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆ 20 ಜನರ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆದಿ ಘಟನೆ ವಿಜಯಪುರದಲ್ಲಿ ನಡೆದಿದೆ. ಹಲ್ಲೆಕೋರ ಅಫ್ಜಲ್ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ: ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಹಸಿರು ಸಿಂಹದ ಮೇಲೆ ಪಾಕ್ ಧ್ವಜ ಮಾದರಿಯನ್ನು ಮಾಡಿ ಹರಿಬಿಟ್ಟಿದ್ದನ್ನು ಪ್ರಶ್ನಿಸಿದ ಯುವಕನನ್ನು ಅಪಹರ ಮಾಡಿದ 20 ಮಂದಿ ಅನ್ಯಕೋಮಿನ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಜಿಲ್ಲೆ ತಿಕೋಟಾ ತಾಲೂಕಿನಲ್ಲಿ ನಡೆದಿದೆ. ಜಾತ್ರೆಗಳಲ್ಲಿ ಭಾರ ಎತ್ತುವ ಸಾಹಸ ಮಾಡುತ್ತಿದ್ದ ಅಫ್ಜಲ್ ಖಾನ್ ಎಂಬಾತ ತನ್ನ ಸಹಚರರೊಂದಿಗೆ ಸೇರಿಕೊಂಡು ಉಮೇಶ ಎಂಬ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪ್ರಕರಣ ಸಂಬಂಧ ಅಫ್ಜಲ್ ಖಾನ್ನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರಿಸಿದ್ದಾರೆ.
ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಉಮೇಶ ಹರಗಿ (26) ಮತ್ತು ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ತುರ್ಕ ಆಸಂಗಿ ಗ್ರಾಮದ ಅಫ್ಜಲ್ ಖಾನ್ ಎಂಬವರು ಜಾತ್ರೆಯಲ್ಲಿ ಭಾರ ಎತ್ತುವ ಸಾಹಸದಲ್ಲಿ ತೊಡಗಿಕೊಂಡಿದ್ದರಿಂದ ಪರಸ್ಪರ ಪರಿಚಯಸ್ಥರು. ಆದರೆ ಅಫ್ಜಲ್ ಖಾನ್ಗೆ ಜಾತ್ರೆಯಲ್ಲಿ ಭಾರ ಎತ್ತುವ ಸಾಹಸದ ಹವ್ಯಾಸದ ಜೊತೆಗೆ ಪಾಕ್ ಮೇಲೆ ಪ್ರೇಮವೂ ಇತ್ತು. ಅದರಂತೆ ಅಫ್ಜಲ್ ಖಾನ್, ಹಸಿರು ಬಣ್ಣದ ಸಿಂದಹ ಮೇಲೆ ಅರ್ಧಚಂದ್ರ ಹಾಗೂ ನಕ್ಷತ್ರವಿರುವ ಫೋಟೋವನ್ನು ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಹಂಚಿಕೊಂಡಿದ್ದಾನೆ. ಇದನ್ನು ಗಮನಿಸಿದ ಉಮೇಶ ಪರಚಿತದ ಮೇರೆಗೆ ಅಫ್ಜಲ್ ಖಾನ್ನನ್ನು ಪ್ರಶ್ನಿಸಿದ್ದಾನೆ.
ತನ್ನನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಅಫ್ಜಲ್ ಖಾನ್, ತನ್ನ 20 ಮಂದಿ ಸಹಚರರೊಂದಿಗೆ ಸೇರಿಕೊಂಡು ಆಗಸ್ಟ್ 22ರಂದು ಉಮೇಶನನ್ನು ತಿಕೋಟಾ ತಾಲೂಕಿನ ಘೋಷಸಗಿ ಗ್ರಾಮದ ಬಳಿ ಅಪಹರಣ ಮಾಡಿ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ತುರ್ಕ ಆಸಂಗಿ ಗ್ರಾಮದ ಬಳಿ ಎಳೆದೊಯ್ದಿದ್ದಾರೆ. ಬಳಿಕ ಉಮೇಶನ ಮೇಲೆ ಇಪ್ಪತ್ತು ಜನರ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ನಂತರ “ಪಾಕಿಸ್ಥಾನ ಪರ ಪೋಟೋ ಹಾಕಿದ್ದೇನೆ ಎನ್ ಮಾಡ್ತೀಯಾ?” ಎಂದು ಅಫ್ಜಲ್ ಖಾನ್ ಪ್ರಶ್ನಿಸಿ ಬೆದರಿಕೆ ಹಾಕಿದ್ದಾನೆ.
ದುಷ್ಕರ್ಮಿಗಳ ಹಲ್ಲೆಯಿಂದ ಉಮೇಶ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದಾನೆ. ಈ ವೇಳೆ ಅಫ್ಜಲ್ ಖಾನ್ ಉಮೇಶನ ಸ್ನೇಹಿತರಿಗೆ ಕರೆ ಮಾಡಿ ಉಮೇಶನನ್ನು ಕರೆದುಕೊಂಡು ಹೋಗಿ ಎಂದು ಹೇಳಿ ಸಹಚರರೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಉಮೇಶನನ್ನು ತುರ್ಕ ಆಸಂಗಿಯಿಂದ ಕರೆತಂದ ಸ್ನೇಹಿತರು ವಿಜಯಪುರದ ಜಿಲ್ಲಾಸ್ಪತ್ರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲ್ಲೆಯಿಂದ ಉಮೇಶನ ತಲೆ, ಕೈ ಕಾಲು, ಎದೆ ಭಾಗ ಬೆನ್ನಿಗೆ ತೀವ್ರ ಗಾಯಗಳಾಗಿದ್ದು, ಕೆಲವೆಡೆ ವೈದ್ಯರು ಹೊಲಿಗೆ ಹಾಕಿದ್ದಾರೆ. ಪ್ರಕರಣ ಸಂಬಂಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಯ ಪ್ರಮುಖ ಆರೋಪಿ ಅಫ್ಜಲ್ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ಮುಂದುವರಿದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 am, Sat, 27 August 22