ನೆಲಮಂಗಲ: ಹೂ ಮಾರುವ ನೆಪದಲ್ಲಿ ಐಷಾರಾಮಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಕಳ್ಳರ ಗುಂಪೊಂದು ಸದ್ಯ ಪೊಲೀಸರಿಗೆ ಸಿಕ್ಕಿ ಬಿದ್ದಿದೆ. ಸಿನಿಮಾ ಶೈಲಿಯಲ್ಲಿಯೇ ಕಳ್ಳರು ಕೃತ್ಯಗಳನ್ನು ಎಸೆದಿದ್ದು, ಬರೋಬ್ಬರಿ 50 ಕ್ಕೂ ಹೆಚ್ಚು ಕಳ್ಳತನವನ್ನು ಈ ಗುಂಪು ನಡೆಸಿದೆ.
ಹೂ ಬೇಕಾ ಹೂವ ಎಂದು ರಸ್ತೆ ರಸ್ತೆಗಳಲ್ಲಿ ಓಡಾಡುತ್ತಿದ್ದ ಮಹಿಳೆ ಐಶಾರಾಮಿ ಮನೆಗಳನ್ನು ಗುರುತಿಸಿ ತನ್ನ ಗುಂಪಿಗೆ ಮನೆಗಳ್ಳತನ ಮಾಡಲು ಸಹಾಯ ಮಾಡುತ್ತಿದ್ದಳು. ಈ ರೀತಿಯಾಗಿಯೇ ಜನವರಿ ತಿಂಗಳ 14ನೇ ತಾರೀಖಿನಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಅರಿಶಿನಕುಂಟೆಯ ಬಡಾವಣೆಯಲ್ಲಿ ಉದ್ಯಮಿ ರವಿ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ವೇಳೆ ಈ ಗ್ಯಾಂಗ್ ಸಿಕ್ಕಿಬಿದ್ದಿದೆ.
ಕಲುಬುರ್ಗಿ ಜಿಲ್ಲೆ ಚಿತ್ತಾಪುರ ಮೂಲದ ಕಲ್ಯಾಣ್ ಹಾಗೂ ಬಸವರಾಜು, ಬೆಂಗಳೂರಿನ ಬನಶಂಕರಿ ಮೂಲದ ಶಿವಾನಂದ ಹಾಗೂ ಉಷಾರನ್ನು ಸದ್ಯ ಪೊಲೀಸರು ಬಂಧಿಸಿದ್ದು, ಆರೋಪಿ ಉಷಾ ಕಳೆದ ಕೆಲ ದಿನಗಳಿಂದ ಕಳ್ಳತನ ಮಾಡಲು ಹೂ ಮಾರುವ ಸೋಗಿನಲ್ಲಿ ಮನೆಯನ್ನ ಹುಡುಕುತ್ತಿದ್ದಳು. ಯಾವ ಮನೆಯ ಬಾಗಿಲು ಮೂರ್ನಾಲ್ಕು ದಿನದಿಂದ ತೆಗೆದಿರುತ್ತಿರಲಿಲ್ಲ. ಯಾವ ಮನೆಯ ಮುಂದೆ ದಿನಪತ್ರಿಕೆ ಬಳಸದೇ ಬಿದ್ದಿರುತ್ತದೇ, ಯಾವ ಮನೆಯ ಮುಂದೆ ಕಸ ಗುಡಿಸಿರುವುದಿಲ್ಲ ಎನ್ನುವುದನ್ನು ಗಮನಿಸಿ ಈ ಮಾಹಿತಿಯನ್ನ ಆರೋಪಿಗಳಾದ ಕಲ್ಯಾಣ್, ಬಸವರಾಜು ಹಾಗೂ ಶಿವಾನಂದಗೆ ತಿಳಿಸುತ್ತಿದ್ದಳು.
