ರಾಮನಗರ: 500 ರೂಪಾಯಿಗೆ ಯುವಕನ ಕೊಲೆ; ಮಲಗೋದಕ್ಕೆ ಜಾಗ ಕೊಟ್ಟು, ಹತ್ಯೆ ಮಾಡಿದವ ಅಂದರ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 06, 2024 | 10:08 PM

ಆತ ಕೆಲಸಕ್ಕಾಗಿ ದೂರದ ರಾಜ್ಯ ಬಿಟ್ಟು ರಾಮನಗರಕ್ಕೆ ಬಂದಿದ್ದ, ಉಳಿದುಕೊಳ್ಳಲು ಜಾಗ ಇಲ್ಲದ ಕಾರಣ ರಾತ್ರಿ ಮಲಗೋಕೆ ಜಾಗ ಹುಡುಕಾಡಿದ್ದ, ಅಲ್ಲೇ ಇದ್ದ ಒಬ್ಬ ಕ್ರೂರಿ ಬಾ ನನ್ನ ಮನೆಗೆ ಆರಾಮಾಗಿ ಮಲಗುವಂತೆ ಎಂದು ಹೇಳಿ ಕೇವಲ 500 ರೂಪಾಯಿಗೆ ಕೊಲೆನೇ ಮಾಡಿಬಿಟ್ಟಿದ್ದಾನೆ.

ರಾಮನಗರ: 500 ರೂಪಾಯಿಗೆ ಯುವಕನ ಕೊಲೆ; ಮಲಗೋದಕ್ಕೆ ಜಾಗ ಕೊಟ್ಟು, ಹತ್ಯೆ ಮಾಡಿದವ ಅಂದರ್
ಆರೋಪಿ ಸ್ವಾಮಿ
Follow us on

ರಾಮನಗರ, ಮಾ.06: ಕಳೆದ‌‌ ತಿಂಗಳ ಏಳನೇ ತಾರಿಖಿನಂದು ಕನಕಪುರ-ಚನ್ನಪಟ್ಟಣ ಮಾರ್ಗ ಮಧ್ಯೆ ಸಾತನೂರು ಕ್ರಾಸ್ ಬಳಿ ಯುವಕನೊಬ್ಬನನ್ನು ತಲೆ ಮೇಲೆ‌ ಕಲ್ಲು ಹಾಕಿ‌ ಬರ್ಬರವಾಗಿ ಹತ್ಯೆ(Murder) ಮಾಡಲಾಗಿತ್ತು.  ಶವ ಪರೀಕ್ಷೆ ಮಾಡಿದ ಬಳಿಕ ಕೊಲೆಯಾದ ಯುವಕ ಬಿಹಾರ ಮೂಲದ ಮೂವತ್ತು ವರ್ಷದ ಸಂಜಿತ್ ಕುಮಾರ್ ಠಾಕೂರ್ ( 30) ಎಂಬ ವಿಚಾರ ತಿಳಿದಿತ್ತು.‌ ಮೆಲ್ಬೋಟಕ್ಕೆ ಯಾವುದೋ ಹಳೇ ದ್ವೇಷ ಇರಬಹುದು ಎಂದು ಅಂದುಕೊಂಡಿದ್ದ‌ ಪೊಲೀಸರಿಗೆ ಅಸಲಿ ವಿಚಾರ ತಿಳಿದಾಗ ಕೊಲೆಗಾರ ಮನಸ್ಥಿತಿ ಯ ಬಗ್ಗೆ ಎಲ್ಲರೂ ದಂಗಾಗಿ ಹೋಗಿದ್ದಾರೆ. ಕೇವಲ 5 ನೂರು ರೂಪಾಯಿಗಾಗಿ‌ ಬಿಹಾರ ಮೂಲದ ಯುವಕನನ್ನ ಹತ್ಯೆ ಮಾಡಲಾಗಿತ್ತು.

