545 PSI Recruitment Scam: ಪಿಎಸ್​ಐ ಹಗರಣದ ಪ್ರಮುಖ ಆರೋಪಿಗೆ ಜಾಮೀನು

ಪೊಲೀಸ್ ಸಬ್​ಇನ್​ಸ್ಪೆಕ್ಟರ್ ಹುದ್ದೆ ನೇಮಕಾತಿಯಲ್ಲಿ ನಡೆದ ಹಗರಣ ಸಂಬಂಧ ಪ್ರಮುಖ ಆರೋಪಿ ಹಾಗೂ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಅಭ್ಯರ್ಥಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

545 PSI Recruitment Scam: ಪಿಎಸ್​ಐ ಹಗರಣದ ಪ್ರಮುಖ ಆರೋಪಿಗೆ ಜಾಮೀನು
ಸಾಂಧರ್ಬಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Nov 18, 2022 | 12:41 PM

ಬೆಂಗಳೂರು: 545 ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ಪ್ರಕರಣದ ಮೊದಲ ಆರೋಪಿಗೆ ಹಾಗೂ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಅಭ್ಯರ್ಥಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪಿಎಸ್​ಐ ಹಗರಣದ ಎ1 ಜಾಗೃತ್ ಹಾಗೂ ಮಹಿಳಾ ಕೋಟಾದಲ್ಲಿ ಪ್ರಥಮ ಱಂಕ್ ಪಡೆದಿದ್ದ ರಚನಾಗೆ ಜಾಮೀನು ಸಿಕ್ಕಿದೆ. ಆರೋಪಿಗಳ ಪರ ವಕೀಲ ಶ್ಯಾಮ್​ಸುಂದರ್​ ಅವರು ವಾದ ಮಾಡಿದರು. 545 ಪಿಎಸ್​ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ (PSI Recruitment Scam) ಸಂಬಂಧಿಸಿದಂತೆ 17ನೇ ಆರೋಪಿ ರಚನಾಳನ್ನು ಸಿಐಡಿ (CID) ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ ಪಡೆದಿತ್ತು. ನೇಮಕಾತಿಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ರಚನಾ ಹನುಮಂತ್ ಮೊದಲ ರ‍್ಯಾಂಕ್ ಪಡೆದಿದ್ದಳು.

ಅಕ್ರಮ ಪ್ರಕರಣ ಬಯಲಾಗುತ್ತಿದ್ದಂತೆ ರಚನಾ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಸಿಐಡಿ ತನಿಖೆಯಲ್ಲಿ ರಚನಾ 30 ಲಕ್ಷ ನೀಡಿದ್ದರೆಂಬ ಮಾಹಿತಿ ಬಹಿರಂಗವಾಗಿತ್ತು. ಈ ಸಂಬಂಧ 22 ಅಭ್ಯರ್ಥಿಗಳ ವಿರುದ್ಧ ಸಿಐಡಿ ಡಿವೈಎಸ್​ಪಿ ನರಸಿಂಹಮೂರ್ತಿ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಾಗಿತ್ತು. ರಚನಾ ಸರ್ಕಾರದ ಮರುಪರಿಕ್ಷಾ ಆದೇಶದ ವಿರುದ್ಧವೂ ಪ್ರತಿಭಟನೆಯಲ್ಲಿಯೂ ಭಾಗಿಯಾಗಿದ್ದಳು. ಯಾವಾಗ ತನ್ನ ವಿರುದ್ಧ ಎಫ್ಐಆರ್ ದಾಖಲಾಯ್ತೋ ಅಂದಿನಿಂದ ರಚನಾ ನಾಪತ್ತೆಯಾಗಿದ್ದಳು.

ಇದನ್ನೂ ಓದಿ: Accident: ಮುಂಬೈ-ಪುಣೆ ಎಕ್ಸ್​ಪ್ರೆಸ್​ವೇಯಲ್ಲಿ ಭೀಕರ ಅಪಘಾತ; ಐವರು ಸಾವು, 3 ಜನರ ಸ್ಥಿತಿ ಗಂಭೀರ

ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಎಸ್.ಜಾಗೃತ್​​ನ್ನು ಸಿಐಡಿ  ಡಿವೈಎಸ್​ಪಿ ಬಿ.ಕೆ.ಶೇಖರ್ ತಂಡ ಚನ್ನಪಟ್ಟಣದಲ್ಲಿ ಬಂಧಿಸಿತ್ತು. ಎಸ್.ಜಾಗೃತ್ PSI ಪರೀಕ್ಷೆಯಲ್ಲಿ 4ನೇ ರ್ಯಾಂಕ್​​ ಬಂದಿದ್ದನು. ಎಸ್.ಜಾಗೃತ್ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಫ್​​ಐಆರ್ ಹಾಕಿರುವುದನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್​ ಮೆಟ್ಟಿಲೇರಿದ್ದ ನಾಲ್ವರು ಅಭ್ಯರ್ಥಿಗಳಲ್ಲಿ ಈ ಜಾಗೃತನೂ ಒಬ್ಬನಾಗಿದ್ದ.

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ನಡೆದ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆ ಹರಿದಿರುವುದು ತನಿಖೆ ವೇಳೆ ದೃಢವಾಗಿತ್ತು. ತನಿಖೆ ಹೆಚ್ಚಾದಂತೆ ಒಂದೊಂದು ಅಕ್ರಮ ಬೆಳಕಿಗೆ ಬರುತ್ತಿದೆ. ಬ್ಲೂಟೂತ್ ಬಳಕೆ ಮಾಡಿ ಎಕ್ಸಾಂ ಬರೆದಿರುವುದು, ಒಎಂಆರ್ ಪ್ರತಿಯನ್ನ ಎಕ್ಸಾಂ ಸೆಂಟರ್​ನಲ್ಲಿ ತಿದ್ದುಪಡಿ ಮಾಡಿರುವುದು, ನೇಮಕಾತಿ ವಿಭಾಗದಲ್ಲಿ ಒಎಂಆರ್ ಪ್ರತಿಯಲ್ಲಿ ಅಕ್ರಮ ತಿದ್ದುಪಡಿ ಮಾಡಿರುವುದು, ಸೀಟಿಂಗ್ ವ್ಯವಸ್ಥೆ ಮಾಡಿ ಅಕ್ರಮ ಎಸಗಿ ಬರೆದಿರುವುದು, ಸಂಪೂರ್ಣ ಹುದ್ದೆಯನ್ನು ಡೀಲ್ ಮಾಡಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Fri, 18 November 22