ಇನ್ನೂ ಉಷಾ ನೀಡಿದ ಮಾಹಿತಿ ಆದರಿಸಿ ಕಲ್ಯಾಣ್ ಹಾಗೂ ಬಸವರಾಜು ಮನೆ ಬಾಗಿಲು ಮುರಿದು ಒಳಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲಾ ದೋಚುತ್ತಿದ್ದರು, ಮತ್ತೊಬ್ಬ ಆರೋಪಿ ಶಿವಕುಮಾರ್ ಮನೆಯ ಹೊರಗೆ ನಿಂತು ಯಾರಾದರು ಬರ್ತಾರ ಎನ್ನುವುದನ್ನ ಗಮನಿಸುತ್ತಿದ್ದ.
ಇದೇ ರೀತಿ ನೆಲಮಂಗಲದಲ್ಲಿ ಕಳ್ಳತನ ಮಾಡುತ್ತಿದ್ದಾಗ ಮಾಲಿಕ ರವಿ ಮನೆ ಒಳಗೆ ಬಂದಿದ್ದು, ಮನೆಯ ಹೊರಗಿದ್ದ ಶಿವಾನಂದ ಪರಾರಿಯಾಗಿದ್ದಾನೆ. ಇನ್ನು ಮನೆ ಒಳಗೆ ಕಳ್ಳತನ ಮಾಡುತ್ತಿದ್ದ ಬಸವರಾಜು ಕೈಗೆ ಸಿಕ್ಕದ್ದನ್ನೆಲ್ಲ ದೋಚಿಕೊಂಡು ಮನೆಯಿಂದ ಪರಾರಿಯಾಗಿದ್ದ, ಆದರೆ ಕುಡಿತದ ಮತ್ತಿನಲ್ಲಿದ್ದ ಕಲ್ಯಾಣ್ ಮನೆಯ ಫ್ರಿಡ್ಜ್‌ನಲ್ಲಿದ್ದ ಆಪಲ್ ತಿನ್ನುತ್ತಾ ಕುಳಿತ್ತಿದ್ದನ್ನು ಕಂಡು ಮನೆ ಮಾಲೀಕ ರವಿ ನೆಲಮಂಗಲ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ನಗರ ಪೊಲೀಸರು ಪರಾರಿಯಾಗಿದ್ದ ಆರೋಪಿಗಳಾದ ಕಲ್ಯಾಣ್, ಶಿವಾನಂದ, ಉಷಾಳನ್ನು ಬಂಧಿಸಿ 17 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆದಿದ್ದಾರೆ.
ಹೆಚ್ಚಿನ ತನಿಖೆ ನಡೆಸಿದಾಗ ಆರೋಪಿ ಕಲ್ಯಾಣ್ ಮೇಲೆ ರಾಜ್ಯದ ಉದ್ದಗಲಕ್ಕೂ 50ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ ಎಂದು ತಿಳಿದುಬಂದಿದೆ. ಒಟ್ಟಾರೆ ಹೂ ಮಾರೋ ನೆಪದಲ್ಲಿ ಒಂಟಿ ಮನೆಗಳ ನಿವಾಸಿಗಳಿಗೆ ಹೂ ಮುಡಿಸಲು ಹೋಗಿ ಕಳ್ಳರು ಸಿಕ್ಕಿಬಿದ್ದಿದ್ದಾರೆ.ಸದ್ಯ ಕಳ್ಳತನವನ್ನೇ ಫುಲ್ ಟೈಂ ಬ್ಯುಸಿನೆಸ್ ಮಾಡಿಕೊಂಡಿದ್ದ ಆರೋಪಿ ಕಲ್ಯಾಣ್ ಜೊತೆಗೆ ಮೂರು ಜನ ಆರೋಪಿಗಳು ಜೈಲಿನ ಅತಿಥಿಗಳಾಗಿದ್ದಾರೆ.
ಸ್ಪೀಕರ್ ಕಡೆಯಿಂದ ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ.. ವಂಚನೆ ಮಾಡಿದ್ದ ಆಸಾಮಿ ಅಂದರ್
Published On - 1:33 pm, Thu, 28 January 21