ಸಂಜಿತ್ ಠಾಕೂರ್ ಕೆಲ ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ರಾಮನಗರಕ್ಕೆ ಬಂದಿದ್ದ. ತನ್ನ ಬೇರೆ ಗೆಳೆಯರೆಲ್ಲ ಚನ್ನಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಹಿನ್ನಲೆ ಚನ್ನಪಟ್ಟಣದಲ್ಲಿಯೇ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಇತ ಮನೆ ಬಾಡಿಗೆ ಪಡೆಯುವಷ್ಟೂ ದುಡ್ಡಿಲ್ಲದ ಕಾರಣ ಫುಟ್ ಪಾತ್ ಮೇಲೆ ಮಲಗುತ್ತಿದ್ದ. ಕಳೆದ ತಿಂಗಳು 6ನೇ ತಾರೀಖು ಎಂದಿನಂತೆ ಕೆಲಸ ಮುಗಿಸಿಕೊಂಡು ಬಾರ್​ಶಾಪ್​ಗೆ ತೆರಳಿ ಎಣ್ಣೆ ಹಾಕಿ ವಾಪಾಸ್ ಬರುವಾಗ ಸ್ವಾಮಿ ಎಂಬುವವನು ಸಂಜಿತ್​ಗೆ ಮಾತನಾಡಿಸಿದ್ದಾನೆ.‌ ಬೇರೆ ರಾಜ್ಯದವನು ಎಂದು ತಿಳಿದಿದ್ದ ಸ್ವಾಮಿ, ಅರ್ಧಂಬರ್ಧ ಹಿಂದಿಯಲ್ಲಿ ಮಾತನಾಡಿಸಿ ಗೆಳೆತನ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ:ಪ್ರೀತಿಸಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯ ಕತ್ತು ಸೀಳಿ ಹತ್ಯೆ: ಬಳಿಕ ರೈಲಿಗೆ ತಲೆ ಕೊಟ್ಟ ಯುವಕ

ಸ್ವಾಮಿಯನ್ನು ನಂಬಿದ ಸಂಜಿತ ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಮಲಗಲು ಜಾಗವಿಲ್ಲ, ನಿನ್ನ ಮನೆಯಲ್ಲಿ ಏನಾದರೂ ಮಲಗಬಹುದಾ ಎಂದಿದ್ದಾನೆ.‌ ಅದಕ್ಕೆ ತಲೆ ಅಲ್ಲಾಡಿಸಿದ ಸ್ವಾಮಿ, ಸರಿ ಆದರೆ ನನಗೆ ಮಧ್ಯವನ್ನ ಕೊಡಿಸಬೇಕು ಎಂದು ಹೇಳಿ,‌  ಸಾತನೂರು ಕ್ರಾಸ್ ಬಳಿ ಕರೆದುಕೊಂಡು ಹೋಗಿದ್ದಾನೆ.‌ ಇದೇ ನನ್ ಜಾಗ ಆರಾಮಾಗಿ ಮಲಗು ಎಂದು ಹೇಳಿ, ಸಂಜಿತ್ ನಿದ್ದೆ ಹತ್ತಿದ ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಜೇಬಿನಲ್ಲಿದ್ದ 5 ರೂಪಾಯಿ ಎತ್ತಿಕೊಂಡು ಪರಾರಿ ಆಗಿದ್ದಾನೆ.

ಪ್ರಕರಣವನ್ನು ದಾಖಲಿಸಿಕೊಂಡಿದ್ದ ಚನ್ನಪಟ್ಟಣ ಟೌನ್ ಪೊಲೀಸರು, ಕೊಲೆಗಡುಕನನ್ನು ಹುಡುಕುತ್ತಿದ್ದಾಗ, ಬಾರ್ ಶಾಪ್​ನ ಸಿಸಿಟಿವಿಯಲ್ಲಿ ಆರೋಪಿ ಸ್ವಾಮಿ ಸಂಜಿತ್‌ನನ್ನು ಕರೆದುಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು.‌ಇದೇ ಪ್ರೂಫ್​ನ್ನು ಇಟ್ಟುಕೊಂಡು ಸ್ವಾಮಿಯ ಬಂಧನಕ್ಕೆ ಬಲೆ ಬೀಸಿದ ಚನ್ನಪಟ್ಟಣ ಪೊಲೀಸರು, ಕೊನೆಗೂ ಆರೋಪಿ ಸ್ವಾಮಿಯನ್ನ ಹಿಡಿದು ಜೈಲಿಗಟ್ಟಿದ್ದಾರೆ.‌ ಹಲವು ಕಳುವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸ್ವಾಮಿ, ಸಂಜಿತ್ ಜೇಬಿನಲ್ಲಿದ್ದ ಐದು ನೂರು ಹಣವನ್ನು ತೆಗದುಕೊಳ್ಳುವ ಕಾರಣಕ್ಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:07 pm, Wed, 6 March 24